

ಮುಂಬೈ : ಹೆಚ್ಚುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನರು ಜನನಿಬಿಡ ಸ್ಥಳಗಳಿಗೆ ಹೋಗುವುದನ್ನು ತಡೆಯಲು ಮತ್ತು ಸೋಂಕಿತರನ್ನು ಬೇಗ ಪತ್ತೆ ಹಚ್ಚಲು ಮುಂಬೈ ನಗರಪಾಲಿಕೆಯು ಹೊಸತೊಂದು ಮಾರ್ಗವನ್ನು ಹುಡುಕಿದೆ. ಅದೆಂದರೆ ಮಾಲ್, ಬಸ್ ನಿಲ್ದಾಣ, ರೈಲು ನಿಲ್ದಾಣ, ಮಾರ್ಕೆಟ್, ರೆಸ್ಟೋರೆಂಟ್, ಸರ್ಕಾರಿ ಕಚೇರಿ ಮುಂತಾದೆಡೆ ರಾಂಡಮ್ ಆಗಿ ಕರೊನಾ ಪರೀಕ್ಷೆ ನಡೆಸುವುದು. ಕಡ್ಡಾಯವಾಗಿರುವ ಈ ಪರೀಕ್ಷೆಯನ್ನು ತಪ್ಪಿಸಿಕೊಳ್ಳುವುದಕ್ಕಾದರೂ ಜನರು ಕೆಲಸವಿಲ್ಲದೆ ಓಡಾಡುವುದನ್ನು ನಿಲ್ಲಿಸುತ್ತಾರೆ ಎಂಬುದು ಪಾಲಿಕೆಯ ಆಶಯವಿದ್ದ ಹಾಗಿದೆ.
ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯು ಇಂದು ಜನನಿಬಿಡ ಪ್ರದೇಶಗಳಲ್ಲಿ ರಾಪಿಡ್ ಆ್ಯಂಟಿಜನ್ ಟೆಸ್ಟಿಂಗ್(ಆರ್ಎಟಿ) ನಡೆಸಲು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದರ ಪ್ರಕಾರ ಮಾಲ್ಗಳಲ್ಲಿ, ರಾಜ್ಯದ ಒಳಗೆ ಪ್ರವೇಶಿಸುವ ರೈಲ್ವೇ ನಿಲ್ದಾಣಗಳಲ್ಲಿ, ಎಂಎಸ್ಆರ್ಟಿಸಿ ಬಸ್ ಡಿಪೋ, ಖಾವ್ ಗಲ್ಲಿ, ಮಾರ್ಕೆಟ್ ಪ್ರದೇಶ, ಪ್ರವಾಸೀ ಸ್ಥಳಗಳು ಮತ್ತು ಸರ್ಕಾರಿ ಕಚೇರಿಗಳ ಆವರಣದಲ್ಲಿ ಇರುವ ಯಾವುದೇ ವ್ಯಕ್ತಿಯನ್ನು ನಿಲ್ಲಿಸಿ ಕರೊನಾ ಪರೀಕ್ಷೆಗೊಳಪಡಿಸುವ ಅಧಿಕಾರವನ್ನು ತನ್ನ ಸಿಬ್ಬಂದಿಗೆ ಬಿಎಂಸಿ ನೀಡಿದೆ.
ಈ ರೀತಿ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ಜನರ ಅನುಮತಿ ಬೇಕಿಲ್ಲ. ಅರ್ಥಾತ್ ಜನತುಂಬಿದ ಪ್ರದೇಶಗಳಲ್ಲಿ ಹೋದರೆ, ಬಿಎಂಸಿ ಸಿಬ್ಬಂದಿ ಪರೀಕ್ಷೆ ಮಾಡಿಸಲು ಆಯ್ಕೆ ಮಾಡಿದಲ್ಲಿ, ಅದು ಕಡ್ಡಾಯವಾಗುತ್ತದೆ. "ಯಾವೊಬ್ಬ ನಾಗರಿಕ ಪರೀಕ್ಷೆಯನ್ನು ನಿರಾಕರಿಸಿದಲ್ಲಿ, ಅದು ಸಾಂಕ್ರಾಮಿಕ ಕಾಯ್ದೆ, 1897 ರ ಅಡಿಯಲ್ಲಿ ಅಪರಾಧವಾಗುತ್ತದೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಬಿಎಂಸಿ ಹೇಳಿದೆ.
ಈ ಪ್ರಕಾರವಾಗಿ ದಿನವೊಂದಕ್ಕೆ ಮುಂಬೈನ ಪ್ರತಿಯೊಂದು ರೈಲು ನಿಲ್ದಾಣದಲ್ಲಿ 1000 ಪ್ರಯಾಣಿಕರ ಮೇಲೆ ಮತ್ತು ಪ್ರತಿಯೊಂದು ಮಾಲ್ನಲ್ಲಿ 400 ಜನರ ಮೇಲೆ ಕಡ್ಡಾಯ ಕರೊನಾ ಪರೀಕ್ಷೆ ನಡೆಸುವ ಟಾರ್ಗೆಟ್ಅನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಜೊತೆಗೆ ನಗರದ ಪ್ರತಿಯೊಂದು ವಾರ್ಡ್ನಲ್ಲಿ ಪ್ರತಿದಿನ ತಲಾ 1000 ಪರೀಕ್ಷೆಗಳನ್ನು ಮಾಡಿಸಬೇಕು ಎನ್ನಲಾಗಿದ್ದು, ಈ ಮೂಲಕ ನಗರದ 24 ವಾರ್ಡ್ಗಳಲ್ಲಿ ಒಟ್ಟು 24,000 ಪರೀಕ್ಷೆಗಳನ್ನು ಪ್ರತಿದಿನ ನಡೆಸುವ ಸಿದ್ಧತೆ ನಡೆದಿದೆ.
ಎಲ್ಲೆಡೆ ಈ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಿರುವ ಬಿಎಂಸಿ, ಮಾಲ್ಗಳಲ್ಲಿ ಮಾತ್ರ ಜನರೇ ಅದರ ವೆಚ್ಚವನ್ನು ಭರಿಸಬೇಕು ಎಂದು ಹೇಳಿದೆ. ಕರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ವೃಥಾ ತಿರುಗಾಡುವುದರ ಮೇಲೆ ಅಂಕುಶ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಜೊತೆಗೇ ಕರೊನಾ ಸೋಂಕು ತಗುಲಿದ ವ್ಯಕ್ತಿಯನ್ನು ಬೇಗ ಪತ್ತೆ ಹಚ್ಚಿ ಅದು ಮತ್ತಷ್ಟು ಜನಕ್ಕೆ ಹರಡದಂತೆ ತಡೆಯಲು ಇದು ಸಹಾಯಕವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ