ಅಪಾಯ ಮಟ್ಟ ಮೀರಿ ಹರಿಯುತ್ತಿರುವ ತುಂಗೆ; ಮೆಕ್ಕೆಜೋಳ ಬೆಳೆ, ಪಂಪಸೆಟ್ ಜಲಾವೃತ

18-RNR-03A
Published on

ರಾಣೆಬೆನ್ನೂರ: ಮಲೆನಾಡು ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ನದಿಪಾತ್ರದ ಗ್ರಾಮಗಳ ಜಮೀನುಗಳಿಗೆ ನದಿ ನೀರು ನುಗ್ಗಿ ಮೆಕ್ಕೆಜೋಳ ಸೇರಿ ಇತರ ಬೆಳೆಗಳ ಜಮೀನುಗಳು ಜಲಾವೃತಗೊಂಡಿವೆ. ನದಿಯಲ್ಲಿ ನೀರು ಹರಿವು ಏಕಾಏಕಿ ಏರಿಕೆಯಾಗಿದ್ದರಿಂದ ರೈತರಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಚೌಡಯ್ಯದಾನಪುರ ಗ್ರಾಮದ ಬಳಿಯಿರುವ ಅಂಬಿಗರ ಚೌಡಯ್ಯನವರ ಐಕ್ಯ ಮಂಟಪ ಕೂಡ ಸಂಪೂರ್ಣ ಮುಳಗಿ ಹೋಗಿದೆ.
ಕೊಚ್ಚಿ ಹೋದ ಪಂಪಸೆಟ್, ಬೆಳೆ...
ತುಂಗಭದ್ರಾ ನದಿಗೆ ಭದ್ರಾ ಜಲಾಶಯದಿಂದ ಎರಡು ದಿನದ ಹಿಂದೆ ೮೦ ಕ್ಯೂಸೆಕ್ ನೀರು ಹರಿಸಲಾಗಿದೆ. ಮಳೆ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದ ಹಿನ್ನೆಲೆಯಲ್ಲಿ ನದಿಪಾತ್ರದಲ್ಲಿ ಏಕಾಏಕಿ ನೀರು ಏರಿಕೆಯಾಗಿದೆ. ಆದರೆ, ಈ ಬಗ್ಗೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಯಾವುದೇ ಮುನ್ಸೂಚನೆ ನೀಡದ ಕಾರಣ ನದಿಪಾತ್ರದಲ್ಲಿದ್ದ ರೈತರ ನೀರಿನ ಪಂಪಸೆಟ್‌ಗಳು ಸಂಪೂರ್ಣ ಮುಳಗಿ ಹೋಗಿದೆ. ಕೆಲವಡೆ ಪಂಪಸೆಟ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ತಾಲೂಕಿನ ಮೇಡ್ಲೇರಿ, ಉದಗಟ್ಟಿ, ಚಂದಾಪುರ, ಹರನಗಿರಿ, ಚಿಕ್ಕಕುರವತ್ತಿ, ಹಿರೇಬಿದರಿ, ಐರಣಿ, ಚೌಡಯ್ಯದಾನಪುರ, ಮುದೇನೂರು, ಕುದರಿಹಾಳ ಸೇರಿ ಬಹುತೇಕ ತುಂಗಭದ್ರ ನದಿ ತೀರದ ಜಮೀನುಗಳಲ್ಲಿ ಬೆಳೆದಿದ್ದ ಮೆಕ್ಕೆಜೋಳ, ಹತ್ತಿ, ಬೀಟ್ ರೂಟ್, ಚೆಂಡು ಹೂವಿನ ಗಿಡಗಳು ಜಲಾವೃತಗೊಂಡಿವೆ. ಇದರಿಂದಾಗಿ ರೈತರು ಸಂಕಷ್ಟದಲ್ಲಿ ಸಿಲುಕಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net