ಕೋಡಿ ಬಿದ್ದು ಹರಿಯುತ್ತಿರುವ ದೊಡ್ಡಕೆರೆ; ಸ್ಥಳಕ್ಕೆ ನಗರಸಭೆ ಆಯುಕ್ತ, ತಹಸೀಲ್ದಾರ್​ ಭೇಟಿ ಪರಿಶೀಲನೆ

21-RNR-03
Published on

ರಾಣೆಬೆನ್ನೂರ: ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ನಗರದ ಐತಿಹಾಸಿಕ ದೊಡ್ಡಕೆರೆ ಕೋಡಿ ಬಿದ್ದಿದ್ದು ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಇದರಿಂದಾಗಿ ಕೊಟ್ಟೂರೇಶ್ವರ ಮಠದ ಎದುರಿನ ಹಾಗೂ ಕೆರೆ ಅಕ್ಕಪಕ್ಕದಲ್ಲಿ ಕೆಳ ಹಂತದಲ್ಲಿನ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಕೆರೆ ಕೋಡಿ ಬಿದ್ದಿದ್ದರಿಂದ ನೀರು ಜಲಪಾತದಂತೆ ಹರಿಯುತ್ತಿದ್ದು ಅಕ್ಕಪಕ್ಕದ ನಿವಾಸಿಗಳು ಹರಿಯುತ್ತಿರುವ ನೀರಿನಲ್ಲಿ ಜಲಕ್ರೀಡೆ ಆಡಿ ಸಂಭ್ರಮಿಸುತ್ತಿರುವ ದೃಶ್ಯಗಳು ಸೋಮವಾರ ಕಂಡು ಬಂದಿತು. ಕೆಲವರು ಕೆರೆ ನೀರಿನಲ್ಲಿ ಹರಿಯುತ್ತಿದ್ದ ಮೀನುಗಳನ್ನು ಹಿಡಿಯಲು ಬಲೆ ಬೀಸಿದರು.

ಮಳೆ ಇದೇ ರೀತಿ ಮುಂದುವರಿದರೆ ಕೆರೆಯಿಂದ ಹೆಚ್ಚಿನ ಪ್ರಮಾಣದ ನೀರು ಹರಿಯಲಾರಂಭಿಸಿದರೆ ಎತ್ತರದ ಪ್ರದೇಶದ ಮನೆಗಳಿಗೂ ನೀರು ನುಗ್ಗುವ ಸಾಧ್ಯತೆಯಿದೆ. ಅಲ್ಲದೆ ಅಡವಿ ಆಂಜನೇಯ ಬಡಾವಣೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲೂ ಪ್ರಮಾಣದಲ್ಲಿ ಕೆರೆ ನೀರು ಹರಿಯುತ್ತಿದ್ದು ದ್ವಿಚಕ್ರ ವಾಹನ ಸವಾರರು, ಆಟೋರೀಾದವರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಅಧಿಕಾರಿಗಳ ಭೇಟಿ, ಪರಿಶೀಲನೆ...

ದೊಡ್ಡಕೆರೆಗೆ ಕೋಡಿ ಬಿದ್ದ ಹಿನ್ನೆಲೆಯಲ್ಲಿ ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಹಾಗೂ ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ ಭೇಟಿ ನೀಡಿ ಪರಿಶೀಲಿಸಿದರು. ಕೆರೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹೊರ ಬಂದರೆ ಮನೆಗಳಿಗೆ ನುಗ್ಗುವ ಸಾಧ್ಯತೆಯಿದ್ದು ನಿವಾಸಿಗಳು ಜಾಗೃತಿಯಿಂದ ಇರಬೇಕು ಎಂದು ಸೂಚಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಕ್ಕೀರಪ್ಪ ಇಂಗಳಗಿ, ಕೆರೆ ನೀರು ಕೋಡಿ ಬಿದ್ದಾಗ ಮನೆಗಳಿಗೆ ನುಗ್ಗದಂತೆ ತಡೆಯುವ ದೃಷ್ಟಿಯಿಂದ ಕಾಲುವೆ ನಿಮಿರ್ಸಲಾಗುವುದು. ನೀರು ಕಾಲುವೆ ಮೂಲಕ ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಲಾಗುವುದು. ಅದಕ್ಕಾಗಿ ಮುಂದಿನ ದಿನದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.

ಕಂದಾಯ ನಿರೀಕ್ಷಕ ಅಶೋಕ ಅರಳೇಶ್ವರ, ವಿಎ ಹರೀಶಕುಮಾರ ಎಂ.ಪಿ. ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net