ರಾಣೆಬೆನ್ನೂರ ನಗರ ದೇವತೆ ಚೌಡೇಶ್ವರಿ ಜಾತ್ರೆ ಜ. 22ರಿಂದ

21-RNR-01A
Published on

ರಾಣೆಬೆನ್ನೂರ: ಹೂವಿನ ಹರಕೆ ಹೊತ್ತ ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತ ಹೂವಿನ ಚೌಡಮ್ಮ ಎಂದೇ ಪ್ರಸಿದ್ಧಿ ಪಡೆದ ವಾಣಿಜ್ಯ ನಗರಿ ರಾಣೆಬೆನ್ನೂರಿನ ನಗರ ದೇವತೆ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾಮಹೋತ್ಸವವು ಜ. 22ರಿಂದ ನಡೆಯಲಿದ್ದು, ಜಾತ್ರೆಯ ಸಿದ್ಧತೆ ಭರದಿಂದ ಸಾಗಿದೆ.
ಬನದ ಹುಣ್ಣಿಮೆ ದಿನದಂದು ಜಾತ್ರಾಮಹೋತ್ಸವ ನಡೆಯುವ ಹಿನ್ನೆಲೆಯಲ್ಲಿ ಚೌಡೇಶ್ವರಿ ನಗರದಲ್ಲಿ ಈಗಾಗಲೇ ಸಂಭ್ರಮ ಸಗಡರ ಮನೆ ಮಾಡಿದೆ. ದೇವಸ್ಥಾನ ಸುಣ್ಣ-ಬಣ್ಣಗಳಿಂದ ಕಂಗೊಳಿಸತೊಡಗಿದೆ. ಮೇಡ್ಲೇರಿ ವೃತ್ತದಿಂದ ಚೌಡೇಶ್ವರಿ ದೇವಸ್ಥಾನದ ವರೆಗೂ ವಿದ್ಯುತ್ ದ್ವೀಪಗಳು ಹಾಗೂ ಬೀದಿಗಳಲ್ಲಿ ರಂಗುರಂಗಿನ ವಸ್ತ್ರಾಭರಣಗಳಿಂದ ನಿರ್ಮಿಸಿದ ಮಂಟಪ ಭಕ್ತರನ್ನು ಸ್ವಾಗತಿಸಲು ಸಿದ್ಧಗೊಳುತ್ತಿವೆ.
ದೇವಸ್ಥಾನದ ಆವರಣದಲ್ಲಿ ಜೂಲಾ, ಬ್ರೇಕ್‌ಡಾನ್ಸ್, ಸಲಾಮ ಬೋ, ಡ್ರೈಗನ್, ಟೋರಾ ಟೋರಾ, ಅಟೋ ಬಾಕ್ಸ್ ವಿವಿಧ ಮನರಂಜನಾ ಆಟೋಪಕರಣಗಳನ್ನು ಸಿದ್ಧಗೊಳಿಸಲಾಗುತ್ತಿದೆ.
ಜಾತ್ರಾಮಹೋತ್ಸವದಲ್ಲಿ ಚೌಡೇಶ್ವರಿ ದೇವಿಗೆ ಸುಗಂಧಿ, ಶಾವಂತಿಗೆ ಹಾಗೂ ಮಲ್ಲಿಗೆ ಹೂವಿನ ದೊಡ್ಡ ದೊಡ್ಡ ಮಾಲೆ ಅರ್ಪಿಸುವ ಮೂಲಕ ಹರಕೆ ತಿರಿಸುವುದು ವಿಶೇಷ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಭಾಗಗಳಿಂದ ಬರುವ ಭಕ್ತರು 101, 1001, 10,001 ರೂ., ಸೇರಿ ಲಕ್ಷ ರೂ., ವರೆಗೂ ಹೂವಿನ ಮಾಲೆ ಅರ್ಪಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹೂವಿನ ಅಂಗಡಿ ವ್ಯಾಪಾರಿಗಳು ಹೂವು ಮಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಸೂಕ್ತ ಪೊಲೀಸ್ ಬಂದೋಬಸ್ತ್…
5 ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಔಟ್ ಫೋಸ್ಟ್ ತೆರೆಯಲಿದ್ದು, ಇದು 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು…
ಜ. 22ರಂದು ಸಂಜೆ 6 ಗಂಟೆಗೆ ಚೌಡೇಶ್ವರಿ ದೇವಿಯ ಮೂರ್ತಿ ಉತ್ಸವವು ಶ್ರೀದೇವಿ ಮನೆಯಿಂದ ಅಂಬಾರಿ ಮೆರವಣಿಗೆ ಮೂಲಕ ಹೊರಟು ಡೊಳ್ಳು ಕುಣಿತ, ಕೋಲಾಟಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, 23ರಂದು ಬೆಳಗ್ಗೆ ಗಂಗಾಜಲ ಚೌಡೇಶ್ವರಿ ದೇವಸ್ಥಾನದಲ್ಲಿ ಶೃಂಗರಿಸಿದ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗುವುದು. ಅಂದು ದೇವಿಯ ಉಡಿ ತುಂಬುವ ಕಾರ್ಯಕ್ರಮ, ಮಹಾಪೂಜಾ ನೈವಿಧ್ಯ, ಹರಿಕೆ ಸಲ್ಲಿಸುವುದು ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ. ಜ. 25ರಂದು ಬೆಳಗ್ಗೆ ಓಕಳಿ ಉತ್ಸವ, ಮಧ್ಯಾಹ್ನ ಬೆಲ್ಲದ ಬಂಡಿಯ ಮೆರವಣಿಗೆ, ರಾತ್ರಿ ಭಜನೆ ಸೇರಿ 5 ದಿನಗಳ ಕಾಲ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಲಿವೆ ಎಂದು ಗಂಗಾಜಲ ಚೌಡೇಶ್ವರಿ ದೇವಿಯ ಜಾತ್ರಾ ಉತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net