

ರಾಣೆಬೆನ್ನೂರ: ಸಂಘಟನೆ ಬಲಿಷ್ಠವಾಗಿದ್ದರೆ ನೌಕರರ ಬೇಡಿಕೆಗಳಿಗೆ ಮನ್ನಣೆ ದೊರೆಯುತ್ತದೆ. ಇದಕ್ಕೆ ಇತ್ತೀಚಿಗೆ ನಾವು ನಡೆಸಿದ ಮುಷ್ಕರವೇ ಸಾಕ್ಷಿಯಾಗಿದೆ ಎಂದು ರಾಜ್ಯ ಪೌರ ನೌಕರರ ಸಂಘದ ಅಧ್ಯಕ್ಷ ಕೆ. ಪ್ರಭಾಕರ ಹೇಳಿದರು.
ನಗರದ ಸಿದ್ಧೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ಥಳಿಯ ಸಂಸ್ಥೆಗಳ ಪೌರ ನೌಕರರ ಶಕ್ತಿ ಪ್ರದರ್ಶನ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಮುಷ್ಕರಕ್ಕೆ ಇಡೀ ಸರ್ಕಾರವೆ ನಡುಗಿ ಹೋಗಿತ್ತು. ಕೇವಲ ಮೂರು ದಿನಗಳ ಕಾಲ ಮುಷ್ಕರ ಕೈಗೊಂಡಿದ್ದಕ್ಕೆ ಹೆದರಿ ನಮ್ಮ ಬೇಡಿಕೆಗಳ ಕುರಿತು ಚಚಿರ್ಸಲು ನಮ್ಮ ಜತೆ ಸಭೆ ನಡೆಸಿದರು. ಸರ್ಕಾರ ನಮ್ಮ 19 ಬೇಡಿಕೆಗಳ ಪೈಕಿ 7 ಬೇಡಿಕೆಗಳನ್ನು ಒಂದು ತಿಂಗಳ ಒಳಗಾಗಿ ಈಡೇರಿಸುವುದಾಗಿ ಲಿಖಿತ ಭರವಸೆ ನೀಡಿದೆ. ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಮುಷ್ಕರ ವಾಪಸ್ ಪಡೆಯಲಾಗಿದೆ. ಸರ್ಕಾರದ ಕಾರ್ಯದಶಿರ್ಗಳಿಗೆ ಒಂದು ತಿಂಗಳ ಗಡುವು ನೀಡಲಾಗಿದ್ದು ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಎರಡನೇ ಹಂತದ ಹೋರಾಟ ಪ್ರಾರಂಭಿಸಲಾಗುವುದು. ಇದರಲ್ಲಿ ರಾಜ್ಯದಲ್ಲಿ ಎಲ್ಲ ಪೌರ ಸಂಸ್ಥೆಗಳ ನೌಕರರು ಭಾಗಿಯಾಗಲಿದ್ದಾರೆ ಎಂದರು.
ರಾಜ್ಯ ಪೌರ ನೌಕರರ ಸಂಘದ ಜಂಟಿ ಕಾರ್ಯದಶಿರ್ ಯು. ರಾಘವೇಂದ್ರ ಪ್ರಸಾದ ಮಾತನಾಡಿ, ಸಂಘಟನೆ ಒಬ್ಬರ ಮೇಲೆ ಇರಬಾರದು ಪ್ರತಿಯೊಬ್ಬರೂ ಅದರಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಸಂಘಟನೆ ಬಲವರ್ಧನೆಗೆ ರಾಜ್ಯಾದ್ಯಾಂತ ಪ್ರವಾಸ ಕೈಗೊಳ್ಳಲಾಗುವುದು. ನಮ್ಮ ಹಸಿವು ನೀಗಬೇಕಾದರೆ ಸಂಘಟನೆ ಮುಖ್ಯ, ಎಲ್ಲರೂ ಒಗ್ಗಟ್ಟಾಗಿ ನಡೆಯಬೇಕು. ಇಂತಹ ಸಭೆಗಳಲ್ಲಿ ಭಾಗವಹಿಸುವುದರ ಮೂಲಕ ನಮ್ಮ ಹಕ್ಕುಗಳ ಬಗ್ಗೆ ಮಾಹಿತಿ ದೊರೆಯಲಿದೆ. ನಮ್ಮ ಹಕ್ಕನ್ನು ಪಡೆದುಕೊಳ್ಳಲು ಸಂಘಟನೆ ಅವಶ್ಯವಾಗಿದೆ. ಶಿಸ್ತು, ಸಂಯಮ ಪಾಲನೆ ಮಾಡಬೇಕು ಎಂದರು.
ರಾಜ್ಯಾಧ್ಯಕ್ಷ ಕೆ. ಪ್ರಭಾಕರ ಹಾವೇರಿ ಜಿಲ್ಲೆಯ ನೂತನ ಪದಾಧಿಕಾರಿಗಳ ಹೆಸರು ಘೋಷಣೆ ಮಾಡಿದರು. ಜಿಲ್ಲಾ ಅಧ್ಯಕ್ಷರಾಗಿ ಏಳುಕೋಟೆಪ್ಪ ಗೋಣಿಬಸಮ್ಮನವರ, ಕಾರ್ಯದಶಿರ್ಯಾಗಿ ಪ್ರಭು ಬಾಲೆಹೊಸೂರ, ಜಂಟಿ ಕಾರ್ಯದಶಿರ್ಯಾಗಿ ಸತೀಶ, ಸಂಘಟನಾ ಕಾರ್ಯದಶಿರ್ಯಾಗಿ ಶಿವರುದ್ರಪ್ಪ, ಸಹ ಕಾರ್ಯದಶಿರ್ಯಾಗಿ ಅರುಣಕುಮಾರ ನೇಮಕ ಮಾಡಲಾಯಿತು.
ಇದಕ್ಕೂ ಮುನ್ನ ನಗರದಲ್ಲಿ ಪೌರ ನೌಕರರು ಮೆರವಣಿಗೆ ನಡೆಸಿದರು.
ಸಂಘದ ಮಾಜಿ ಅಧ್ಯಕ್ಷ ಜಿ.ಎಸ್. ಮಂಜುನಾಥ, ಮೈಸೂರು ವಿಭಾಗದ ಉಪಾಧ್ಯಕ್ಷ ಆರ್.ನಾಗರಾಜ, ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಪ್ಪ ಕರಡೆಣ್ಣನವರ, ನಗರಸಭೆ ಸದಸ್ಯರಾದ ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡ್ರ, ಮಂಜುಳಾ ಹತ್ತಿ ಮತ್ತಿತರರು ಇದ್ದರು.