

ರಾಣೆಬೆನ್ನೂರ: ರಾಜ್ಯ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿ ಮತ್ತು ಸರ್ಕಾರದ ಆಸ್ತಿ ಕಬಳಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿ ವಿಶ್ವ ಹಿಂದು ಪರಿಷತ್ ಭಜರಂಗದಳ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇಲ್ಲಿಯ ಸಿದ್ದೇಶ್ವರ ನಗರದ ವೃತ್ತದಲ್ಲಿ ಮಾನವ ಸರಪಳಿ ನಿಮಿರ್ಸಿ ಅರ್ಧಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿದರು. ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಚಿವ ಜಮೀರ್ ಅಹ್ಮದ್ ಅವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಸರ್ಕಾರ ವಕ್ಫ್ ಹೆಸರಿನಲ್ಲಿ ರೈತರ ಜಮೀನು, ಮಠ, ಮಂದಿರಗಳ ಆಸ್ತಿ ಮತ್ತು ಸರ್ಕಾರದ ಆಸ್ತಿ ಕಬಳಿಸಲು ಹುನ್ನಾರ ನಡೆಸಿದೆ. ನಮ್ಮ ಆಸ್ತಿ, ನಮ್ಮ ಹಕ್ಕಾಗಿದ್ದು ಇದರ ಮೇಲೆ ಯಾರೇ ಕಣ್ಣು ಹಾಕಿದರೂ ಸುಮ್ಮನೇ ಕುಳಿತುಕೊಳ್ಳದೆ ಅದನ್ನು ಸಮರ್ಥವಾಗಿ ಎದುರಿಸಿ ತಕ್ಕ ಪಾಠ ಕಲಿಸುವ ಸಾಮರ್ಥ್ಯ ನಮ್ಮ ರೈತರಿಗೆ ಹಾಗೂ ಹಿಂದು ಸಮಾಜಕ್ಕಿದೆ.
ಸಾವಿರಾರು ಬಡ ವಿದ್ಯಾಥಿರ್ಗಳಿಗೆ ಅನ್ನದಾಸೋಹದೊಂದಿಗೆ ವಿದ್ಯಾದಾನ ಮಾಡುತ್ತಿರುವ ಮಠ, ಮಂದಿರಗಳ ಮೇಲೆ ಸರ್ಕಾರದ ಕಣ್ಣು ಬಿದ್ದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಇಂತಹ ಅಸಂವಿಧಾನಿಕವಾದ ಸರ್ವಾಧಿಕಾರಿ ಧೋರಣೆ ತೆಗೆದುಕೊಂಡ ಸರ್ಕಾರ ಕೂಡಲೇ ಅತಿಕ್ರಮಿಸಿದ ಆಸ್ತಿಯನ್ನು ಮರಳಿ ರೈತರಿಗೆ ಮತ್ತು ಮಠ ಮಂದಿರಗಳಿಗೆ ನೀಡಬೇಕು.
ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ತಿದ್ದುಪಡಿ ಮಾಡಿ ರೈತರಿಗೆ ನೀಡಿರುವ ನೋಟಿಸನ್ನು ವಾಪಸ್ ಪಡೆದು ಅದನ್ನು ಮೊದಲಿನಂತೆ ಅವರ ಹೆಸರಿಗೆ ಬದಲಾಯಿಸಬೇಕು. ಹಿಂದು ಸಮಾಜವನ್ನು ಮತ್ತು ರೈತರನ್ನು ಲಗುವಾಗಿ ಕಂಡ ಸಚಿವ ಜಮೀರ್ ಅಹ್ಮದ್ ಅವರನ್ನು ಕೂಡಲೇ ಮಂತ್ರಿ ಮಂಡಲದಿಂದ ವಜಾ ಮಾಡಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಬಂದ ತಹಸೀಲ್ದಾರ್ ಆರ್.ಎಚ್. ಭಾಗವಾನ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಮುಖರಾದ ಬಸವರಾಜ ಪಾಟೀಲ, ರುದ್ರೇಶ ಬುಕ್ಕಶೆಟ್ಟಿ, ನಾಗರಾಜ ಕೊರವರ, ವಿನಯಗೌಡ ಬಾಳನಗೌಡ್ರ, ಚನ್ನಬಸಪ್ಪ ಓಂಕಾರಣ್ಣನವರ, ಅನಿಲ ಮಳವಳ್ಳಿ, ದೀಪಕ ಹರಪನಹಳ್ಳಿ. ಹೇಮಂತ ಬೂದನೂರ, ದತ್ತಾತ್ರೇಯ ರೇವಣಕರ, ಶ್ರೀನಿವಾಸ ಜಿ.ಎನ್, ರಾಯಣ್ಣ ಮಾಕನೂರ, ಭೀಮರಾಜ ಕುಂಕುಮಗಾರ, ಬೀರೇಶ ಮೆಡ್ಲೇರಿ, ಬೀರೇಶ ಗುದಿಗೇರ ಮತ್ತಿತರರು ಪಾಲ್ಗೊಂಡಿದ್ದರು.