ಬೆಂಗಳೂರು : ಕನ್ನಡದಲ್ಲಿ ‘ವೈಶಂಪಾಯನ ತೀರ’, ‘ಜಲಪಾತ’ ನಿರ್ದೇಶಕ ರಮೇಶ್ ಬೇಗಾರ್, ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಜೀವನಾಧಾರಿತ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿರುವುದು ಗೊತ್ತೇ ಇದೆ. ಈ ಐತಿಹಾಸಿಕ ಚಿತ್ರದಲ್ಲಿ ‘ನೆನಪಿರಲಿ ಪ್ರೇಮ್’ ಕೆಂಪೇಗೌಡರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಚಿತ್ರದ ಸ್ಟ್‌ಲುಕ್ ರಿಲೀಸ್ ಮಾಡಲಾಗಿತ್ತು. ಆದರೆ, ಸಿನಿಮಾ ಟೈಟಲ್ ಘೋಷಣೆ ಮಾಡಿರಲಿಲ್ಲ. ಇದೀಗ ಶನಿವಾರ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಚಿತ್ರದ ಟೀಸರ್ ಮೂಲಕ ಶೀರ್ಷಿಕೆ ಘೋಷಿಸಲಾಗಿದ್ದು, ‘ಕೆಂಪಾಂಬುಧಿ’ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್-ಪ್ರೊಡಕ್ಷನ್ ಕಾರ್ಯಗಳು ಆರಂಭಗೊಂಡಿವೆ. ಚಿತ್ರದ ಕುರಿತಂತೆ ನಿರ್ದೇಶಕ ರಮೇಶ್ ಬೇಗಾರ್ ‘ವಿಜಯವಾಣಿ’ಗೆ ಮಾಹಿತಿ ನೀಡಿದರು. ‘ಕನ್ನಡದಲ್ಲಿ ಐತಿಹಾಸಿಕ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಅದನ್ನರಿತು ನಾನು ಈ ಚಿತ್ರಕ್ಕೆ ಮುಂದಾದೆ. ನನ್ನ ಹಿಂದಿನ ‘ಜಲಪಾತ’, ‘ವೈಶಂಪಾಯನ ತೀರ’ ಚಿತ್ರಗಳು ಪರಿಸರ ಕಾಳಜಿ ಕುರಿತಾಗಿದ್ದವು. ಅದರಂತೆ ಅದೇ ವಿಷಯ ಇಟ್ಟುಕೊಂಡು ಐತಿಹಾಸಿಕ ಸಿನಿಮಾ ಮಾಡಿದರೆ ಹೇಗೆ ಎಂದು ಯೋಚನೆ ಮಾಡಿದಾಗ ನನಗೆ ಕೆಂಪೇಗೌಡರು ಚರಿತ್ರೆ ನೆನಪಾಯಿತು. ಅದೇ ಯೋಚನೆಯಿಂದ ಈ ಕಥೆಯನ್ನು ಕೈಗೆತ್ತಿಕೊಂಡೆ. ‘ಕೆಂಪಾಂಬುಧಿ’ ನಾಡಪ್ರಭು ಕೆಂಪೇಗೌಡರ ಬಯೋಪಿಕ್. ಅವರ ಸಾಹಸ, ಪರಾಕ್ರಮದ ಜತೆಗೆ ಸಾಮಾಜಿಕ ಕಳಕಳಿ, ಪರಿಸರ ಪ್ರೇಮವನ್ನು ತೋರಿಸುತ್ತಿದ್ದೇವೆ. ಸೋಲೂರಿನ ಬಳಿ ಹಿರಿಯ ಕೆಂಪೇಗೌಡರ ಸಮಾಧಿಯಿದೆ. ಅಲ್ಲಿ ಅನೇಕ ಐತಿಹ್ಯಗಳು ಸಿಗುತ್ತವೆ. ಅದನ್ನು ಪೂರಕವಾಗಿಟ್ಟುಕೊಂಡು ಜತೆಗೆ ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯರ ಕಾದಂಬರಿಯನ್ನು ಅಧಾರವಾಗಿಟ್ಟು ಈ ಚಿತ್ರದ ಕಥೆ ಸಿದ್ಧಪಡಿಸಿದ್ದೇವೆ. ಸಂಪೂರ್ಣ ಫ್ಯಾಮಿಲಿ ಡ್ರಾಮಾವಾಗಿರಲಿದೆ. ಶೃಂಗೇರಿ, ಉಡುಪಿ ಸೇರಿ ಬೆಂಗಳೂರಿನ ಕೆ.ಆರ್.ಪುರಂ ಬಳಿ ಸೆಟ್ ನಿರ್ಮಿಸಿ ಶೂಟಿಂಗ್ ಮಾಡಿದ್ದೇವೆ. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಪ್ಯಾಚ್ ವರ್ಕ್ ನಡೆಯುತ್ತಿದೆ. ಆಗಸ್ಟ್ ಕೊನೆಯ ವಾರ ಅಥವಾ ಸೆಪ್ಟೆಂಬರ್‌ನಲ್ಲಿ ‘ಕೆಂಪಾಂಬುಧಿ’ ತೆರೆಗೆ ತರಲು ಉದ್ದೇಶಿಸಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.