

ಚೆನ್ನೈ: ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದ ರಾಮರಾಜನ್ 15 ವರ್ಷ ದಾಂಪತ್ಯದ ಬಳಿಕ 25 ವರ್ಷದ ಹಿಂದೆ ವಿಚ್ಛೇದನ ನೀಡಿ ಬೇರೆ ಬೇರೆಯಾಗಿದ್ದರು. ಆದರೆ ಇಂದಿಗೂ ಪರಸ್ಪರ ಗೌರವಿಸುತ್ತಿರುವ ಇವರಿಗೆ ಅರುಣಾ ಎಂಬ ಪುತ್ರಿಯಿದ್ದು, ಆಕೆ ಇದೇ ಮೊದಲ ಬಾರಿಗೆ ಆಶ್ಚರ್ಯಕರ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ರಾಮರಾಜನ್ ಪ್ರಮುಖ ತಾರೆಯಾಗಿದ್ದರು, ಗಲ್ಲಾಪೆಟ್ಟಿಗೆಯಲ್ಲಿ ಕಮಲಾಹಾಸನ್ ಮತ್ತು ರಜಿನಿಕಾಂತ್ ಅವರಿಗೆ ಕಠಿಣ ಸ್ಪರ್ಧೆ ಒಡ್ಡುವಷ್ಟರ ಮಟ್ಟಿಗೆ ಅವರ ಚಿತ್ರಗಳಿರುತ್ತಿದ್ದವು. ಆ ಕಾಲದ ಪ್ರಮುಖ ನಾಯಕಿ ನಳಿನಿಯನ್ನು ಅವರು ಪ್ರೀತಿಸುತ್ತಿದ್ದರು. ಇವರು 1987 ರಲ್ಲಿ ವಿವಾಹವಾದರು.
ಈ ದಂಪತಿ ಅರುಣಾ ಮತ್ತು ಅರುಣ್ ಅವಳಿ ಮಕ್ಕಳನ್ನು ಹೊಂದಿದ್ದರು. ಆದಾಗ್ಯೂ ವಿವಿಧ ಕಾರಣಗಳಿಂದಾಗಿ ರಾಮರಾಜನ್ ಮತ್ತು ನಳಿನಿ 2000ನೇ ಇಸವಿಯಲ್ಲಿ ವಿಚ್ಛೇದನ ಪಡೆದರು. ಮಕ್ಕಳು ನಳಿನಿ ಅವರೊಂದಿಗೆ ವಾಸಿಸುತ್ತಿದ್ದರೂ ಬೇಕಾದಾಗ ತಮ್ಮ ತಂದೆಯನ್ನು ಭೇಟಿ ಮಾಡುವ ಅವಕಾಶಹೊಂದಿದ್ದರು.
ಹೊಟೇಲ್ ಉದ್ಯಮಿ ರಾಮಚಂದ್ರನ್ ಅವರನ್ನು ಮದುವೆಯಾಗಿರುವ ಮತ್ತು ವೃತ್ತಿಯಲ್ಲಿ ವೈದ್ಯೆಯಾಗಿರುವ ಅರುಣಾ ಮೊದಲ ಬಾರಿಗೆ ತನ್ನ ಸೆಲೆಬ್ರಿಟಿ ಪಾಲಕರ ಬಗ್ಗೆ ವಿವರಗಳನ್ನು ಬಹಿರಂಗಗೊಳಿಸಿದ್ದಾರೆ. ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರೂ ಪರಸ್ಪರ ಗೌರವವನ್ನು ಹೊಂದಿದ್ದಾರೆ. ಎಂದಿಗೂ ಮಕ್ಕಳೊಂದಿಗೆ ಕೆಟ್ಟದಾಗಿ ಮಾತನಾಡಿಲ್ಲ ಎಂದು ಸಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ವಿಚ್ಛೇದನ ನೀಡಿದ ದಿನವೇ ನಳಿನಿ ನ್ಯಾಯಾಲಯದಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದು, ಆಕೆಯ ಪಕ್ಕಕ್ಕೆ ಧಾವಿಸಿ ಸುರಕ್ಷಿತವಾಗಿ ರಾಮರಾಜನ್ ಕರೆದೊಯ್ದರಂತೆ. ಬಳಿಕ ಅಳುತ್ತಿದ್ದರು ಎಂದು ಅರುಣಾ ಅಚ್ಚರಿಯ ಘಟನೆಯನ್ನು ವಿವರಿಸಿದ್ದಾರೆ. ಇದನ್ನು ವೀಕ್ಷಿಸಿದ ನ್ಯಾಯಾಧೀಶರು ಒಬ್ಬರಿಗೊಬ್ಬರು ಇಷ್ಟೊಂದು ಪ್ರೀತಿಯನ್ನು ಹೊಂದಿರುವಾಗ ನಿಜವಾಗಿಯೂ ವಿಚ್ಛೇದನವನ್ನು ಬಯಸುತ್ತೀರಾ ಎಂದು ಕೇಳಿದ್ದರಂತೆ.
ತಾಯಿ ತನ್ನನ್ನು ಮಿನಿ ರಾಮರಾಜನ್ ಆಗಿ ಬೆಳೆಸಿದರು. ನನ್ನಲ್ಲಿ ಅಪ್ಪನ ಬಹಳಷ್ಟು ಗುಣಗಳಿವೆ. ಈಗಲೂ ನಾನು ತಂದೆಯನ್ನು ಭೇಟಿಯಾದಾಗ ಅವರು ಕೇಳುವ ಮೊದಲ ಪ್ರಶ್ನೆ ನಿನ್ನಮ್ಮ ಹೇಗಿದ್ದಾಳೆ ಎಂದು. ವಿಭಿನ್ನ ಯುಗಕ್ಕೆ ಸೇರಿದ ದಂಪತಿ ಆಧುನಿಕ ಜನರಿಗಿಂತ ಹೆಚ್ಚು ಸುಸಂಸ್ಕೃತ ರೀತಿಯಲ್ಲಿ ವರ್ತಿಸುವುದನ್ನು ನೋಡಲು ಸಂತೋಷವಾಗಿದೆ ಎಂದು ಅರುಣಾ ಹೇಳುತ್ತಾರೆ.