

ಬೆಂಗಳೂರು: ಬೆಂಗಳೂರಿನ ದಿ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಏಕಕಾಲಕ್ಕೆ ನಾಲ್ಕು ರಾಜ್ಯಗಳಲ್ಲಿ ಶಂಕಿತ ಉಗ್ರರಿಗೆ ಸಂಬಂಧಿಸಿದ 11 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಸ್ಫೋಟಕ್ಕೆ ಷಡ್ಯಂತ್ರ ರೂಪಿಸಿದ್ದ ವಿದೇಶಿ ಹ್ಯಾಂಡ್ಲರ್ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಈ ದಾಳಿ ನಡೆದಿದೆ.
ಮಾರ್ಚ್ 3ರಂದು ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಾಂಬ್ ಇಟ್ಟು ಸ್ಫೋಟಿಸಲಾಗಿತ್ತು. ಹೋಟೆಲ್ ಸಿಬ್ಬಂದಿ, ಗ್ರಾಹಕರು ಸೇರಿ ಹಲವರಿಗೆ ಗಾಯಗಳಾಗಿತ್ತು. ತನಿಖೆ ಕೈಗೊಂಡ ಅಧಿಕಾರಿಗಳು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅಬ್ದುಲ್ ಮತೀನ್ ಅಹ್ಮದ್ ತಾಹಾ (29) ಮತ್ತು ಮುಸ್ಸಾವಿರ್ ಹುಸೇನ್ ಶಝೀಬ್ (30) ಎಂಬುವರನ್ನು ಕೋಲ್ಕತದಲ್ಲಿ ಬಂಧಿಸಿದ್ದರು.
ಶಂಕಿತರ ವಿಚಾರಣೆ ವೇಳೆ ವಿದೇಶಿ ಹ್ಯಾಂಡ್ಲರ್ ಕೈವಾಡವಿರುವುದು ದೃಢವಾಗಿತ್ತು. ವಿದೇಶಿ ಉಗ್ರನ ಜತೆ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಮಾಡುವ ಉದ್ದೇಶಕ್ಕೆ ಮಂಗಳವಾರ ಎನ್‌ಐಎ ಅಧಿಕಾರಿಗಳು, ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದ 11 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಮೂಲಗಳ ಪ್ರಕಾರ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಮತ್ತು ಬನಶಂಕರಿಯಲ್ಲಿ ಶಂಕಿತರ ಸ್ಥಳಗಳಲ್ಲಿ ಜಾಲಾಡಲಾಗಿದೆ. ಕೊಯಮತ್ತೂರಿನಲ್ಲಿ ಇಬ್ಬರು ವೈದ್ಯರ ಮನೆಗಳು, ಕ್ಲಿನಿಕ್‌ಗಳಲ್ಲಿ ಪರಿಶೀಲನೆ ನಡೆಸಲಾಗಿದೆ.
ಈ ಪೈಕಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ 2021ರ ಎಲ್‌ಇಟಿ ಪಿತೂರಿ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಉಗ್ರರೂ ಸೇರಿದ್ದಾರೆ. ಶಂಕಿತರ ಅಡಗು ತಾಣ ಮತ್ತು ವಾಸಸ್ಥಳಗಳ ಮೇಲೆ ದಾಳಿ ನಡೆಸಿ ವಿವಿಧ ಬಗೆಯ ಡಿಜಿಟಲ್ ಸಾಧನಗಳು, ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ವಿದೇಶಿ ಹ್ಯಾಂಡ್ಲರ್‌ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ ಶಂಕಿತ ಉಗ್ರರು, ಆತನ ಆಣತಿಯಂತೆ ಕೆಫೆ ಸ್ಫೋಟಿಸಿದ್ದರು. ಈ ಹಿಂದೆ ಶಿವಮೊಗ್ಗ, ಮಂಗಳೂರು ಮತ್ತು ಕೊಯಮತ್ತೂರಿನ ಉಗ್ರ ಚಟುವಟಿಕೆಗಳಲ್ಲಿ ಮತೀನ್ ಅಹ್ಮದ್ ಮತ್ತು ಮುಸ್ಸಾವಿರ್ ಕೈವಾಡ ಇರುವುದು ಬೆಳಕಿಗೆ ಬಂದಿತ್ತು. ಇದಕ್ಕಾಗಿ ವಿದೇಶಿದಲ್ಲಿಯೇ ಕುಳಿತು ಹ್ಯಾಂಡ್ಲರ್, ಹಣಕಾಸಿನ ಪೂರೈಕೆ ಮಾಡಿದ್ದ. ಕೇವಲ ಬಂಧಿತರು ಮಾತ್ರ ಕೃತ್ಯದಲ್ಲಿ ಭಾಗಿಯಾಗಿರಲಿಲ್ಲ. ದೊಡ್ಡ ಷಡ್ಯಂತ್ರ ರೂಪಿಸಲು ಹಲವರ ಕೈವಾಡ ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.