ಕನಕಪುರಕ್ಕೆ ಮೆಡಿಕಲ್​ ಕಾಲೇಜು ಶಿಫ್ಟ್ ತವರಿಗೆ ಪಡೆಯುವಲ್ಲಿ ಡಿಕೆ ಸೋದರರು ಯಶಸ್ವಿ

Untitled
Published on

ಗಂಗಾಧರ್​ ಬೈರಾಪಟ್ಟಣ ರಾಮನಗರ

ರೇಷ್ಮೆ ನಗರಿ ರಾಮನಗರದಲ್ಲಿ ನಿರ್ಮಾಣವಾಗಬೇಕಿರುವ ರಾಜೀವ್​ ಗಾಂಧಿ ವೈದ್ಯಕಿಯ ಕಾಲೇಜನ್ನು ಕನಕಪುರಕ್ಕೆ ವರ್ಗಾಯಿಸಲಾಗಿದೆಯೇ? ಹೀಗೊಂದು ಪ್ರಶ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್​ನ ಮೂಲಕ ಎದ್ದಿದೆ.

ಕಳೆದ ಮಾ.27ರಂದು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಮನಗರದ ರಾಜೀವ್​ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆವರಣದಲ್ಲಿ ವೈದ್ಯಕಿಯ ಕಾಲೇಜು ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್​ನಲ್ಲಿ ಕನಕಪುರಕ್ಕೆ ಮತ್ತೊಂದು ಕಾಲೇಜು ೂಷಣೆ ಮಾಡಿರುವುದು ಹೊಸ ಪ್ರಶ್ನೆ ಹುಟ್ಟುಹಾಕಿದೆ.

ಡಿಕೆ ಸೋದರರು ಯಶಸ್ವಿ

ಹಿಂದಿನ ಸಮ್ಮಿಶ್ರ ಸರ್ಕಾರದ ವೇಳೆ ಕನಕಪುರಕ್ಕೆ ವೈದ್ಯಕಿಯ ಕಾಲೇಜನ್ನು ಡಿ.ಕೆ.ಶಿವಕುಮಾರ್​ ಮಂಜೂರು ಮಾಡಿಸಿಕೊಂಡಿದ್ದರು. ಆದರೆ ನಂತರ ಬಂದ ಬಿಜೆಪಿ ಸರ್ಕಾರ ರಾಮನಗರದಲ್ಲಿ ರಾಜೀವ್​ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಸ್ಥಾಪನೆ ಆಗುವ ಕಾರಣ ಮುಂದಿಟ್ಟು, ಕನಕಪುರಕ್ಕೆ ಮಂಜೂರಾಗಿದ್ದ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಿತ್ತು. ಇದರಿಂದ ಸಿಡಿದಿದ್ದ ಡಿ.ಕೆ.ಶಿವಕುಮಾರ್​ ಮತ್ತು ಡಿ.ಕೆ.ಸುರೇಶ್​ ಕಾಲೇಜು ಮರಳಿ ಪಡೆಯಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ಇದು ಯಶಸ್ವಿ ಆಗಿರಲಿಲ್ಲ. ಇದೀಗ ರಾಜೀವ್​ ಗಾಂಧಿ ಆರೋಗ್ಯ ವಿವಿಯಿಂದಲೇ ಕನಕಪುರದಿಂದ ಮೆಡಿಕಲ್​ ಕಾಲೇಜು ನಿರ್ಮಾಣವಾಗಲಿದೆ ಎಂದು ಮುಖ್ಯಮಂತ್ರಿ ಬಜೆಟ್​ನಲ್ಲಿ ಮಂಡಿಸಿರುವುದು ಡಿ.ಕೆ.ಸೋದರರ ಹೋರಾಟಕ್ಕೆ ಸಿಕ್ಕ ಜಯವಾಗಿದೆ.

ವಿವಿ ಬಳಿ ಸ್ಪಷ್ಟತೆ ಇಲ್ಲ

ಕನಕಪುರದಲ್ಲಿ ರಾಜೀವ್​ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದಲೇ ವೈದ್ಯಕಿಯ ಕಾಲೇಜು ನಿರ್ಮಾಣ ಮಾಡಲಾಗುತ್ತದೆ ಎಂದು ಬಜೆಟ್​ನಲ್ಲಿ ಸಿದ್ದರಾಮಯ್ಯ ೂಷಣೆ ಮಾಡಿದ್ದಾರೆ. ಆದರೆ, ಈ ಬಗ್ಗೆ ವಿವಿ ಹಿರಿಯ ಅಧಿಕಾರಿಗಳ ಬಳಿ ಸ್ಪಷ್ಟನೆ ಇಲ್ಲ. ಕನಕಪುರದಲ್ಲಿ ವೈದ್ಯಕಿಯ ಕಾಲೇಜು ನಿರ್ಮಾಣ ಮಾಡಬೇಕು ಎನ್ನುವ ಸಂಬಂಧ ಬಜೆಟ್​ ಪೂರ್ವದಲ್ಲಿ ಚರ್ಚೆ ಆಗಿದೆಯಾದರೂ, ಪ್ರಸ್ತುತ ರಾಮನಗರದಲ್ಲಿ ನಿರ್ಮಾಣ ಮಾಡಬೇಕಿರುವ ಕಾಲೇಜನ್ನು ಕನಕಪುರಕ್ಕೆ ಸ್ಥಳಾಂತರ ಮಾಡಬೇಕೇ ಎನ್ನುವ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ ಎನ್ನುತ್ತಾರೆ. ಆದರೆ ವಿಶ್ವವಿದ್ಯಾಲಯವಂತೂ ರಾಮನಗರದಲ್ಲಿಯೇ ನಿರ್ಮಾಣವಾಗಲಿದೆ ಎನ್ನುವ ಮೂಲಕ ವೈದ್ಯಕಿಯ ಕಾಲೇಜು ಕನಕಪುರಕ್ಕೆ ಸ್ಥಳಾಂತರವಾಗಲಿದೆ ಎನ್ನುವುದನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಾರೆ.

ಶಂಕುಸ್ಥಾಪನೆ ಆಗಿದೆ

2007ರಲ್ಲಿ ೂಷಣೆಯಾದ ಯೋಜನೆಗೆ ಭೂ ವ್ಯಾಜ್ಯದಿಂದಾಗಿ ಸುಮಾರು 15 ವರ್ಷಗಳ ಹಿನ್ನಡೆಯಾಗಿತ್ತು. ನಂತರ ಇದ್ದ ಅಡೆ&ತಡೆಗಳನ್ನು ನಿವಾರಿಸಿಕೊಂಡು ರಾಮನಗರದ ಅರ್ಚಕರಹಳ್ಳಿ ಬಳಿ 216 ಎಕರೆ 24 ಗುಂಟೆ ಜಮೀನಿನಲ್ಲಿ 600 ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಾಜೀವ್​ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯ ಮತ್ತು ವೈದ್ಯಕಿಯ ಕಾಲೇಜು ನಿರ್ಮಾಣಕ್ಕೆ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ಮಾಡಿದ್ದರು. ಅಷ್ಟೇ ಅಲ್ಲದೆ, ವಿವಿಯಿಂದಲೇ 300 ಕೋಟಿ ರೂ. ಅನುದಾನವನ್ನು ಸಹ ಗುತ್ತಿಗೆದಾರ ಕಂಪನಿಗೆ ಬಿಡುಗಡೆ ಮಾಡಿಸಿದ್ದರು. ಈ ಜಾಗದಲ್ಲಿ 28095 ಚದರ ಮೀಟರ್​ನಲ್ಲಿ ವಿವಿ ಆಡಳಿತ ವಿಭಾಗ ನಿರ್ಮಾಣವಾದರೆ, 72547 ಚದರ ಮೀಟರ್​ನಲ್ಲಿ ವೈದ್ಯಕಿಯ ಕಾಲೇಜು ಮತ್ತು ಇತರ ವಿಭಾಗಗಳು ತಲೆ ಎತ್ತಲಿವೆ.

ವಿವಾದಕ್ಕೆ ಕಾರಣವಾಗುವುದೇ?

ಕನಕಪುರಕ್ಕೆ ಮಂಜೂರಾಗಿರುವ ವೈದ್ಯಕಿಯ ಕಾಲೇಜು ರಾಮನಗರದಲ್ಲಿ ನಿರ್ಮಾಣವಾಗಬೇಕಿರುವ ಕಾಲೇಜೇ ಅಥವಾ ಇಲ್ಲವೇ ಎನ್ನುವ ಸ್ಪಷ್ಟ ಉತ್ತರ ಅಧಿಕೃತವಾಗಿ ಬಂದಿಲ್ಲ. ಆದರೆ, ಕಳೆದ ಕೆಲವು ದಿನಗಳ ಹಿಂದೆ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಡಾ.ಸಿ.ಎನ್​.ಅಶ್ವತ್ಥ ನಾರಾಯಣ, ಕನಕಪುರಕ್ಕೆ ಸ್ಥಳಾಂತರಿಸಲು ಡಿ.ಕೆ.ಸೋದರರು ಪ್ರಯತ್ನ ಮಾಡುತ್ತಿರುವ ಬಗ್ಗೆ ಸುಳಿವು ನೀಡಿದ್ದರು. ಒಂದು ವೇಳೆ ಇದು ನಿಜವೇ ಆದರೆ ಸಂಸತ್​ ಚುನಾವಣೆ ಹೊಸ್ತಿಲಲ್ಲಿ ಡಿ.ಕೆ. ಸಹೋದರರು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಂತೆ ಆಗಲಿದೆ.

 ಮೆಡಿಕಲ್​ ಕಾಲೇಜು ಎಲ್ಲಿ ಇರಬೇಕಿತ್ತು ಎನ್ನುವುದನ್ನು ಸರ್ಕಾರ ಆಲೋಚನೆ ಮಾಡಬೇಕಿತ್ತು. 

ಜಿಲ್ಲಾ ಕೇಂದ್ರದಲ್ಲಿ ಮೆಡಿಕಲ್​ ಕಾಲೇಜು ಇದ್ದರೆ ಎಷ್ಟು ಅನುಕೂಲ, ಹೊಸದಾಗಿ ನಿರ್ಮಾಣ ಆಗಿರುವ, ಅಪಘಾತಗಳಿಂದಲೇ ಕುಖ್ಯಾತಿ ಆಗಿರುವ ನೂತನ ಎಕ್ಸ್​ಪ್ರೆಸ್​ ಹೆದ್ದಾರಿ ಸಮೀಪ ಕಾಲೇಜು ಸ್ಥಾಪನೆ ಆಗಿದ್ದರೆ ಎಷ್ಟು ಜೀವಗಳು ಉಳಿಯುತ್ತಿದ್ದವು. 

ಕನಕಪುರವೂ ರಾಮನಗರ ಜಿಲ್ಲೆಯ ಒಂದು ತಾಲೂಕು ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಿತ್ತು. ಜಿಲ್ಲೆಯ ನಾಲ್ಕು ತಾಲೂಕುಗಳು ಒಂದೇ ಮರದ ರೆಂಬೆಗಳು. ಈ ರೆಂಬೆಗಳ ಬುಡ ರಾಮನಗರ ಎಂಬುದನ್ನು ಮರೆಯಬಾರದಿತ್ತು.

ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net