

ರಾಣೆಬೆನ್ನೂರ: ತಿರುಪತಿ ಬಾಲಾಜಿ ದೇವಸ್ಥಾನದ ಪವಿತ್ರ ಲಾಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ಎಣ್ಣೆ ಬೆರೆಸಿರುವವರ ವಿರುದ್ಧ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರಿಗೆ ಕಠಿಣ ಶಿೆ ವಿಧಿಸಬೇಕು ಎಂದು ಆಗ್ರಹಿಸಿ ಇಲ್ಲಿಯ ರಾಜ್ಯ ದೇವಸ್ಥಾನ, ಮಠ ಹಾಗೂ ಧಾಮಿರ್ಕ ಸಂಸ್ಥೆಗಳ ಮಹಾಸಂದ ವತಿಯಿಂದ ಮಂಗಳವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನೇತೃತ್ವ ವಹಿಸಿದ್ದ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ ಮಾತನಾಡಿ, ತಿರುಪತಿ ಬಾಲಾಜಿ ದೇವಸ್ಥಾನವು ಪ್ರಪಂಚದಾದ್ಯಂತ ಕೋಟಿಗಟ್ಟಲೆ ಭಕ್ತರ ಆರಾಧನೆಯ ಸ್ಥಳವಾಗಿದೆ. ಇದನ್ನು ಭಗವಾನ್ ಶ್ರೀ ವಿಷ್ಣುವಿನ ನಿಜವಾದ ವೈಕುಂಠವೆಂದು ಪರಿಗಣಿಸಲಾಗಿದೆ. ಇಂತಹ ಪುಣ್ಯಭೂಮಿಯಲ್ಲಿ ಪ್ರಸಾದದ ಲಾಡುಗಳಲ್ಲಿ ಪ್ರಾಣಿಗಳ ಕೊಬ್ಬಿನ ಎಣ್ಣೆಯನ್ನು ಬಳಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇದರಿಂದಾಗಿ ದೇಶಾದ್ಯಂತ ಹಿಂದು ಸಮುದಾಯದಲ್ಲಿ ತೀವ್ರ ಆಕ್ರೋಶದ ಅಲೆ ಎದ್ದಿದೆ.
ಲಾಡು ಕೇವಲ ಆಹಾರವಲ್ಲ, ಅದು ಭಕ್ತರ ಶ್ರದ್ಧೆ ಭಕ್ತಿ ಮತ್ತು ಆಧ್ಯಾತ್ಮಿಕ ಶಕ್ತಿಯ ಭಾಗವಾಗಿದೆ. ಅಂತಹ ಪವಿತ್ರವಾದ ಪ್ರಸಾದದಲ್ಲಿ ಅಶುದ್ಧ ಮತ್ತು ಧಾಮಿರ್ಕ ದೃಷ್ಟಿಕೋನದಿಂದ ಅನುಚಿತ ಪದಾರ್ಥಗಳನ್ನು (ಪ್ರಾಣಿಗಳ ಕೊಬ್ಬು) ಬಳಸುವುದು ಭಕ್ತರಲ್ಲಿ ತೀವ್ರ ಕೋಪವನ್ನು ಉಂಟುಮಾಡಿದೆ.
ಆದ್ದರಿಂದ ಜಗಮೋಹನ್ ರೆಡ್ಡಿ ಸರ್ಕಾರ ಮತ್ತು ಅವರ ತಂದೆ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿ ಅವರ ಅವಧಿಯಲ್ಲಿ ತಿರುಪತಿ ದೇವಸ್ಥಾನಕ್ಕೆ ಸಂಬಂಧಿಸಿ ತೆಗೆದುಕೊಂಡಂತಹ ಎಲ್ಲ ನಿರ್ಧಾರಗಳನ್ನು ಕೂಲಂಕುಷವಾಗಿ ತನಿಖೆ ಮಾಡಬೇಕು. ಇವುಗಳು ಹಿಂದು ವಿರೋಧಿ ನಿರ್ಣಯಗಳಾಗಿದ್ದಲ್ಲಿ ತಕ್ಷಣ ಅವುಗಳನ್ನೆಲ್ಲ ರದ್ದುಪಡಿಸಬೇಕು.
ಪ್ರತಿಯೊಂದು ದೇವಸ್ಥಾನದಲ್ಲಿ ನೀಡುವ ಪ್ರಸಾದವು ಸಾತ್ವಿಕ, ಶುದ್ಧ ಮತ್ತು ಪವಿತ್ರವಾಗಿರಬೇಕು. ಅದರ ತಯಾರಿಕೆ ಹಾಗೂ ವಿತರಣೆ ವ್ಯವಸ್ಥೆಯಲ್ಲಿರುವ ಪ್ರತಿಯೊಬ್ಬರೂ ಧರ್ಮಪರಾಯಣ ಹಿಂದುಗಳಾಗಿರಬೇಕು. ದೇಶಾದ್ಯಂತ ಎಲ್ಲ ದೇವಸ್ಥಾನಗಳಲ್ಲಿ ಈ ರೀತಿ ಧರ್ಮಭ್ರಷ್ಟ ಅಥವಾ ಹಿಂದು ಧರ್ಮ ವಿರೋಧಿ ಕೃತ್ಯಗಳು ನಡೆಯುತ್ತಿವೆಯೇ ಎಂದು ತನಿಖೆ ನಡೆಸಬೇಕು.
ದೇವಸ್ಥಾನಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವ ಮೂಲಕ ಧಾಮಿರ್ಕ ಸ್ಥಳಗಳ ಸೂಕ್ತ ರಕ್ಷಣೆ ಮಾಡಬೇಕು. ಅಲ್ಲಿ ಇತರ ಧಮೀರ್ಯ ವ್ಯಕ್ತಿಗಳನ್ನು ಟ್ರಸ್ತಿ ಅಥವಾ ಪದಾಧಿಕಾರಿಗಳಾಗಿ ನೇಮಿಸಬಾರದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹಿಂದು ಜಾಗರಣ ಸಮಿತಿ ಸದಸ್ಯರಾದ ಸಿದ್ದು ಹಾವೇರಿ, ಜಿ.ಜಿ. ಹೊಟ್ಟಿಗೌಡ್ರ, ಬಿ.ಸಿ. ನಂದಿಹಳ್ಳಿ, ಕಿರಣ ಅಂತರವಳ್ಳಿ, ಶಿವಾನಂದ ಸಾಲಗೇರಿ, ಹನುಮಂತಪ್ಪ ಹೆದ್ದೇರಿ, ವಿಜಯ ಹುಗ್ಗಿ, ಶಿವಯೋಗಿ ಹಳ್ಳಳ್ಳಿ, ಶಿವಾಜಿ ಆರೇರ, ಹನುಮಂತಪ್ಪ ಮಾಗೋಡ, ಮಾಲತೇಶ ತಹಸೀಲ್ದಾರ್, ಬಸವರಾಜ ಅಂತರವಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.