

ರಾಣೆಬೆನ್ನೂರ: ನಗರದ ಹಳೇ ಅಂತರವಳ್ಳಿ ರಸ್ತೆ ಸೇರಿ ವಿವಿಧ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುಂಡಿಗಳಲ್ಲಿ ಹೋಮ್ ನಡೆಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಹಳೇ ಅಂತರವಳ್ಳಿ ರಸ್ತೆಯಲ್ಲಿ ಬಿದ್ದಿರುವ ಗುಂಡಿ ಎದುರು ಒಂದು ಗಂಟೆಗೂ ಅಧಿಕ ಕಾಲ ಹೋಮ್ ನಡೆಸುವ ಮೂಲಕ ಗುಂಡಿಗಳನ್ನು ಮುಚ್ಚಿಸುವಂತೆ ಆಕ್ರೋಶ ವ್ಯಕ್ತಪಡಿಸಿದರು.
ನೇತೃತ್ವ ವಹಿಸಿದ್ದ ರೈತ ಸಂದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ರಾಣೆಬೆನ್ನೂರ ಗುಂಡಿಗಳಿಂದ ಕೂಡಿದಂತ ನಗರವಾಗಿದೆ. ಎರಡೂವರೆ ವರ್ಷ ಹಿಂದೆ ಗೌರಿಶಂಕರ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದವರೆಗಿನ ರಸ್ತೆ ಸಂರ್ಪೂಣ ಹಾಳಾಗಿ ಹೋಗಿದೆ. ಇದರಿಂದ ಸುತ್ತಲಿನ ಜನತೆ ನರಕಯಾತನೆ ಅನುಭವಿಸುವಂತಾಗಿದೆ.
ರೈಲ್ವೆ ಸ್ಟೇಷನ್ ರಸ್ತೆ, ನಗರಸಭೆ ಮುಂಭಾಗ, ಸಂಗಮ್ ವೃತ್ತ ಸೇರಿ ಎಲ್ಲೆಡೆ ಇದೇ ಪರಿಸ್ಥಿತಿಯಿದೆ. ಆದರೆ, ಸಾರ್ವಜನಿಕರಿಗೆ ಸ್ಪಂದಿಸಬೇಕಾದ ಶಾಸಕರು ಹಾಗೂ ಮಾಜಿ ಶಾಸಕರು ತಾವೇ ಕಿತ್ತಾಡುವ ಕೆಲಸಕ್ಕೆ ಮಾಡುತ್ತಿದ್ದಾರೆ ಹೊರತು ಅಭಿವೃದ್ಧಿ ಎಂಬುದನ್ನು ಮರೆತು ಬಿಟ್ಟಿದ್ದಾರೆ.
ನಗರದಲ್ಲಿ ಜಾತಿ ಜಾತಿಗಳ ನಡುವೆ ಕೋಮು ಗಲಭೆಗಳು ಆಗದಂತೆ ಮತ್ತು ಜಾತಿ ಜಾತಿಗಳ ವೃತ್ತಗಳನ್ನು ಮಾಡಲಿಕ್ಕೆ ಮುಂದಾದಂತಹ ಸಾರ್ವಜನಿಕರಿಗೆ ತಿಳುವಳಿಕೆ ಹೇಳಿ ಅದನ್ನು ಸರಿಪಡಿಸಬೇಕು. ಅದರ ಬಗ್ಗೆ ಚಿಂತನೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಮಂಜುನಾಥ ಸಂಬೋಜಿ, ರಾಜೇಶ ಅಂಗಡಿ, ಬಸವರಾಜಪ್ಪ ಮೇಗಳಗೇರಿ, ಶಂಕರ ಜಿ., ದೇವರಾಜ ಕಡೆಮನಿ, ಸಿದ್ದಪ್ಪ ಗುಡಿಯವರ, ಹನುಮಂತಪ್ಪ ಕಟ್ಟಿಮನಿ, ಶೈಲಮ್ಮ ಅರಣ್ಯ, ನೀಲಮ್ಮ ನೆಗಳಗೇರಿ, ಲಲಿತ ಲಮಾಣಿ, ಅಮಿದ ಬಾನು, ನಾಗಮ್ಮ ತಳವಾರ, ಕೊಟ್ರಮ್ಮ ಕಾಯ್ಕಲ್, ರತ್ನಮ್ಮ ಎರೆಕುಪ್ಪಿ ಮತ್ತಿತರರು ಪಾಲ್ಗೊಂಡಿದ್ದರು.