

ಬಾಳೆಹೊನ್ನೂರು: ರಂಭಾಪುರಿ ಪೀಠದ ಸೋಮೇಶ್ವರ ಗೋಶಾಲೆಯಲ್ಲಿ ಪಶುವೈದ್ಯ ಇಲಾಖೆಯಿಂದ ನಡೆದ ಕಾಲು ಬಾಯಿ ಜ್ವರದ ರಾಷ್ಟ್ರೀಯ ಲಸಿಕಾ ಅಭಿಯಾನಕ್ಕೆ ಮಂಗಳವಾರ ರಂಭಾಪುರಿ ಜಗದ್ಗುರು ಶ್ರೀ ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
ರಂಭಾಪುರಿ ಜಗದ್ಗುರುಗಳು ಗೋವಿಗೆ ಲಸಿಕೆ ನೀಡಿ ಮಾತನಾಡಿ, ಸರ್ಕಾರ ಗೋವುಗಳ ಕುರಿತು ಕಾಳಜಿ ವಹಿಸಿ ಕಾಲುಬಾಯಿ ಜ್ವರ ಬಾರದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ ನೀಡುತ್ತಿರುವುದು ಶ್ಲಾಘನೀಯ ಎಂದರು.
ಇಂತಹ ಕಾರ್ಯಕ್ರಮಗಳಲ್ಲಿ ರೈತರು ಸಕ್ರಿಯವಾಗಿ ಭಾಗವಹಿಸಿ ಸರ್ಕಾರದ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕು. ಶ್ರೀ ಪೀಠದಲ್ಲಿ ಪಶುವೈದ್ಯ ಇಲಾಖೆ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ಗೊಳಿಸಿರುವುದು ಸಂತಸ ತಂದಿದೆ ಎಂದು ಹೇಳಿದರು.
ಪಶು ವೈದ್ಯಾಧಿಕಾರಿ ಪ್ರೀತಮ್ ಮಾತನಾಡಿ, ಸೆ.26ರಿಂದ ಅ.25ರವರೆಗೆ ಪಶುವೈದ್ಯ ಇಲಾಖೆಯಿಂದ ರಾಷ್ಟ್ರೀಯ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಾರದಂತೆ ಲಸಿಕೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಉಚಿತವಾಗಿ ಹಾಕಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇಲಾಖಾ ಸಿಬ್ಬಂದಿ ರೈತರ ಮನೆ ಬಾಗಿಲಿಗೆ ತೆರಳಿ ಜಾನುವಾರುಗಳಿಗೆ ಲಸಿಕೆ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು. ರಂಭಾಪುರಿ ಪೀಠದ ಗೋಶಾಲೆಯಿಂದ ಲಸಿಕಾ ಅಭಿಯಾನ ಆರಂಭಿಸಿದ್ದು ಉತ್ತಮ ಯಶಸ್ಸು ಕಾಣುವ ಭರವಸೆ ಮೂಡಿದೆ ಎಂದರು. ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಸದಸ್ಯರಾದ ಕೋಕಿಲಮ್ಮ, ಇಬ್ರಾಹಿಂ ಶಾಫಿ, ಶ್ರೀ ಪೀಠದ ಸಿಬ್ಬಂದಿ ಚಂದ್ರಶೇಖರ್, ವಿಶ್ವನಾಥ ಹಿರೇಮಠ, ಕೊಟ್ರಯ್ಯ, ಶಿವಪ್ರಸಾದ್, ಪಶುವೈದ್ಯ ಇಲಾಖೆಯ ಸಿಬ್ಬಂದಿ ನಾಗೇಂದ್ರ, ನವೀನ್ ಇತರರಿದ್ದರು.