

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು, ಬಾಂಬ್ ಸ್ಫೋಟ ಕೃತ್ಯದ ಸಂಚಿನಲ್ಲಿ ಭಾಗಿಯಾಗಿರುವ ಆರೋಪದ ಮೇರೆಗೆ ಮತ್ತೊಬ್ಬ ಶಂಕಿತನನ್ನು ಬಂಧಿಸಿದ್ದಾರೆ.
ಮಾಝ್ ಮುನೀರ್ ಅಹಮದ್ (೨೬) ಬಂಧಿತ ಶಂಕಿತ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಫಿಶ್ ಮಾರ್ಕೆಟ್ ರಸ್ತೆಯ ಮಾಝ್ ಮುನೀರ್, ಇಂಜಿನಿಯರಿಂಗ್ ಪದವೀಧರನಾಗಿದ್ದಾನೆ. ಕೆೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಚಿಕ್ಕಮಗಳೂರಿನ ಶಂಕಿತ ಮುಜಮೀಲ್ ಶರ್ೀನನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಆತ ನೀಡಿದ್ದ ಮಾಹಿತಿ ಆಧರಿಸಿ ಮಾಝ್ ಮುನೀರ್ ಅಹ್ಮದ್‌ನನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಮೂಲಗಳು ಹೇಳಿವೆ.
ಭಯೋತ್ಪಾದನಾ ಸಂಘಟನೆಗಳ ಪರವಾಗಿ ಮಂಗಳೂರಿನಲ್ಲಿ ಗೋಡೆ ಬರಹ ಬರೆದಿದ್ದ ಪ್ರಕರಣ ಹಾಗೂ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಬಾಂಬ್‌ಗಳನ್ನು ಪರೀಕ್ಷಾರ್ಥವಾಗಿ ಸ್ಫೋಟಿಸಿದ್ದ ಪ್ರಕರಣದಲ್ಲಿ ಮಾಝ್ ಮುನೀರ್‌ನನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಈತ, ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದ. ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದಲ್ಲಿ ಈತನ ಪಾತ್ರವಿರುವ ಅನುಮಾನದ ಮೇರೆಗೆ ವಿಚಾರಣೆಗಾಗಿ ಇತ್ತೀಚೆಗೆ ಕಸ್ಟಡಿಗೆ ಪಡೆಯಲಾಗಿತ್ತು. ಆದರೆ, ಯಾವುದೇ ಖಚಿತ ಮಾಹಿತಿ ಲಭ್ಯವಾಗಿರಲಿಲ್ಲ. ಹೀಗಾಗಿ, ಆತನನ್ನು ವಾಪಸು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ ಕರ್ನಾಟಕ, ತಮಿಳುನಾಡು ಹಾಗೂ ಉತ್ತರ ಪ್ರದೇಶದ ೧೮ ಕಡೆಗಳಲ್ಲಿ ದಾಳಿ ಮಾಡಿದಾಗ, ಮುಜಮೀಲ್ ಶರೀಫ್ ಬಗ್ಗೆ ಸುಳಿವು ಸಿಕ್ಕಿತ್ತು. ಮುಜಮೀಲ್‌ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಮಾಝ್ ಹೆಸರು ಬಾಯ್ಬಿಟ್ಟಿದ್ದ. ಮುಜಮೀಲ್ ಹೇಳಿಕೆ ಹಾಗೂ ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇದೀಗ ಮಾಝ್‌ನನ್ನು ಬಂಧಿಸಲಾಗಿದೆ ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿವೆ.
ಮಾಝ್ ಮೊದಲ ಆರೋಪಿ?
ಬಂಧಿತ ಮಾಝ್ ಮುನೀರ್ ಅಹಮದ್‌ನನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಬಾಂಬ್ ಇರಿಸಿದ್ದ ಎನ್ನಲಾದ ತೀರ್ಥಹಳ್ಳಿಯ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಎರಡು ಮತ್ತು ಮೂರನೇ ಆರೋಪಿಗಳಾಗಿದ್ದಾರೆ. ಮುಜಮೀಲ್ ಶರ್ೀನನ್ನು ನಾಲ್ಕನೇ ಆರೋಪಿಯನ್ನಾಗಿ ಮಾಡಲಾಗಿದೆ. ಬಾಂಬ್ ಸ್ಫೋಟದ ಸಂಚಿನಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿರುವ ಮಾಹಿತಿ ಇದ್ದು, ತನಿಖೆ ಮುಂದುವರಿಸಲಾಗಿದೆ.
ಬಾಂಬ್ ತಯಾರಿಯಲ್ಲಿ ಪರಿಣಿತರು:
ಮಾಝ್ ಹಾಗೂ ಅಬ್ದುಲ್ ಮಥೀನ್ ಇಬ್ಬರೂ ಕಚ್ಚಾ ಬಾಂಬ್ (ಐಇಡಿ) ತಯಾರಿಸುವಲ್ಲಿ ಪರಿಣಿತರು. ಇತರೆ ಶಂಕಿತರಿಗೆ ಇವರಿಬ್ಬರೂ ತರಬೇತಿ ನೀಡುತ್ತಿದ್ದರೆಂಬು ಗೊತ್ತಾಗಿದೆ.
ಶಿವಮೊಗ್ಗದ ಗುರುಪುರ-ಪುರಲೆ ಸಮೀಪದಲ್ಲಿರುವ ತುಂಗಾ ನದಿಯ ತೀರದಲ್ಲಿ ಶಂಕಿತರು ಪರೀಕ್ಷಾರ್ಥವಾಗಿ ಬಾಂಬ್‌ಗಳನ್ನು ಸ್ಫೋಟಿಸಿದ್ದರು. ರಾಷ್ಟ್ರಧ್ವಜವನ್ನೂ ಸುಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಶಿವಮೊಗ್ಗ ಪೊಲೀಸರು, ಮಾಝ್ ಹಾಗೂ ಸೈಯದ್ ಯಾಸೀನ್ ಎಂಬಾತನನ್ನು ಬಂಧಿಸಿದ್ದರು. ೧೪ ಮೊಬೈಲ್, ಡಾಂಗಲ್, ೨ ಲ್ಯಾಪ್‌ಟಾಪ್, ಪೆನ್‌ಡ್ರೈವ್, ಎಲೆಕ್ಟ್ರಾನಿಕ್ ಉಪಕರಣ, ರಿಲೆ ಸರ್ಕಿಟ್, ಬಲ್ಬ್ಗಳು, ಬೆಂಕಿಪೊಟ್ಟಣ, ಬ್ಯಾಟರಿಗಳು, ಸ್ಫೋಟದ ಕಚ್ಚಾ ವಸ್ತುಗಳು, ಪ್ರಮುಖ ದಾಖಲೆಗಳು ಹಾಗೂ ಕಾರು ಜಪ್ತಿ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.