

ಬೆಂಗಳೂರು: ದಿ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟಕಕ್ಕೆ ಶಂಕಿತ ಉಗ್ರರು ತಮಿಳುನಾಡಿನ ಚೆನ್ನೈ ನಗರದಲ್ಲಿ ಕಚ್ಚಾ ವಸ್ತುಗಳನ್ನು ಖರೀದಿಸಿದ್ದರೆಂಬ ವಿಚಾರ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮುಸಾವೀರ್ ಹುಸೇನ್ ಶಾಜಿಬ್ ಮತ್ತು ಅಬ್ದುಲ್ ಮತೀನ್ ತಾಹ, ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಮೇಲೆ ತಮಿಳುನಾಡಿನಲ್ಲಿ ಅಜ್ಞಾತವಾಗಿ ಇದ್ದುಕೊಂಡೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಸುಧಾರಿತ ಸ್ಫೋಟಕ (ಐಇಡಿ) ತಯಾರಿಕೆಗೆ ಟೈಮರ್, ಎಲೆಕ್ಟ್ರಿಕ್ ಸರ್ಕ್ಯುಟ್ ಮತ್ತು ರಾಸಾಯನಿಕ ವಸ್ತುಗಳನ್ನು ಚೆನ್ನೈ ನಗರದಲ್ಲಿ ಖರೀದಿಸಿ ಬಾಂಬ್ ತಯಾರಿಸಿದ್ದರು.
ಈ ಮಾಹಿತಿ ಹಿನ್ನೆಲೆಯಲ್ಲಿ ಅಂಗಡಿ ಪರಿಶೀಲನೆಗೆ ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಬಾಂಬರ್ ಮುಸಾವೀರ್ ಮತ್ತು ಸಂಚುಕೋರ ಮತೀನ್‌ನನ್ನು ಕೆಲ ದಿನಗಳ ಹಿಂದೆ ಎನ್‌ಐಎ ಬಂಧಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ ಶಂಕಿತರು ಬಾಯ್ಬಿಟ್ಟಿದ್ದಾರೆ. ಫೆ.29ರಂದು ರಾತ್ರಿ ಚೆನ್ನೈ ನಗರದಿಂದ ಹೊರಟು ಟಿಫನ್ ಬಾಕ್ಸೃ್ ಬ್ಯಾಗ್‌ನಲ್ಲಿ ಬಾಂಬ್ ತಂದು ಕೆಫೆಯಲ್ಲಿ ಇಡಲಾಯಿತು. ನಿರೀಕ್ಷಿತ ಪ್ರಮಾಣದ ಸಿಡಿದಿದ್ದರೆ ಹೆಚ್ಚಿನ ಹಾನಿ ಉಂಟಾಗುತ್ತಿತ್ತು ಎಂದು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.