ಕಾಂಗ್ರೆಸ್​ ಜನರಿಗೆ ಮೋಸ ಮಾಡುತ್ತಲೇ ಬಂದಿದೆ; ಪ್ರಲ್ಹಾದ ಜೋಶಿ

29-RNR-03
Published on
ರಾಣೆಬೆನ್ನೂರ: ಇಂದಿರಾಗಾಂಧಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬದಲು ದೇಶದಲ್ಲಿ ತುರ್ತು ಪರಿಸ್ಥಿತಿ ಹೇರುವ ಮೂಲಕ ದೇಶದ ಜನರು ಹೊಟ್ಟೆ ಹಸಿವಿನಿಂದ ಬಳಲುವುದು ಸೇರಿ ನಾನಾ ರೀತಿಯ ತೊಂದರೆ ಎದುರಿಸುವಂತೆ ಮಾಡಿದರು. ಇದು ಕಾಂಗ್ರೆಸ್​ ಜನರಿಗೆ ಮೊದಲಿನಿಂದಲೂ ಮಾಡುತ್ತ ಬಂದಿರುವ ಮೋಸದಾಟದ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸಿಟಿಜನ್ಸ್​ ಫಾರ್​ ಸೋಶಿಯಲ್​ ಜಸ್ಟಿಸ್​ ವತಿಯಿಂದ ಶನಿವಾರ ರಾತ್ರಿ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ಕರಾಳ ದಿನಗಳ ವಿರುದ್ಧ ನಡೆದಿರುವ ರೋಚಕ ಕಥೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೇಶದ ಪ್ರಧಾನಮಂತ್ರಿಯ ಅಧಿಕಾರವನ್ನು ಯಾರೂ ಪ್ರಶ್ನಿಸುವ ಹಾಗಿಲ್ಲ ಎನ್ನುವ ಅಧಿಕಾರ ಜಾರಿಗೆ ತಂದರು. ಸೋಮವಾರ ಬರುವ ನ್ಯಾಯದ ತೀರ್ಪನ್ನು ತಡೆಯಲು ಶನಿವಾರ ತಿದ್ದುಪಡಿ ಮಾಡಿದರು. ಸಂವಿಧಾನ ಶೇ. 60 ಭಾಗವನ್ನು ರಿರೈಟ್​ ಮಾಡಿದರು. 21 ತಿಂಗಳಲ್ಲಿ 45 ಸುಗ್ರಿವಾಜ್ಞೆ ಕಾಯ್ದೆಗಳನ್ನು ತಂದರು. ಇದರ ಬಗ್ಗೆ ಮಾತನಾಡುವರನ್ನು ಒಳಗೆ ಹಾಕುವ ಕೆಲಸ ಮಾಡುತ್ತಿದ್ದರು. ಕಾನೂನು ತಿರುಚುವ ಮೂಲಕ ದೇಶದ ಜನರಿಗೆ ಅನ್ಯಾಯ ಮಾಡಿದರು. 2ಲಕ್ಷಕ್ಕೂ ಹೆಚ್ಚು ಜನರನ್ನು ಬಂಧಿಸಿದರು. ಬಲವಂತದಿಂದ ಸಂತಾನಹರಣ ಚಿಕಿತ್ಸೆ ಮಾಡಲಾಯಿತು. ನೌಕರರನ್ನು ಸೇವೆಯಿಂದ ತೆಗೆದುಹಾಕಲಾಯಿತು. ಚುನಾಯಿತ ಸರ್ಕಾರಗಳನ್ನು ಕಿತ್ತು ಎಸೆಯಲಾಯಿತು ಎಂದು ಆರೋಪಿಸಿದರು. ದೇಶದ ತುರ್ತು ಪರಿಸ್ಥಿತಿಯಲ್ಲಿ ಮೂರು ದಿನಗಳ ಕಾಲ ಪತ್ರಿಕೆಗಳು ಸಹ ಮುದ್ರಣವಾಗದಂತೆ ವಿದ್ಯುತ್​ ಸಂಪರ್ಕ ಕಡಿತಗೊಳಿಸಲಾಯಿತು. ರಾಮಕೃಷ್ಣ ಹೆಗಡೆ, ಅದ್ವಾನಿ ಸೇರಿ ಅನೇಕರು ಜೈಲು ವಾಸ ಅನುಭವಿಸಿದರು. ದೇಶದ ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಇದನ್ನು ನೆನಪಿಸಿಕೊಳ್ಳಬೇಕಿದೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗ ಸಂವಿಧಾನ ಬದಲಾವಣೆ ತಂದಿದೆ. ದೇಶದ ಸಂವಿಧಾನ ಮೂಲಕ್ಕೆ ವಿರುದ್ಧವಾಗಿ ತುರ್ತು ಪರಿಸ್ಥಿತಿ ಹೇರಲಾಗಿದೆ. ಹೀಗಾಗಿ ಇದರ ಬಗ್ಗೆ ಜನರಿಗೆ ತಿಳಿಸಿ ಪ್ರಜಾಪ್ರಭುತ್ವದ ಉಳಿಸಬೇಕಿದೆ ಎಂದರು. ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಯಾರಾದರೂ ಕೋಮುವಾದಿ ರೀತಿ ಭಾಷಣ ಮಾಡಿದರೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ. ಕರ್ನಾಟಕವನ್ನು ಪೊಲೀಸ್​ ರಾಜ್ಯ ಮಾಡಲು ಹೊರಟಿದ್ದೀರಾ, ಅದು ಸಾಧ್ಯವಿಲ್ಲ. ಯಾವಾಗ ರಾಜಶಕ್ತಿ ಮತ್ತು ಪ್ರಜಾಶಕ್ತಿ ನಡುವೆ ಸಂಘರ್ಷ ಅನುತ್ತದೆ ಆಗ ಪ್ರಜಾಪ್ರಭುತ್ವಕ್ಕೆ ಜಯವಾಗಿದೆ. ಇತಿಹಾಸದಲ್ಲಿ ಯಾವ ರೀತಿ ತುರ್ತು ಪರಿಸ್ಥಿತಿ ಕರಾಳವಾಗಿ ಅಂತ್ಯವಾಗಿತ್ತೋ ಅದೇ ರೀತಿ ನಿಮ್ಮ ಆಡಳಿತವೂ ಅಂತ್ಯವಾಗುತ್ತದೆ. ಅಧಿಕಾರದಲ್ಲಿ ಜನಪರ ಕೆಲಸ ಮಾಡಬೇಕು. ಏಕಪಕ್ಷೀಯವಾದ ತುಷ್ಠಿಕರಣದ ರಾಜಕಾರಣ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮಗೆ ರಾಜಕಾರಣ ಗೊತ್ತಿರಲಿಲ್ಲ. ದೇಶ ಅಂದರೆ, ಸ್ವಾತಂತ್ರ$್ಯ ಅಂದರೆ ಗೊತ್ತು. ಈ ದೇಶಕ್ಕೆ ಸ್ವಾತಂತ್ರ$್ಯ ಹೇಗೆ ಬಂದಿದೆ ಅಂತ ಗೊತ್ತಿತ್ತು. ಅದಕ್ಕೆ ದಕ್ಕೆ ಬಂದಿದೆ ಅಂದಾಗ ನಮ್ಮ ರಕ್ತ ಕುದಿಯುತ್ತಿತ್ತು. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದರ ವಿರುದ್ಧ ಅಲಹಾಬಾದ್​ ಹೈಕೋರ್ಟ್​ ನೀಡಿದ್ದ ಆದೇಶದ ವಿರುದ್ಧ ಇಂದಿರಾಗಾಂಧಿ ಸುಪ್ರೀರ್ ಕೊರ್ಟ್​ಗೆ ಹೋಗಿದ್ದರು. ಅಲ್ಲಿ ನ್ಯಾ. ಕೃಷ್ಣ ಐಯ್ಯರ ಅವರು ಇಂದಿರಾ ಗಾಂಧಿ ವಿರುದ್ಧ ಅತ್ಯಂತ ಕೆಟ್ಟ ಆದೇಶ ಮಾಡಿತು. ಆ ಆದೇಶ ಜಾರಿಯಾದರೆ ಇಂದಿರಾ ಗಾಂಧಿ ರಾಜೀನಾಮೆ ಕೊಡಲೇಬೇಕಿತ್ತು. ಜೂನ್​ 28ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಜಯಪ್ರಕಾಶ ನಾರಾಯಣ, ಆಟಲ್​ ಬಿಹಾರಿ ವಾಜಪೇಯಿ, ಎಲ್​.ಕೆ. ಅಡ್ವಾಣಿ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ಸೇರಿದ್ದರು. ಇಂದಿರಾ ಗಾಂಧಿ ರಾತೋರಾತ್ರಿ ತುರ್ತುಪರಿಸ್ಥಿತಿ ಘೋಷಣೆ ಮಾಡಿದರು. ಸಾವಿರಾರು ಜನರು ಜೈಲು ಸೇರಿದ್ದರು. ಎಲ್​.ಕೆ. ಆಡ್ವಾಣಿ ಬೆಂಗಳೂರು ಜೈಲಿನಲ್ಲಿ ಇದ್ದರು. ಅಟಲ್​ ಬಿಹಾರಿ ವಾಜಪೇಯಿ, ಯಡಿಯೂರಪ್ಪ ಅವರೂ ಜೈಲಿನಲ್ಲಿದ್ದರು. ಒಟ್ಟು 6632 ಕೇಸ್​ಗಳನ್ನು ಹಾಕಿದ್ದರು. 4230 ಕೇಸ್​ಗಳು ಆರ್​ಎಸ್​ಎಸ್​ ಮೇಲೆ ಹಾಕಲಾಗಿತ್ತು. ಈ ತುರ್ತು ಪರಿಸ್ಥಿತಿಯನ್ನು ತೀವ್ರ ವಿರೋಧ ಮಾಡಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ.ಸಿ.ಪಾಟೀಲ, ತುರ್ತು ಪರಿಸ್ಥಿತಿ 50 ವರ್ಷ ರಾಜ್ಯ ಸಮಿತಿ ಸಂಚಾಲಕ ಮಹೇಂದ್ರ ಕೌತಾಳ, ತುರ್ತು ಪರಿಸ್ಥಿತಿ ಸಮಯದಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದ ರಾಮಕೃಷ್ಣ ತಾಂಬೆ, ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ಮಂಜುನಾಥ ಕಾಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net