ವಚನ ಸಾಹಿತ್ಯ ಭಕ್ತಿ ಸಾರುವ ಸಾಹಿತ್ಯವಾಗಿದೆ; ಸಿ.ಟಿ. ರವಿ

oplus_2
oplus_2
Published on

ರಾಣೆಬೆನ್ನೂರ: ವಚನ ಸಾಹಿತ್ಯ ಬಂಡಾಯ ಸಾಹಿತ್ಯವಲ್ಲ. ಬಂಡಾಯ ಸಾಹಿತ್ಯ ತಲೆ ಕೆಡಿಸುವ ಸಾಹಿತ್ಯವಾಗಿದೆ. ಆದರೆ ವಚನ ಸಾಹಿತ್ಯ ಭಕ್ತಿ ಸಾರುವ ಹಾಗೂ ಸಂಸ್ಕಾರ ಬಿತ್ತುವ ಸಾಹಿತ್ಯವಾಗಿದೆ ಎಂದು ವಿಧಾನ ಪರಿಷತ್​ ಸದಸ್ಯ ಸಿ.ಟಿ. ರವಿ ಹೇಳಿದರು.
ಪರಿವರ್ತನ ರಾಣೆಬೆನ್ನೂರ ವತಿಯಿಂದ ನಗರದ ವರ್ತಕರ ಭವನದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಕರ್ನಾಟಕ ವೈಭವ ವಚನ ದರ್ಶನ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಅವರು ಆಶಯ ಭಾಷಣ ಮಾಡಿದರು.
ವಚನ ಅನುಭವಿ ಸಾಹಿತ್ಯವಾಗಿದ್ದು, ತ್ರೀವೇಣಿ ಸಂಗಮ ವಿದ್ದಂತೆ. ಇದರಲ್ಲಿ ಭಕ್ತಿ, ಕರ್ಮ, ಶಕ್ತಿಯಿದೆ. ಪುರಾತನ ಪರಂಪರೆ ಭಾರತೀಯ ಸಂಸತಿ ಹಾಗೂ ಭಗವಂತನ ನಿರ್ಣಯಗಳು ವಚನಕಾರರು ರಚಿಸಿದ ವಚನಗಳ ರೂಪದಲ್ಲಿ ಹುಟ್ಟಿ ಬಂದಿವೆ. ಪಾಶ್ಚಾತ್ಯ ಮನೋಭಾವದಲ್ಲಿ ನೋಡಿದರೆ ವಚನ ಸಾಹಿತ್ಯ ಅರ್ಥವಾಗಲ್ಲ. ಸಮಗ್ರವಾಗಿ ಹಾಗೂ ತಿಳುವಳಿಕೆ ಭಾವದಿಂದ ನೋಡಿದರೆ ಮಾತ್ರ ವಚನ ದರ್ಶನ ಆಗಲು ಸಾಧ್ಯ ಎಂದರು.
ವಚನಗಳು ಯಾವ ಜಾತಿಗೂ ಸೀಮಿತ ಆಗಿಲ್ಲ. ವಚನಕಾರರನ್ನು ಯಾವ ಜಾತಿಗೂ ಸೀಮಿತಗೊಳಿಸಬಾರದು. ಇದು ಮನಕುಲಕ್ಕೆ ಇರುವ ಭಕ್ತಿಯ ಮಾರ್ಗವಾಗಿದೆ. ಕೆಲವರು ವಚನಗಳನ್ನು ಹಾಗೂ ವಚನಕಾರನ್ನು ಸಮಾಜ ಒಡೆಯುವ ಸಾಧನ ಮಾಡಿಕೊಂಡಿದ್ದಾರೆ. ಆದರೆ, ವಚನಕಾರರು ಯಾವತ್ತೂ ಒಡೆಯುವ ಕೆಲಸ ಮಾಡಿಲ್ಲ. ವಚನಗಳನ್ನು ಇಟ್ಟುಕೊಂಡು ಸಮಾಜ ಒಡೆಯುವ ಕೆಲಸ ಮಾಡಿದರೆ ಅದು ಮಹಾದ್ರೋಹದ ಕೆಲಸ ಆಗಲಿದೆ ಎಂದರು.
ಕೆಲವರು ವರ್ಗ ಸಂಘರ್ಷಕ್ಕೂ ವಚನ ಬಳಸಿಕೊಳ್ಳುತ್ತಿದ್ದಾರೆ. ಬಸವಣ್ಣನವರು ಯಾವ ಕಾಯಕವೂ ಕೀಳಲ್ಲ. ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಆದರೆ, ಇದನ್ನು ಪಾಲಿಸದ ಕಾರಣ ನಿರುದ್ಯೋಗ ಹೆಚ್ಚಳವಾಗುತ್ತಿದೆ. ಬಸವಣ್ಣನವರ ವಚನದಂತೆ ಕೆಲಸ ಮಾಡಿದರೆ ದೇಶವು ಒಂದೇ ವರ್ಷದಲ್ಲಿ ನಿರುದ್ಯೋಗ ಮುಕ್ತ ಆಗಲಿದೆ ಎಂದರು.
ಸರ್ಕಾರ ಸಹ ಜನರ ತೆರಿಗೆ ಹಣದಲ್ಲಿ ಬಿಟ್ಟಿ ಭಾಗ್ಯಗಳನ್ನು ಕೊಡುವ ಬದಲು ದುಡಿಯುವ ವರ್ಗಕ್ಕೆ ಸರಿಯಾದ ಕೆಲಸ ಕೊಡಬೇಕು.ನಾನು ಬಸವಣ್ಣನವರ ಪ್ರತಿಪಾದಕ ಎಂದು ಹೇಳುವವರು ಆಹಾರ ಅವರವರ ಹಕ್ಕು ಎಂದು ಗೋಮಾಂಸ ಸೇವಿರುಸುವವರನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ಇಂಥವರಿಗೆ ಧರ್ಮವೇ ದೈವದ ಮೂಲವಯ್ಯ ಎಂಬ ವಚನದ ಅರಿವು ಮೂಡಿಸಬೇಕು.
ಪೂವಿರ್ಕರು ಭೂಮಿಯನ್ನು ಭೂತಾಯಿ, ನೀರನ್ನು ಗಂಗಾಮಾತಾ, ವಾಯುವನ್ನು ಅಗ್ನಿ ದೇವ ಎಂದು ಸುಮ್ಮನೆ ಕರೆದಿಲ್ಲ. ಅವುಗಳನ್ನು ಗೌರವಯುತವಾಗಿ ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಹೇಳಿದ್ದಾರೆ. ಇಂದು ಅವುಗಳನ್ನು ನಾವು ನಾಶ ಮಾಡುತ್ತಿದ್ದೇವೆ. ಹೀಗಾಗಿ ಕರೊನಾದಂತಹ ಮಾರಕ ರೋಗದಿಂದ ಜನ ಬಲಿಯಾಗುವ ದುಸ್ಥಿತಿ ಬಂದಿತ್ತು. ಭಾರತೀಯರಾದ ನಾವು ಸಂಸ್ಕಾರದಿಂದ ನಡೆದುಕೊಂಡರೆ ಯಾವ ಸಂಪತ್ತೂಗಳು ನಮ್ಮಲ್ಲಿ ಕೊರತೆಯಾಗಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಸಂಸ್ಕಾರ, ಸಂಸತಿಯೊಂದಿಗೆ ಬಾಳಬೇಕು ಎಂದರು.
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಹೊಟ್ಟಿಗೌಡ್ರ, ಕರ್ನಾಟಕ ವೈಭವ ಸಂಯೋಜಕ ಪ್ರವಿಣ ಕೋಪರ್ಡೆ, ಪರಿವರ್ತನ ಅಧ್ಯಕ್ಷ ಎಸ್​.ಜಿ. ವೈದ್ಯ, ಸಂಯೋಜಕ ಡಾ. ನಾರಾಯಣ ಪವಾರ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net