ಗಮನ ಸೆಳೆದ ಶಿಸ್ತುಬದ್ಧ ಆರ್​ಎಸ್​ಎಸ್​ ಪಥಸಂಚಲನ

26-RNR-11
Published on

ರಾಣೆಬೆನ್ನೂರ: ರಾಷ್ಟ್ರೀಯ ಸ್ವಯಂಸೇವಕ ಸಂ (ಆರ್​ಎಸ್​ಎಸ್​) ವತಿಯಿಂದ ಭಾನುವಾರ ನಗರದಲ್ಲಿ ಎರಡು ತಂಡಗಳಿಂದ ಅದ್ಧೂರಿಯಾಗಿ ಬೃಹತ್​ ಪಥಸಂಚಲನ ನಡೆಸಲಾಯಿತು.

ನಗರದ ಅಶೋಕ ವೃತ್ತದಿಂದ ಆರಂಭಗೊಂಡ ಪಥಸಂಚಲನದ ಒಂದು ತಂಡ ಸಂಗಮ್​ ವೃತ್ತ, ಗಾಂಧಿಗಲ್ಲಿ, ತಳವಾರ ಓಣಿ, ದೊಡ್ಡಪೇಟೆ, ರಂಗನಾಥ ನಗರ, ಬಸವನಗುಡಿ, ದುರ್ಗಾ ವೃತ್ತಕ್ಕೆ ಬಂದಿತು. ಮತ್ತೊಂದು ತಂಡ ಪೋಸ್ಟ್​ ವೃತ್ತ, ಕೆಎಂಪಿ ವೃತ್ತ, ಎಡಿಬಿ ರಸ್ತೆ, ಚಕಿಮಕಿ ದುರ್ಗಮ್ಮನ ದೇವಸ್ಥಾನ, ಎಂ.ಜಿ. ರಸ್ತೆ ಮೂಲಕ ದುರ್ಗಾ ವೃತ್ತಕ್ಕೆ ಬಂದು ಎರಡು ತಂಡ ಸೇರಿದವು. ನಂತರ ಶಿಡ್ಲು ಪತ್ರಿಕೆ ಕಚೇರಿ, ಗ್ರಾಮೀಣ ಠಾಣೆ ಮುಂಭಾಗದಿಂದ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಮುನ್ಸಿಪಲ್​ ಮೈದಾನಕ್ಕೆ ಬಂದು ಸೇರಿತು.

ಪಥ ಸಂಚಲನದ ವಾಹನಕ್ಕೆ ಭಾರತಿ ಜಂಬಗಿ ಪೂಜೆ ಸಲ್ಲಿಸಿದರು. ರಸ್ತೆಯುದ್ದಕ್ಕೂ ಅಭಿಮಾನಿಗಳು ಗಣವೇಷಧಾರಿಗಳ ಮೇಲೆ ಹೂವಿನ ಸುರಿಮಳೆಗೈದರು. ರಸ್ತೆಗೆ ರಂಗೋಲಿ ಬಿಡಿಸಿ ಸ್ವಾಗತಿಸಿದರು. ಜೈ ಶ್ರೀರಾಮ ಎಂಬ ಘೋಷಣೆ ಮೊಳಗಿದವು.

ಸಂದ ದಕ್ಷಿಣ ಪ್ರಾಂತದ ವಕ್ತಾರ ಬೆಂಗಳೂರಿನ ಶ್ರೀಧರ ಸ್ವಾಮಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘವು ದೇಶಪ್ರೇಮ ರಾಷ್ಟ್ರಭಕ್ತಿಯ ಮೂಲಕ ದೇಶಕ್ಕಾಗಿ ಮಿಡಿಯುವ ಬೃಹತ್​ ಸಂಘಟನೆಯಾಗಿ ಹಲವಾರು ಏಳು ಬೀಳುಗಳ ಮೂಲಕ ಶತಮಾನೋತ್ಸವ ಕಂಡು ಮುನ್ನಡೆಯುತ್ತಿದೆ. ಇಂತಹ ಸಂಘದ ಶಕ್ತಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.

ಸಂಘವು ಸ್ಥಾಪನೆಯಾಗಲು ಹೆಡ್ಗೆವಾರವರು ದೇಶದ ಹಿತದೃಷ್ಠಿಯಿಂದ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಸಂಘ ಕಟ್ಟಿದರು. ಅದರ ಪರಿಣಾಮವಾಗಿ ಆರ್​ಎಸ್​ಎಸ್​ ಸಂಘವು ಈಗ ದೊಡ್ಡ ಶಕ್ತಿಯಾಗಿ ಬೆಳೆದಿದೆ. ಕುತಂತ್ರಿಗಳಿಂದ ಸಮಾಜಘಾತುಕರಿಂದ ದೇಶದ್ರೋಹಿಗಳಿಂದ ಸಂಘವನ್ನು ಮೂರು ಬಾರಿ ನಿರ್ಬಂಧ ಹೇರಲಾಯಿತು. ಆದರೂ ಸಂಘ ದೇಶಕ್ಕಾಗಿ ಶ್ರಮಿಸುತ್ತಿದೆ. ದೇಶಕ್ಕಾಗಿ ಮಿಡಿಯುತ್ತಿದೆ ಸತ್ಯ ಮತ್ತು ಬದ್ಧತೆಯಿಂದ ಮತ್ತೆ ಸಂಘ ತನ್ನ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡು ಹಲವಾರು ವಿರೋಧಿಗಳ ನಡುವೆಯೂ ಸಂಘದ ಸೇವಕರು ತಮ್ಮನ್ನು ತಾವು ತೊಡಗಿಸಿಕೊಂಡು ದೇಶ ಸೇವೆಗೆ ಮುನ್ನಡೆಯುತ್ತಾ ಬಂದಿದ್ದಾರೆ. ಇಂತಹ ಸಂಘಟನೆಯಲ್ಲಿ ತೊಡಗಿರುವವರು ನಿಜಕ್ಕೂ ಪುಣ್ಯವಂತರು ಎಂದರು.

ಇಡೀ ಜಗತ್ತೆ ಇವತ್ತು ಭಾರತವನ್ನು ತಿರುಗಿ ನೋಡುತ್ತಿದೆ. ನಮ್ಮ ದೇಶದ ಸಂಸತಿ, ಸಂಸ್ಕಾರ, ಆಚಾರ-ವಿಚಾರಗಳು ಯಾವ ದೇಶದಲ್ಲಿಯೂ ಸಿಗಲು ಸಾಧ್ಯವಿಲ್ಲ. ಹೀಗಿರುವಾಗ ನಮ್ಮ ಸಂಸ್ಕಾರ ಸಂಸತಿಯನ್ನು ವಿದೇಶಿಯರೂ ಸಹ ಅಪ್ಪಿಕೊಂಡು ನಮ್ಮದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ದುರಂತವೆಂದರೆ ನಮ್ಮ ದೇಶದಲ್ಲಿಯೇ ಇದ್ದು ದೇಶದ್ರೋಹಿ ಕೆಲಸ ಮಾಡುವವರು ಇಂದಿಗೂ ಕಂಡು ಬರುತ್ತಿರುವುದು ವಿಷಾಧದ ಸಂಗತಿಯಾಗಿದೆ ಎಂದರು.

ಬಿಸಿಎಂ ಇಲಾಖೆಯ ನಿವೃತ್ತ ಅಧಿಕಾರಿ ಕೆಂಜೊಡೆಪ್ಪ ಭಜಂತ್ರಿ ಮಾತನಾಡಿ, ಆರ್​ಎಸ್​ಎಸ್​ ಸಂಘವು ದೇಶಕ್ಕೆ ಅಪಾರವಾದ ಕೊಡುಗೆ ನೀಡಿದೆ. ಇಂತಹ ಶಿಸ್ತಿನ ಸಂಘದಿಂದ ದೇಶದ ಸಂಸತಿ ಸಂಸ್ಕಾರ ಉಳಿದಿದೆ. ಮುಂದೆ ನಡೆಯುವ ಅನೇಕ ಭಾಗಗಳಲ್ಲಿ ಪಥ ಸಂಚಲನಕ್ಕೆ ಗ್ರಾಮೀಣ ಭಾಗದ ಯುವಕರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿ ದೇಶದ ಸೇವೆಗೆ ಮುಂದಾಗಬೇಕು ಎಂದರು.

ಮಾಜಿ ಶಾಸಕ ಅರುಣಕುಮಾರ ಪೂಜಾರ, ಪ್ರಕಾಶ ಬುರಡಿಕಟ್ಟಿ, ಗಣೇಶ ಪವಾರ, ಗವಿಸಿದ್ದಪ್ಪ ದ್ಯಾಮಣ್ಣನವರ, ಡಾ.ಬಸವರಾಜ ಕೇಲಗಾರ, ಮಲ್ಲಣ್ಣ ಅಂಗಡಿ, ಸಂತೋಷ ತೆವರಿ, ಕೆ. ಶಿವಲಿಂಗಪ್ಪ, ಸಂಜೀವ ಶಿರಹಟ್ಟಿ, ಷಣ್ಮುಖ ಕೆ.ಎನ್​., ಮಂಜುನಾಥ ಗೌಡಶಿವಣ್ಣನವರ, ಮಂಜಯ್ಯ ಚಾವಡಿ, ಗದಿಗೆಪ್ಪ ಹೊಟ್ಟಿಗೌಡ್ರ ಸೇರಿದಂತೆ ನೂರಾರು ಜನ ಸ್ವಯಂ ಸೇವಕರು ಪಾಲ್ಗೊಂಡಿದ್ದರು.

ಎಸ್ಪಿ ಯಶೋಧಾ ವಂಟಗೋಡಿ, ಡಿವೈಎಸ್ಪಿ ಲೋಕೇಶ ಜೆ. ಹಾಗೂ ಪಿಎಸ್​ಐ ಗಡ್ಡೆಪ್ಪ ಗುಂಜುಟಗಿ ನೇತೃತ್ವದಲ್ಲಿ ಸೂಕ್ತ ಪೊಲೀಸ್​ ಬಂದೋಬಸ್ತ್​ ಒದಗಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net