ವಿದ್ಯುತ್ ದರ ಏರಿಕೆ ಖಂಡಿಸಿ ಕರವೇ ಪ್ರತಿಭಟನೆ

21-RNR-04
Published on

ರಾಣೆಬೆನ್ನೂರ: ವಿದ್ಯುತ್ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕು ಘಟಕದ ಕಾರ್ಯಕರ್ತರು ಬುಧವಾರ ನಗರದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿ, ವಿಭಾಗಾಧಿಕಾರಿ ಎನ್.ಸಿ. ಬೆಳಕೇರಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷ ಪಿ.ವಿ. ಮಠದ ಮಾತನಾಡಿ, ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ವಿದ್ಯುತ್ ದರ ಹೆಚ್ಚಳ ಮಾಡಿರುವುದು ಸರಿಯಲ್ಲ. ಗ್ರಾಹಕರಿಗೆ ಯಾವ ಮುನ್ಸೂಚನೆ ನೀಡದೆ ಪ್ರತಿ ಸಲದ ವಿದ್ಯುತ್ ಶಕ್ತಿ ಬಿಲ್‌ಗಿಂತ ಮೂರ‌್ನಾಲ್ಕು ಪಟ್ಟು ಬಿಲ್ ನೀಡಿರುವುದು ಜನಸಾಮಾನ್ಯರ ಮೇಲೆ ಅಧಿಕ ಹೊರೆ ಬಿದ್ದಂತಾಗಿದೆ.
ಇದರಿಂದ ರೈತರು, ಕೂಲಿ ಕಾರ್ಮಿಕರು, ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳು ಬಿಲ್ ಪಾವತಿಸಲು ಪರದಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಮುಂಚಿನ ರೀತಿಯಲ್ಲಿ ಬಿಲ್ ನೀಡುವ ಮೂಲಕ ಜನರ ಮೇಲೆ ಬಿದ್ದಿರುವ ಹೊರೆಯನ್ನು ಕಡಿಮೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆ ಮೂಲಕ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net