ರಮೇಶ್ ಅರವಿಂದ್ ಹುಟ್ಟುಹಬ್ಬದ ದಿನವೇ ಹೊಸ ಚಿತ್ರದ ಘೋಷಣೆ, ಚಿತ್ರಕ್ಕೆ ‘ದೈಜಿ’ ಶೀರ್ಷಿಕೆ

dhaimixj
Published on

ರಮೇಶ್ ಅರವಿಂದ್ ಅವರಿಗೆ ಇಂದು 59 ವರ್ಷದ ಹುಟ್ಟುಹಬ್ಬದ ಸಂಭ್ರಮ. ಇಂದೇ ಅವರ ಹೊಸ ಸಿನಿಮಾ ಘೋಷಣೆ ಆಗಿದೆ. ಕನ್ನಡ ಸೇರಿ ತಮಿಳು, ತೆಲುಗು, ಮಲಯಾಳಂನಲ್ಲೂ ನಟಿಸಿರುವ ಬಹುಭಾಷಾ ನಟ ರಮೇಶ್ ಅರವಿಂದ್ ‘ದೈಜಿ’ ಚಿತ್ರದಲ್ಲಿ ತೀರಾ ವಿಭಿನ್ನ ಪಾತ್ರದಲ್ಲಿ, ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಅದಕ್ಕೆ ಪೂರಕ ಎಂಬಂತೆ ಅವರ ಲುಕ್ ರಿವೀಲ್ ಆಗಿದ್ದು, ಮುಖಕ್ಕೆ ಥರಹೇವಾರಿ ಬಣ್ಣ ಹಚ್ಚಿಕೊಂಡು, ಕಿವಿಗೆ ಓಲೆ ಧರಿಸಿ, ಅದರ ಮೇಲೊಂದು ಹೂವಿಟ್ಟುಕೊಂಡಿರುವ ರಮೇಶ್ ಅರವಿಂದ್ ಲುಕ್ ವೈರಲ್ ಆಗಿದೆ.


ಚಿತ್ರಕ್ಕೆ ‘ದೈಜಿ’ ಎಂದು ಶೀರ್ಷಿಕೆ ಇಡಲಾಗಿದೆ. ‘ಶಿವಾಜಿ ಸುರತ್ಕಲ್ 1’ ಹಾಗೂ ‘ಶಿವಾಜಿ ಸುರತ್ಕಲ್ 2’ ಯಶಸ್ಸಿನ ಬೆನ್ನಲ್ಲೇ ರಮೇಶ್ ಅರವಿಂದ್ ಮತ್ತು ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತೊಮ್ಮೆ ಕೈಜೋಡಿಸುತ್ತಿದ್ದಾರೆ ಅನ್ನೋದು ವಿಶೇಷ.


‘ದೈಜಿ’ ಎಂಬುದಕ್ಕೆ ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ರೀತಿಯ ಅರ್ಥಗಳಿವೆ. ಕೊಂಕಣಿ ಭಾಷೆಯಲ್ಲಿ ದೈಜಿ ಎಂದರೆ ರಕ್ತ ಸಂಬಂಧ. ಜಪಾನ್​ನಲ್ಲಿ ದೈಜಿ ಎಂದರೆ ಬಹಳ ಕಾಳಜಿ ವಹಿಸಬೇಕಾದ ವಿಚಾರ ಎಂಬರ್ಥವಿದೆ. ಶೀರ್ಷಿಕೆ ಒಂದೇ ಆದರೂ ಹಲವು ಅರ್ಥಗಳು ಇವೆ ಎನ್ನುತ್ತದೆ ಚಿತ್ರತಂಡ.
ಪವನ್ ಕುಮಾರ್ ಅವರ ‘ಲೂಸಿಯಾ’, ಧನಂಜಯ್ ನಟನೆಯ ‘ಬದ್ಮಾಶ್’ ಸಿನಿಮಾ ಇದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿದ್ದವು. ಈಗ ‘ದೈಜಿ’ ಹೆಸರಿನ ಭಿನ್ನ ಶೀರ್ಷಿಕೆ ಒಂದಿಗೆ ನಿರ್ಮಾಪಕರು ಬಂದಿದ್ದಾರೆ.


ಸಿನಿಮಾಗೆ ನಾಯಕಿಯರ ಹುಡುಕಾಟ ನಡೆಯುತ್ತಿದೆ. ಈ ವರ್ಷ ಡಿಸೆಂಬರ್ ಅಥವಾ 2024ರ ಜನವರಿ ತಿಂಗಳಲ್ಲಿ ಚಿತ್ರದ ಶೂಟಿಂಗ್ ಆರಂಭ ಆಗಲಿದೆ. ಇದರ ಕಥೆ ಅಮೆರಿಕದಲ್ಲೇ ಸಾಗಲಿದೆ. ಇದು ರಮೇಶ್ ಅವರ 106ನೇ ಸಿನಿಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net