ರಾಮಾಯಣ ಸರ್ವಕಾಲಕ್ಕೂ ಸಲ್ಲುವ ಕೃತಿ: ಶಾಸಕ ಚೆನ್ನಿ

valmiki jayanati
ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು. ಡಿ.ಎಸ್.ಅರುಣ್, ಬಲ್ಕಿಷ್ ಬಾನು, ಚೇತನ್ ಗೌಡ, ಜಿ.ಪಲ್ಲವಿ, ಗುರುದತ್ತ ಹೆಗಡೆ, ಎನ್.ಹೇಮಂತ್ ಇತರರಿದ್ದರು.
Published on

ಶಿವಮೊಗ್ಗ: ಮೌಲ್ಯಯುತ ಮಹಾಕಾವ್ಯ ರಾಮಾಯಣ ರಚಿಸುವ ಮೂಲಕ ಭಾರತೀಯ ಕಾವ್ಯ, ಸಾಹಿತ್ಯ, ಜನಪದ, ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಿಗೆ ಆದಿಕವಿ ಮಹರ್ಷಿ ವಾಲ್ಮೀಕಿ ನೀಡಿರುವ ಕೊಡುಗೆ ಅನನ್ಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಜಿಲ್ಲಾಡಳಿತದಿಂದ ಮಂಗಳವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಆದಿ ಕವಿಗಳಿಗೆ ಗೌರವ ಸಲ್ಲಿಸುವ ಮತ್ತು ಮೇರುಕೃತಿ ರಾಮಾಯಣದ ಮೂಲಕ ಮಹರ್ಷಿ ವಾಲ್ಮೀಕಿ ಅವರು ನೀಡಿರುವ ಸಾರ್ವಕಾಲಿಕ ಆದರ್ಶ ಮೌಲ್ಯಗಳನ್ನು ಯುವ ಪೀಳಿಗೆಗೆ ತಿಳಿಸುವ, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ರಾಮಾಯಣದ ನೂರಾರು ಪಾತ್ರಗಳ ಮೂಲಕ ಮಾನವೀಯತೆ, ಸಮಾನತೆ, ಕಾರುಣ್ಯ, ಭ್ರಾತ್ವತ್ವ, ಮಮತೆ, ತ್ಯಾಗ, ಧರ್ಮ ರಕ್ಷಣೆ, ರಾಜನೀತಿ ಸೇರಿ ಜನಜೀವನಕ್ಕೆ ಅಗತ್ಯವಾದ ಎಲ್ಲ ಮೌಲ್ಯಗಳನ್ನೂ ಪ್ರತಿಪಾದಿಸಲಾಗಿದೆ. ವಾಲ್ಮೀಕಿ ಅವರು ವಿಶ್ವಕವಿ, ಇತಿಹಾಸಕಾರ, ದಾರ್ಶನಿಕ, ಶಾಸ್ತ್ರಜ್ಞ ಮತ್ತು ತತ್ವಜ್ಞಾನಿಯಾಗಿ ಸರ್ವಕಾಲಕ್ಕೂ ಗೌರವಿಸಲ್ಪಡುತ್ತಾರೆ ಎಂದು ಅಭಿಪ್ರಾಯಪಟ್ಟರು.

ರಾಮ ಎಂಬುದು ಕಲ್ಪನೆಯಲ್ಲ, ಅದು ವಾಸ್ತವ. ಆ ಕೃತಿಯಲ್ಲಿ ಅನೇಕ ಸಂಗತಿಗಳು ಅನಾವರಣಗೊಂಡಿವೆ. ಅದರಲ್ಲಿ ಜೀವನ ವಿಧಾನವಿದೆ. ಆದರ್ಶದ ಬದುಕಿದೆ. ರಾಮಾಯಣ ಮತ್ತು ಮಹಾಭಾರತ ಈ ದೇಶದ ಅದರಲ್ಲೂ ಹಿಂದುಗಳ ಆರಾಧನಾ ಕೃತಿಗಳಾಗಿವೆ. ಭಾರತೀಯರು ಮಾತ್ರವಲ್ಲ ವಿದೇಶಿಯರೂ ರಾಮ, ರಾಮಾಯಣವನ್ನು ಆರಾಧಿಸುತ್ತಿರುವುದು ಹರ್ಷದ ಸಂಗತಿ. ಇದು ಭಾರತೀಯ ಮಹಾಕಾವ್ಯದ ಅಸ್ಮಿತೆ ಎಂದು ಬಣ್ಣಿಸಿದರು.

ಎಂಎಲ್‌ಸಿ ಡಿ.ಎಸ್.ಅರುಣ್ ಮಾತನಾಡಿ, ರಾಮಾಯಣ ಕೃತಿಯಲ್ಲಿ ಬಿಂಬಿತವಾಗಿರುವ ದೇಶದ ಶ್ರೀಮಂತ ಸಂಸ್ಕೃತಿ ಮತ್ತು ಭವ್ಯ ಪರಂಪರೆಯನ್ನು ಯುವಜನರು ಬದುಕಿನಲ್ಲಿ ಅಳವಡಿಸಿಕೊಳ್ಳುವ ಅಗತ್ಯವಿದೆ. ಸರ್ಕಾರವು ತುಳಿತಕ್ಕೊಳಗಾದ ಜನರ ಸುಧಾರಣೆಗೆ ನಿಗಮಗಳ ಮೂಲಕ ಅನುಷ್ಠಾನಗೊಳಿಸಿರುವ ಯೋಜನೆಗಳನ್ನು ಜನರಿಗೆ ತಲುಪಿಸಲು ಸಕಾಲಿಕವಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಎಂಎಲ್‌ಸಿ ಬಲ್ಕಿಷ್ ಬಾನು ಮಾತನಾಡಿದರು. ವಾಲ್ಮೀಕಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ, ಜವಳಿ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಗೌಡ, ಸೂಡಾ ಅಧ್ಯಕ್ಷ ಸುಂದರೇಶ್, ಡಿಸಿ ಗುರುದತ್ತ ಹೆಗಡೆ, ಜಿಪಂ ಸಿಇಒ ಎನ್.ಹೇಮಂತ್, ವಾಲ್ಮೀಕಿ ಸಮಾಜದ ಮುಖಂಡ ಲಕ್ಷ್ಮಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net