

ರಾಮನಗರ: ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ನಗರದ ವಿವಿಧ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಗುರುವಾರ ಪ್ರಚಾರ ನಡೆಸಿದರು.
ಕಳೆದ ಎರಡೂವರೆ ವರ್ಷಗಳಲ್ಲಿ ನಗರದ ಸಮಸ್ಯೆಗಳ ನಿವಾರಣೆಗೆ ಬಿಜೆಪಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಿದೆ. ನಗರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದರೆ ಇಡೀ ರಾಜ್ಯದಲ್ಲೇ ಮಾದರಿ ಜಿಲ್ಲಾ ಕೇಂದ್ರವನ್ನಾಗಿ ರಾಮನಗರವನ್ನು ರೂಪಿಸಲಾಗುವುದು. ಜನರು ಈ ಸಲ ನಗರಸಭೆಗೆ ಮತ ಹಾಕಲಿದ್ದು, ಮುಂದಿನ ಬಾರಿ ನಗರಪಾಲಿಕೆಗೆ ವೋಟ್ ಮಾಡಲಿದ್ದಾರೆ ಎಂದು ಡಿಸಿಎಂ ಅಶ್ವತ್ಥನಾರಾಯಣ ಹೇಳಿದರು.
ಕೆರೆಗಳ ಜೀರ್ಣೋದ್ಧಾರ, ಉತ್ತಮ ರಸ್ತೆಗಳು, ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಕೆ ಇತ್ಯಾದಿ ಮೂಲಸೌಕರ್ಯಗಳನ್ನು ಅಭಿವೃದ್ಧಿ ಮಾಡಲಾಗುವುದು. ಉಪನಗರ ರೈಲು ಯೋಜನೆಯಿಂದ ರಾಮನಗರಕ್ಕೆ ಹೆಚ್ಚು ಅನುಕೂಲವಾಗುತ್ತದೆ. ರಾಮನಗರದಿಂದ ನೇರವಾಗಿ ಬೆಂಗಳೂರಿನ 57 ರೈಲು ನಿಲ್ದಾಣಗಳಿಗೆ ತಲುಪಬಹುದು. ಇನ್ನೇನು ಬೆಂಗಳೂರು ವಿವಿಯ ಸ್ನಾತಕೋತ್ತರ ಕೇಂದ್ರವನ್ನು ಕೆಲ ದಿನಗಳಲ್ಲಿ ಸ್ವತಂತ್ರ ವಿಶ್ವವಿದ್ಯಾಲಯವನ್ನಾಗಿ ಮಾಡುತ್ತೇವೆ. ಮೆಡಿಕಲ್ ಕಾಲೇಜ್ ಕೂಡ ಮಂಜೂರಾಗಿದೆ. ಇದುವರೆಗೂ ಕಾಂಗ್ರೆಸ್, ಜೆಡಿಎಸ್ ನಗರಸಭೆ ಆಡಳಿತದಲ್ಲಿ ಏನೆಲ್ಲ ಅಭಿವೃದ್ಧಿ ಆಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಸಲ ಬದಲಾವಣೆಗಾಗಿ ಮತ ನೀಡಿ ಎಂದು ಜನರನ್ನು ಕೋರುತ್ತೇನೆ ಎಂದರು.
ಮೊದಲಿಗೆ 31ನೇ ವಾರ್ಡ್‌ನ ಹನುಮಂತನಗರದ ಮದ್ದೂರು ದೇವಸ್ಥಾನದ ಸಮೀಪ ಡಿಸಿಎಂ ಮತಯಾಚನೆ ಮಾಡಿದರು. ಇಲ್ಲಿಯ ಬಿಜೆಪಿ ಅಭ್ಯರ್ಥಿ ಚೈತ್ರಾ ನರೇಂದ್ರ ಹಾಜರಿದ್ದರು. ಬಳಿಕ ರಂಗರಾಯನಕೆರೆಗೆ ತೆರಳಿ ಕೆರೆಯನ್ನು ವೀಕ್ಷಣೆ ಮಾಡಿದ ಅವರು, ಕೆರೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.
ನಂತರ ರಂಗರಾಯನದೊಡ್ಡಿಗೆ ತೆರಳಿ ಪ್ರಚಾರ ನಡೆಸಿದ ಅವರು, ಈ ಪ್ರದೇಶದ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು. ದಿನದ 24 ಗಂಟೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತೇವೆ ಹಾಗೂ ಬೀದಿ ದೀಪ, ನಿವೇಶನಗಳಿಗೆ ಖಾತೆ ಕೊಡಿಸುವ ಕೆಲಸವನ್ನು ಆರು ತಿಂಗಳಲ್ಲಿ ಮಾಡಿಸುತ್ತೇನೆ ಎಂದರು. ಜತೆಗೆ ಅರ್ಚಕರ ಹಳ್ಳಿಯಲ್ಲಿ ಪ್ರಚಾರ ನಡೆಸಿದ ಅವರು, ಬಳಿಕ 25 ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಹರೀಶ್ ಹಾಗೂ 26ನೇ ವಾರ್ಡ್‌ನಲ್ಲಿ ಕೃಷ್ಣಪ್ಪ ಪರ ರಸ್ತೆಯಲ್ಲೇ ನಿಂತು ಪ್ರಚಾರ ನಡೆಸಿದರು. 1ನೇ ವಾರ್ಡ್ ಚಾಮುಂಡಿಪುರದಲ್ಲಿ ಅಭ್ಯರ್ಥಿ ಸವಿತಾ ನಂದೀಶ್ ಪರ ಹಾಗೂ 2ನೇ ವಾರ್ಡ್ ಅಂಬೇಡ್ಕರ್ ನಗರದಲ್ಲಿ ಪಕ್ಷದ ಹುರಿಯಾಳು ಸಾವಿತ್ರಮ್ಮ ಪರ ಡಿಸಿಎಂ ಮತಯಾಚನೆ ಮಾಡಿದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಹುಲವಾಡಿ ದೇವರಾಜ್ ಮುಖಂಡರಾದ ರಾಜೇಶ್ ಸೇರಿದಂತೆ ಹಲವರು ಮತಯಾಚನೆ ಸಂದರ್ಭದಲ್ಲಿ ಇದ್ದರು.
ಪ್ರಚಾರಕ್ಕೆ ಅನುಮತಿ ನೀಡುವಂತೆ ಮನವಿ ವಾರಾಂತ್ಯದ ಲಾಕ್‌ಡೌನ್ ಮಾಡಿ ಸರ್ಕಾರ ಆದೇಶ ಹೊರಡಿಸಿರುವ ಮಧ್ಯೆಯೇ ರಾಮನಗರ-ಚನ್ನಪಟ್ಟಣದಲ್ಲಿ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ-ಭಾನುವಾರ ಪ್ರಚಾರಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರನ್ನು ಮೊಬೈಲ್‌ನಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಸಂಪರ್ಕಿಸಿ ಮನವಿ ಮಾಡಿದರು. ಶನಿವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಬೇಕು ಹಾಗೂ ಮಾಧ್ಯಮದವರಿಗೆ ಪ್ರಣಾಳಿಕೆ ಬಗ್ಗೆ ತಿಳಿಸಬೇಕು. ಹಾಗಾಗಿ ಪ್ರಚಾರಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡಿದರು.
ಆಕ್ಸಿಜನ್ ಸಮಸ್ಯೆ ಇಲ್ಲ : ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. ಸರ್ಕಾರ ಕರೊನಾ ವಿಚಾರವಾಗಿ ಅಗತ್ಯ ಕ್ರಮವಹಿಸಿದೆ. ಕೆಲವೊಂದು ಆಸ್ಪತ್ರೆಯಲ್ಲಿ ಸೌಕರ್ಯವಿಲ್ಲದೇ ಸಮಸ್ಯೆಯಾಗಿದೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ವಹಿಸುತ್ತಿದ್ದು, ರಾಮನಗರದಲ್ಲಿಯೂ ಸಹ ಯಾವುದೇ ಸಮಸ್ಯೆ ಇಲ್ಲ. ಕೇಂದ್ರ ಸರ್ಕಾರ ಸಹ ರಾಜ್ಯ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದ್ದು, 2 ಸಾವಿರ ವೆಂಟಿಲೇಟರ್‌ಗಳನ್ನು ರಾಜ್ಯಕ್ಕೆ ನೀಡಿದೆ ಎಂದು ಡಿಸಿಎಂ ಅಶ್ವತ್ಥನಾರಾಯಣ ತಿಳಿಸಿದರು.