

ರಾಣೆಬೆನ್ನೂರ: ಗೌರಿ&ಗಣೇಶ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿದ್ದು, ಮಂಗಳವಾರ ನಗರದ ಮಾರುಕಟ್ಟೆಯಲ್ಲಿ ಹೂವು, ಹಣ್ಣು ಸೇರಿ ತರಹೇವಾರು ಅಲಂಕಾರಿಕ ವಸ್ತುಗಳು ಲಗ್ಗೆ ಇಟ್ಟಿವೆ. ವ್ಯಾಪಾರ&ವಹೀವಾಟು ಕೂಡ ಭರ್ಜರಿಯಾಗಿ ನಡೆಯಿತು.
ನಗರದ ಎಂ.ಜಿ. ರಸ್ತೆ, ನೆಹರು ಮಾರುಕಟ್ಟೆ ಹಾಗೂ ಮುಖ್ಯ ರಸ್ತೆಗಳಲ್ಲಿ ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಮಾರಾಟ ಜೋರಾಗಿತ್ತು. ಹಬ್ಬದ ವ್ಯಾಪಾರಕ್ಕಾಗಿಯೇ ಕೆಲವರು ಹೊರ ಜಿಲ್ಲೆ ಹಾಗೂ ಬೇರೆ ಬೇರೆ ಗ್ರಾಮಗಳ ಹೂವಿನ ವ್ಯಾಪಾರಿಗಳು ರಸ್ತೆಗಳಲ್ಲಿ ಮಾರಾಟ ಮಾಡುತ್ತಿದ್ದರು.
ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ಚೆಂಡು ಹೂವು, ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಕಣಗಲೆ, ಗುಲಾಬಿ, ಕೇದಿಗೆ ಹಾಗೂ ಮಾಲೆಗಳು ಕಂಗೊಳಿಸುತ್ತಿದ್ದವು. ಗಣಪತಿ ಮಂಟಪಕ್ಕೆ ಬಳಸುವ ಲಾವಳಿಗಳ ಮಾರಾಟವೂ ಭರದಿಂದ ಸಾಗಿತ್ತು. ಜತೆಗೆ ಪೂಜಾ ಸಾಮಗ್ರಿಗಳಾದ ತೆಂಗಿನಕಾಯಿ, ಗರಿಕೆ ಹಾಗೂ ಬಾಳೆ ಎಲೆ, ಮಾವಿನ ಟೊಂಗೆ, ಬಾಳೆಕಂಬ ಸೇರಿ ಇನ್ನಿತರ ವಸ್ತಗಳ ವಹಿವಾಟು ಹೆಚ್ಚಾಗಿ ಕಂಡುಬಂದಿತು.
ನಗರದ ಎಡಿಬಿ ರಸ್ತೆ, ಎಂ.ಜಿ. ರಸ್ತೆ, ದುರ್ಗಾ ವೃತ್ತದಲ್ಲಿ ಅಲಂಕಾರಿಕ ವಸ್ತುಗಳು ಮಾರಾಟವಾದವು. ಗಣಪತಿ ಮಂಟಪದ ಅಲಂಕಾರಕ್ಕೆ ನಾನಾ ಬಗೆಯ ವಿದ್ಯುತ್ ದೀಪಗಳ ಸಾಲು, ಬಣ್ಣದ ಪೇಪರ್, ಪ್ಲಾಸ್ಟಿಕ್ ಹೂವಿನ ಮಾಲೆ ಸೇರಿ ಇತರ ವಸ್ತುಗಳು ಗ್ರಾಹಕರ ಗಮನ ಸೆಳೆದವು.
ಹೂವಿನ ಬೆಲೆ ಗಗನಕ್ಕೆ...
ಗಣೇಶ ಚರ್ತುಥಿ ಹಿನ್ನೆಲೆಯಲ್ಲಿ ಸಾಮಾನ್ಯ ದಿನಕ್ಕಿಂತ ಮಂಗಳವಾರ ಮಾರುಕಟ್ಟೆಯಲ್ಲಿ ಹೂವಿನ ದರ ಎರಡ್ಮೂರು ಪಟ್ಟು ಹೆಚ್ಚಳವಾಗಿತ್ತು. ಅಬಾಲಿ ಹೂವು 1 ಮಾರಿಗೆ 150 ರೂ., ಕಾಕಡ 150 ರೂ., ಮಲ್ಲಿಗೆ 120 ರೂ., ಸೇವಂತಿಗೆ 100 ರೂ., ಬಿಳಿ ಸೇವಂತಿಗೆ 150 ರೂ., ಚೆಂಡು ಹೂವು 80 ರೂ.ಗೆ ಮಾರಾಟ ಮಾಡಲಾಯಿತು.
ದುಬಾರಿಯಾದ ಹಣ್ಣುಗಳು...
ಹಣ್ಣುಗಳ ದರ ಕೂಡ ಕೊಂಚ ಏರಿಕೆಯಾಗಿತ್ತು. ಚಿಕ್ಕು ಹಣ್ಣು 1 ಕೆ.ಜಿ.ಗೆ 150 ರೂ., ಸೀತಾಲ 160 ರೂ., ಮೂಸಂಬಿ 150 ರೂ., ಪೇರಲ 140 ರೂ., ಏಲಕ್ಕಿ ಬಾಳೆಹಣ್ಣು 110 ರೂ., ಕಿತ್ತಳೆ 200 ರೂ. ಹಾಗೂ ದಾಳಿಂಬೆ 160 ರೂ.ಗೆ ಕೆ.ಜಿ.ಯಂತೆ ಮಾರಾಟ ಮಾಡಲಾಯಿತು. ಗ್ರಾಹಕರು ಬೆಲೆ ಹೆಚ್ಚಳವಿದ್ದರೂ ತಮಗಿಷ್ಟವಾದ ಹಾಗೂ ಪೂಜೆಗೆ ಬೇಕಾದ ಹಣ್ಣು, ಹೂವು, ತರಕಾರಿ ಖರೀದಿಸುವಲ್ಲಿ ಬ್ಯೂಸಿಯಾಗಿದ್ದರು.