

ರಾಣೆಬೆನ್ನೂರ: ಹಲವು ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವುದರಿಂದ ಬೆಳ್ಳುಳ್ಳಿ ಬೆಳೆದ ಒಣಗಿಸುವುದು ರೈತರಿಗೆ ಭಾರಿ ಸವಾಲು ತಂದೊಡ್ಡಿದೆ. ಅಲ್ಲದೆ ಇನ್ನೂ ಕೆಲ ದಿನಗಳ ಕಾಲ ಮಳೆ ಇದೇ ರೀತಿ ಮುಂದುವರಿದರೆ ಬೆಳೆಗಾರರು ಆಥಿರ್ಕವಾಗಿ ಸಂಕಷ್ಟಕ್ಕೆ ಸಿಲುಕುವ ಭಿತಿ ಎದುರಾಗಿದೆ.
ಮಳೆ ಇನ್ನೂ ಹೆಚ್ಚಾದರೆ ಬೆಳ್ಳುಳ್ಳಿ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತಾಗುತ್ತದೆ. ಸಾವಿರಾರೂ ರೂ. ಖರ್ಚು ಮಾಡಿ ಬೆಳೆದಿದ್ದ ಬೆಳೆ ಅಧಿಕ ತೇವಾಂಶದಿಂದ ಹಾಳಾಗುವ ಸ್ಥಿತಿ ಎದುರಾಗಲಿದೆ. ತಾಲೂಕಿನ ಇಟಗಿ, ಹನುಮನಹಳ್ಳಿ, ಮುದೇನೂರ, ಮಾಗೋಡ, ಮಣಕೂರ, ಲಿಂಗದಹಳ್ಳಿ, ಅಂತರವಳ್ಳಿ, ಕೃಷ್ಣಾಪುರ, ಹಲಗೇರಿ, ಆಲದಕಟ್ಟಿ, ನಿಟ್ಟೂರ, ಕೊಣನತೆಲಿ, ಸುಣಕಲ್ಲಿಬಿದರಿ, ಯರೇಕುಪ್ಪಿ, ಮೈದೂರ, ಜೋಯಿಸರಹರಳಹಳ್ಳಿ, ಉಕ್ಕುಂದ, ಸರ್ವಂದ, ಅಸುಂಡಿ, ಹುಲಿಹಳ್ಳಿ, ಹೆಡಿಯಾಲ, ಬೆನಕನಕೊಂಡ ಭಾಗದ ರೈತರು ಹೆಚ್ಚಾಗಿ ಬೆಳ್ಳುಳ್ಳಿ ಬೆಳೆದಿದ್ದಾರೆ.
ಹೆಚ್ಚಿದ ಬೆಳೆ ಕ್ಷೇತ್ರ...
ಕಳೆದ ವರ್ಷ 700 ಹೆಕ್ಟೇರ್ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯಲಾಗಿತ್ತು. ಆಗ ಉತ್ತಮ ಬೆಲೆ ದೊರೆತ ಹಿನ್ನಲೆಯಲ್ಲಿ ಪ್ರಸಕ್ತ ವರ್ಷ 2,500 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬೆಳ್ಳುಳ್ಳಿ ಬೆಳೆಯಲಾಗಿದೆ. ಪ್ರತಿ ಎಕರೆಗೆ ಬಿತ್ತನೆ ಬೀಜ, ಗೊಬ್ಬರ, ಕೂಲಿ ಕಾಮಿರ್ಕರ ಖರ್ಚು ಸೇರಿ 30ರಿಂದ 40 ಸಾವಿರ ರೂ. ವರೆಗೆ, ಖರ್ಚು ಮಾಡಿದ್ದಾರೆ. 10, 15 ಎಕರೆ ಜಮೀನು ಇರುವ ಕೆಲವು ರೈತರು ಲಾಂತರ ರೂ. ವರೆಗೂ ಖರ್ಚು ಮಾಡಿದ್ದಾರೆ.
ಕೊಳೆಯುವ ಭೀತಿ...
ಈ ಬಾರಿ ಮೇ ತಿಂಗಳಲ್ಲಿ 71 ಮಿಮೀ ವಾಡಿಕೆ ಮಳೆಯಾಗಬೇಕಿದ್ದು, 133.80 ಮಿಮೀ ಮಳೆ ಸುರಿದಿದೆ. ಜುಲೈನಲ್ಲಿ 163 ಮಿಮೀ ಬದಲಿಗೆ 127.40 ಮಿಮೀ, ಜೂನ್ 1ರಿಂದ ಆಗಸ್ಟ್ ಕೊನೆಯವರೆಗೆ 378.80 ಮಿಮೀ ವಾಡಿಕೆ ಪೈಕಿ 400 ಮಿಮೀ ಮಳೆ ಸುರಿದಿದೆ. ಇದರಿಂದ ತೇವಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ಕೊಳೆಯುವ ಹಂತಕ್ಕೆ ಬಂದಿದೆ. ಅಲ್ಲದೆ ಅರ್ಧದಷ್ಟು ಜಮೀನುಗಳಲ್ಲಿ ಬೆಳ್ಳುಳ್ಳಿ ಬೆಳೆ ಕಟಾವಿಗೆ ಬಂದಿದೆ. ಆದರೆ, ತೇವಾಂಶ ಹೆಚ್ಚಾಗಿ ಬೆಳೆದ ಬೆಳ್ಳುಳ್ಳಿಯನ್ನು ಜಮೀನಿನಿಂದ ಮನೆಗೆ ತರಲಾಗದೆ ಜಮೀನಿನಲ್ಲಿಯೆ ಬಿಡುವ ದುಸ್ಥಿತಿ ಎದುರಾಗಿದೆ.
ಪರಿಹಾರಕ್ಕಾಗಿ ಸರ್ಕಾರದ ಮೊರೆ...
ಈ ಬಾರಿ ಬೆಳೆ ಕೂಡ ಉತ್ತಮವಾಗಿ ಬಂದಿತ್ತು. ಆದರೆ, ನಿರಂತರವಾಗಿ ಮಳೆ ಇರುವ ಹಿನ್ನೆಲೆಯಲ್ಲಿ ಬೆಳೆ ಕೊಳೆಯುವ ಸ್ಥಿತಿಯಲ್ಲಿದೆ. ಇದರಿಂದ ಕೆಲ ರೈತರು ಜಮೀನುಗಳಲ್ಲಿ ಬೆಳ್ಳುಳ್ಳಿ ಬೆಳೆಯನ್ನು ಹಾಗೆಯೇ ಬಿಟ್ಟಿದ್ದಾರೆ. ಮಳೆಗೆ ಸಿಲುಕಿರುವ ಬೆಳ್ಳುಳ್ಳಿ ಬೆಳೆ ಅನ್ನದಾತರನ್ನು ಸಾಲದ ಸುಳಿಗೆ ಸಿಲುಕಿಸಿದೆ. ಆದ್ದರಿಂದ ಸರ್ಕಾರ ಈಗಾಗಲೇ ಬೆಳೆಹಾನಿಯಾಗಿರುವ ಜಮೀನುಗಳಲ್ಲಿ ಸಮೀಕ್ಷೆ ನಡೆಸಿ, ಒಂದು ಎಕರೆಗೆ ಕನಿಷ್ಟ 50 ಸಾವಿರ ರೂ. ಪರಿಹಾರ ಒದಗಿಸುವ ಮೂಲಕ ಸಂಕಷ್ಟದಿಂದ ದೂರ ಮಾಡಬೇಕು ಎಂಬುದು ಅನ್ನದಾತರ ಆಗ್ರಹವಾಗಿದೆ.