ರಾಮನ ನೆನಪೇ ರಾಮರಾಜ್ಯ

Ram Mandir 1
Published on

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ವಣಕ್ಕೆ ಇಂದು (ಬುಧವಾರ) ಶಿಲಾನ್ಯಾಸ ನೇರವೇರುತ್ತಿದ್ದು, ದೇಶದಾದ್ಯಂತ ಸಂತಸದ ಸಂಚಲನ ಮೂಡಿದೆ. ಎಲ್ಲೆಲ್ಲೂ ರಾಮನಾಮದ ಅನುರಣನ ಕೇಳುತ್ತಿದೆ. ರಾಮತ್ವದ ಮಹತ್ವ ಸಾರುವ ಲೇಖನಗಳು ಮತ್ತು ಮಂದಿರ ನಿರ್ವಣದ ಹೋರಾಟ ಹಾದಿಯ ಕೆಲ ನೆನಪುಗಳನ್ನು ಇಲ್ಲಿ ನೀಡಲಾಗಿದೆ.

| ಕೃಷ್ಣರಾಜ ಕುತ್ಪಾಡಿ

ಇತಿಹಾಸದ ನೆನಪು ಏನೆಲ್ಲ ಮಾಡಿಸಬಹುದು ಎಂಬುದಕ್ಕೆ ರಾಮಮಂದಿರದ ಹೋರಾಟದ ಹಾದಿ ಒಂದು ನಿಚ್ಚಳ ಸಾಕ್ಷಿ. ರಾಮ ಐದು ಶತಮಾನಗಳ ವನವಾಸ ಮುಗಿಸಿ ಮರಳಿ ಅಯೋಧ್ಯೆಯ ಭವ್ಯಮಂದಿರಕ್ಕೆ ಮರಳಲಿದ್ದಾನೆ. ಹೃದಯ ಗದ್ದುಗೆಯಿಂದ ಪಾಣಿಪೀಠವನ್ನು ಏರಲಿದ್ದಾನೆ. ಈ ಬದಲಾವಣೆಗಳ ಪರ್ವಕ್ಕೆ ರಾಮನ ನೆನಪೆ ಮುನ್ನುಡಿ. ಕಪಿವೀರರಂತಿರುವ ಕರಸೇವಕರ ಪರಿಶ್ರಮ, ಸಮಸ್ತ ಹೃದಯವಂತ ಭಾರತೀಯರ ಪ್ರಾರ್ಥನೆಯಿಂದ ಭಾರತ ರಾಮರಾಜ್ಯವಾಗುತ್ತಿದೆ. ಗ್ರಾಮರಾಜ್ಯದ ಕನಸಿನಲ್ಲೇ ರಾಮನಿದ್ದಾನೆ. ಮನೆಮನೆಯ ಮಕ್ಕಳು ರಾಮನಂತಾಗಲಿ ಎಂಬುದೆ ಹಿರಿಯರ ಹರಕೆಯಾಗಿತ್ತು. ಏಕೆಂದರೆ ರಾಮರಾಜ್ಯವೆಂದರೆ ಶ್ರೀರಾಮ ಎದುರಿಗಿರಬೇಕಿಲ್ಲ. ನೆನಪಾದರೂ ಸಾಕು.

ದಶರಥನಿಗೆ ರಾಮನೇ ಬೇಕು. ರಾಮನ ನೆನಪು ಬೇಡ. ಅಷ್ಟು ಹಚ್ಚಿಕೊಂಡಿದ್ದ. ಪ್ರಜೆಗಳನ್ನು ಕುಟುಂಬ ಎಂದು ಭಾವಿಸಿದವನು ರಾಮ. ಹಿಂದೆ ವಿಶ್ವಾಮಿತ್ರರೊಡನೆ ಕಳುಹಿಸಲೂ ಪರಿತಪಿಸಿದ್ದ ದಶರಥ. ಕೈಕೆಯಿ ಈಗ ವರವಾಗಿ ರಾಮನ ವನವಾಸವನ್ನೇ ಬೇಡಿದಳು. ರಾಮ ನಗುತ್ತಲೇ ಹೊರಟ. ಸೀತಾ ಲಕ್ಷ್ಮಣರೂ ಹಿಂಬಾಲಿಸಿದರು. ದಶರಥ ಅಂಗಲಾಚಿದರು ‘ನನ್ನ ಮಾತನ್ನು ಧಿಕ್ಕರಿಸು’ ಎಂದು. ಮಾತನ್ನು ಉಳಿಸುವುದರಲ್ಲಿ ವಂಶಗೌರವವಿದೆ ಎಂದು ಕಾಡು ಸೇರಿದ. ಧರ್ಮರತನಾದ ರಾಮನನ್ನು ಪ್ರಜೆಗಳಿಂದ ದೂರಗೊಳಿಸಿದೆನಲ್ಲ ಎಂದು ತನ್ನ ದೌರ್ಬಲ್ಯಕ್ಕಾಗಿ ಪರಿತಪಿಸಿದ. ಅಸುನೀಗಿದ. ರಾಮನ ನೆನಪು ಪಶ್ಚಾತ್ತಾಪಪಡಿಸಿತು.

ಭರತನಿಗೆ ಕರೆಬಂತು, ಮರಳಿ ಊರಿಗೆ ಬಾ ಎಂದು. ಹಬ್ಬ-ಸಂಸ್ಕಾರಗಳಿಲ್ಲದ ಅಯೋಧ್ಯೆ ಮನೆ ಮಗನನ್ನು ಕಳಕೊಂಡಂತಿತ್ತು. ತಂದೆಯ ಸಾವಿಗಿಂತ ಅಣ್ಣನ ದೂರವಾಗುವಿಕೆ ಭರತನನ್ನು ಹಿಮ್ಮೆಟ್ಟಿಸಿತು. ಕೌಸಲ್ಯೆ-ಸುಮಿತ್ರೆಯರ ವ್ಯಥೆಯನ್ನು ಮನಗಂಡ. ತನ್ನ ತಾಯಿಯ ಮುಖ ನೋಡಲಾರೆ, ಮಾತಾಡಲಾರೆ ಎಂದು ದೂರ ಇರಿಸಿದ. ತನಗಾಗಿ ಸಿದ್ಧಗೊಂಡಿದ್ದ ಅಭಿಷೇಕ ಸಾಮಗ್ರಿಗಳನ್ನು ಹೊತ್ತು ಕಾಡಿಗೆ ಹೊರಡುವುದಕ್ಕೆ ನಿಶ್ಚಯಿಸಿದ. ಪ್ರಜೆಗಳಿಗೆ ಕ್ಷೇಮವಾಗುವ ಕೆಲಸವೇ ತನ್ನ ಕರ್ತವ್ಯವೆಂದು ಭಾವಿಸಿದ. ರಾಮನ ನೆನಪು ಕಾರ್ಯಪ್ರವೃತ್ತಿಗೊಳಿಸಿತು.

ಕಾಡಿಗೆ ಹೊರಡುವ ಹೊತ್ತು. ಒಳಬಾಗಿಲಿನಲ್ಲಿ ಮಂಥರೆ ಕಂಡಳು. ಅವಳ ಬಾಗಿದ ದೇಹ ಮನದ ವಿಕಾರವನ್ನು ಎತ್ತಿಹಿಡಿದಿತ್ತು. ಜೊತೆಗೆ ಪೋಷಾಕು ಆಭರಣಗಳ ಧಿಮಾಕು ಬೇರೆ. ಕೋತಿಯನ್ನಲಂಕರಿಸಿದಂತಿತ್ತು ಎನ್ನುತ್ತಾರೆ ವಾಲ್ಮೀಕಿಗಳು.

ಶತ್ರುಘ್ನ ಕೆಂಡಾಮಂಡಲನಾದ. ಮುಡಿ ಹಿಡಿದು ದರದರನೆ ನಡುಮನೆಗೆ ಎಳೆತಂದ. ನೆಲಕ್ಕೆ ಬೀಳಿಸಿದ. ರಾಮನನ್ನು ಕಾಡಿಗೆ ಅಟ್ಟಿದ ಕೋಪ ಎಲ್ಲಿ ಪರಿಚಾರಕರಲ್ಲೂ ಮಡುಗಟ್ಟಿತ್ತು. ಖಡ್ಗವನು ಹಿರಿದೆತ್ತಿ ಕತ್ತ ಕತ್ತರಿಸುವೆನೆಂದು ಹೊರಟ ಶತ್ರುಘ್ನನನ್ನು ಭರತ ತಡೆದ. ‘ರಾಮ ಮೆಚ್ಚದ ಕೆಲಸ. ರಾಮನ ದೃಷ್ಟಿಯಿಂದ ನಾವು ವಂಚಿತರಾಗಿ ಬಾಳುವುದು ಅಸಾಧ್ಯ. ಬಿಟ್ಟು ಬಿಡು ಆಕೆಯನ್ನು’ ಎಂದ. ರಾಮನ ನೆನಪು ಅಧರ್ಮವನ್ನು ತಡೆಯಿತು.

ರಾವಣನ ಜೊತೆ ಹೋರಾಡಿ ಅರೆಜೀವವಾಗಿ ಮಲಗಿದ್ದ ಜಟಾಯು ರಾಮನ ತೊಡೆಯಲ್ಲಿ ಸೀತೆಯ ವಿಷಯವನ್ನರುಹಿ ಪ್ರಾಣತೊರೆದ. ರಾಮನ ನೆನಪು ಸಾವನ್ನು ಸುಖಮಯವಾಗಿಸಿತು.

ಸೀತೆಯನ್ನು ಹುಡುಕಿ ಕೊಡುವೆ ಎಂದು ಕೊಟ್ಟಿದ್ದ ಮಾತನ್ನು ಮರೆತು ಕೂತಿದ್ದ ಸುಗ್ರೀವನಿಗೆ ಹನುಮ ಎಚ್ಚರಿಸಿದ. ರಾಮನ ಉಪಕಾರ ಸ್ಮರಿಸಿದ. ಕಾಯಪ್ರವೃತ್ತನಾಗುವಂತೆ ಮಾಡಿ ಲಕ್ಷ್ಮಣನಿಂದ ಬಂದ ಆಪತ್ತನ್ನು ತಪ್ಪಿಸಿದ. ರಾಮನ ನೆನಪು ಮಾತು ಉಳಿಸಿತು. ಸೀತೆ ಸಿಗಲಿಲ್ಲ. ಕಾಲ ಮುಗಿಯಿತು. ಕಿಷ್ಕಿಂಧೆಗೆ ಮರಳದೆ ಎಲ್ಲೋ ಉಳಿದು ಬಿಡುವ ಯೋಚನೆಯೂ ಬಂದಿತ್ತು. ಕಪಿಗಳು ಸುಗ್ರೀವಾಜ್ಞೆಗೆ ಹೆದರಿ ಪ್ರಾಣಬಿಡುವ ಸಾಹಸಕ್ಕೆ ಕೈ ಹಾಕಿದರು. ರಾಮನ ಕಥೆ ಹೇಳಿಕೊಳ್ಳುತ್ತ ಸಾವಿಗೆ ಕ್ಷಣಗಣನೆ ಮಾಡುತ್ತ ಮಲಗಿದ್ದರು. ರಾಮನ ಕಥೆ ಕೇಳಿ ಗರಿಗೆದರಿ ನಿಂತ ಸಂಪಾತಿ ಸೀತೆಯ ಸುಳಿವನಿತ್ತ. ರಾಮನ ನೆನಪು ದಿಕ್ಕು ತೋರಿಸಿತು.

ರಾಮನಾಮದ ಬಲದಿಂದಲೇ ಹನುಮ ಸಮುದ್ರ ದಾಟಿದ. ಸೀತೆಯ ಕಂಡ. ರಾವಣನ ಎಚ್ಚರಿಸಿದ. ರಾಮನ ಕೊನೆಯ ದೂತನ ದಾಳಿಯ ರುಚಿ ತಿಳಿಯಲಿ ಎಂದು ಲಂಕೆಯನ್ನು ಸುಟ್ಟ. ರಾವಣ ನಡುಗಿದ. ರಾಮನ ನೆನಪೇ ದುರುಳರ ಎದೆ ನಡುಗಿಸಿತು. ಹನುಮನ ಕಾರ್ಯ ಸಾಧಿಸಿತು.

ಅಶೋಕವನದ ರಾವಣನ ಸೆರೆಯಲ್ಲಿ ಸೀತೆ ವರುಷ ಕಳೆದಳು. ರಕ್ಕಸಿಯರ ಬೆದರಿಕೆ, ಪರಸ್ಥಳ, ರಾವಣನ ಓಲೈಕೆ ಆಮಿಷಗಳ ಕಾಟ. ತತ್ತರಿಸಿದಳು. ರಾಮ ಜೊತೆಗಿದ್ದಾನೆಂದೇ ಕಾಡಿಗೆ ಬಂದಿದ್ದಳು. ಈ ದುಸ್ಥಿತಿಯಲ್ಲೂ ಆತ್ಮಬಲ ಕುಂದಲಿಲ್ಲ. ಏಕೆಂದರೆ ಅವಳು ಉಸಿರಾಡಿದ್ದು ರಾಮನ ನೆನಪನ್ನು. ರಾಮನಿಗಲ್ಲದ ರಾಜ್ಯ ತನಗೆ ಬೇಡ ಎಂದು ಭರತನ ಹಟ. ರಾಮಪಾದುಕೆಯನ್ನು ಸಿಂಹಾಸನದ ಮೇಲಿರಿಸಿದ. ಅಣ್ಣನಂತೆ ನಾರುಮುಡಿಯುಟ್ಟು ಹಣ್ಣು-ಗಡ್ಡೆ ಉಂಡು ಪ್ರಜಾಕ್ಷೇಮವನ್ನು ನೋಡಿಕೊಂಡ. ಬರುವುದು ತಡವಾದರೆ ಜೀವ ಉಳಿಯದು ಎಂದು ಅಣ್ಣನನ್ನು ಎಚ್ಚರಿಸಿದ್ದ. ಅಣ್ಣ ಬಂದ. ಕಾಲಿಗೆ ಅಡ್ಡಬಿದ್ದು ಕೇಳಿಕೊಂಡ-‘ಅಮ್ಮನನ್ನು ಎಂದೂ ನಿಂದಿಸಿಲ್ಲ. ನನ್ನನ್ನು ತಮ್ಮ ಎಂದು ಸ್ವೀಕರಿಸು’ ಎಂದು ಬೇಡಿಕೊಂಡ. ರಾಜ್ಯವನ್ನೊಪ್ಪಿಸಿ ಹಗುರಾದ. ನಿಟ್ಟುಸಿರು ರಾಮನ ನೆನಪನ್ನೇ ಹೊರಹಾಕಿತು. ರಾಮನ ನೆನಪೆ ರಾಜ್ಯವಾಳಿತು.

ನೆನಪು ಮಾಸುವ ಮುನ್ನ ರಾಮ ಮತ್ತೆ ಜೀವ ತಳೆದಿದ್ದಾನೆ. ನೆನಪು ಮಾಸದಂತೆ ಹೋರಾಡಿದ ಹಿರಿಜೀವಿಗಳಲ್ಲಿ ಪೇಜಾವರ ಶ್ರೀಗಳು ಒಬ್ಬರು. ರಾಮನ ನೆನಪಿನಂತೆ ಅವರ ನೆನಪೂ ನಮ್ಮನ್ನು ರಾಮರಾಜ್ಯದ ಕನಸಲ್ಲಿ ಭಾಗಿಯಾಗಿಸಲಿ. ರಾಮ ಈ ನೆಲದ ಒಸರು-ಉಸಿರು-ಹಸಿರು. ಭಾರತ ತನ್ನ ನೆಲದ ನಾಯಕನ ನೆರಳಲ್ಲಿ ಮತ್ತೆ ವಿಶ್ವಗುರುವಾಗಿ ಗರಿಗೆದರಲಿ. ನಾರಾಯಣ ಪಂಡಿತರ ರಾಮಗೀತೆಯ ಸಾಲೊಂದು ಗಾಢವಾಗಿ ಈ ಹೊತ್ತಿಗೆ ನಮ್ಮನ್ನು ಆವರಿಸಿಕೊಳ್ಳುತ್ತದೆ.

‘ರಾಮ ರಾಮ ರಮಾಪತೇ ರಮತಾಂ ಮನಸ್ತ್ವಯಿ ಮೇ ಸದಾ’

(ಲೇಖಕರು ಸಂಸ್ಕೃತ ಉಪನ್ಯಾಸಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net