

ತೆಂಗು ಅಭಿವೃದ್ಧಿ ಮಂಡಳಿಯಿಂದ ವಿಮಾ ಸೌಲಭ್ಯ ಬೇಕಿದೆ ಹೆಚ್ಚಿನ ಪ್ರಚಾರ
ಗಂಗಾಧರ್ ಬೈರಾಪಟ್ಟಣ ರಾಮನಗರ
ಅಸಂಘಟಿತ ಕಾರ್ಮಿಕ ವಲಯದಲ್ಲಿಯೇ ಇರುವ ತೆಂಗಿನಕಾಯಿ ಕೊಯ್ಲು ಮಾಡುವ ಕಾರ್ಮಿಕರಿಗೆ ಈಗ ಕೇರಾ ಸುರಕ್ಷೆ ಲಭಿಸಲಿದೆ.
ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತದೆ. ಇದರಲ್ಲಿ ಅತಿ ಹೆಚ್ಚಿನ ಪಾಲು ಚನ್ನಪಟ್ಟಣದ್ದು. ತೆಂಗು ತೋಟಗಾರಿಕೆಗೆ ಕಾಯಿ ಅಥವಾ ಎಳನೀರು ಕೊಯ್ಲು ಮಾಡುವ ಅನುಭವಿ ಗೊನೆಗಾರರು ಬೇಕು. ಹಿಂದಿನಿಂದಲೂ ಇವರು ಅಸಂಟಿತರಾಗಿಯೇ ಇದ್ದು, ಏನೇ ಅಪಘಾತ ಸಂಭವಿಸಿದರೂ ಯಾವುದೇ ಪರಿಹಾರ ದೊರೆಯದೆ, ಇಡೀ ಕುಟುಂಬ ತೊಂದರೆಗೆ ಒಳಗಾಗುತ್ತಿದೆ.
ಆದರೆ, ತೆಂಗು ಅಭಿವೃದ್ಧಿ ಮಂಡಳಿ ಖಾಸಗಿ ಇನ್ಶೂರೆನ್ಸ್ ಕಂಪನಿ ಸಹಯೋಗದೊಂದಿಗೆ ತೆಂಗಿನಮರ ಹತ್ತುವವರಿಗೆ ಕೇರಾ ಸುರಕ್ಷಾ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ.
ಏನೇನು ಸೌಲಭ್ಯ?
ಈ ಯೋಜನೆಯಡಿ ವಿಮಾ ಫಲಾನುಭವಿಯಾದವರು ಆಕಸ್ಮಿಕವಾಗಿ ಮೃತಪಟ್ಟರೆ, ಇಲ್ಲ ಶಾಶ್ವತವಾಗಿ ಅಂಗವಿಕಲರಾದರೆ ಅಂತಹವರಿಗೆ 5 ಲಕ್ಷ ರೂ.ಗಳ ಪರಿಹಾರ ದೊರಯಲಿದೆ. ಇಷ್ಟೇ ಅಲ್ಲದೆ, ಅಪಘಾತವಾದ 24 ಗಂಟೆಯೊಳಗೆ ಒಂದು ಲಕ್ಷ ರೂ.ವರೆಗೆ ವಿಮಾ ಸುರಕ್ಷೆಯೂ ದೊರೆಯಲಿದೆ. ತಾತ್ಕಾಲಿಕ ಅಂಗವಿಕಲತೆಯನ್ನು ಹೊಂದುವ ಕೊಯ್ಲುಗಾರನಿಗೆ ಗರಿಷ್ಠ 18 ಸಾವಿರ ರೂ.ಪರಿಹಾರವೂ ದೊರೆಯುತ್ತದೆ. (ಪ್ರತಿ ವಾರ 3 ಸಾವಿರ ರೂ.ನಂತೆ) ಇಷ್ಟೇ ಅಲ್ಲದೆ, ಆಂಬುಲೆನ್ಸ್ ಖರ್ಚು 3 ಸಾವಿರ ರೂ.ಹಾಗೂ ಪಾಲಿಸಿದಾರ ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ 5 ಸಾವಿರ ರೂ.ದೊರೆಯುತ್ತದೆ.
ಯಾರು ಅರ್ಹರು?: ಈ ಯೋಜನೆ ಫಲಾನುಭವಿಗಳಾಗಲು 18&65 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಈ ವಿಮೆಯ ವಾರ್ಷಿಕ ಪ್ರೀಮಿಯಂನ ಮೊತ್ತ ಒಟ್ಟು 375 ರೂ.ಗಳಾಗಿದ್ದು, ಇದರಲ್ಲಿ 281 ರೂ.ಗಳನ್ನು ತೆಂಗು ಅಭಿವೃದ್ಧಿ ಮಂಡಳಿಯೇ ಭರಿಸಲಿದೆ. ಉಳಿಕೆ 94 ರೂ.ಗಳನ್ನು ಫಲಾನುಭವಿ ಪ್ರತಿ ವರ್ಷ ಪಡೆಯಬಹುದಾಗಿದೆ. ಸಾಂಪ್ರದಾಯಿಕವಾಗಿ ತೆಂಗಿನ ಮರ ಹತ್ತುವವರು ಈ ಹಣವನ್ನು ಪಾವತಿ ಮಾಡಿ ಸಂಬಂಧಪಟ್ಟ ದಾಖಲೆಗಳನ್ನು ಕೇರಳದ ಕೊಚ್ಚಿಯಲ್ಲಿರುವ ತೆಂಗು ಅಭಿವೃದ್ಧಿ ಮಂಡಳಿಗೆ ಕಳುಹಿಸಿಕೊಡಬೇಕು.
ಇಲಾಖೆ ಪ್ರಚುರ ಪಡಿಸಬೇಕಿದೆ
ತೆಂಗು ಕೊಯ್ಲು ಮಾಡುವ ಗೊನೆಗಾರರು ಸಂಪೂರ್ಣವಾಗಿ ಅಸಂಟಿತರಾಗಿದ್ದು, ಇವರಿಗೆ ವಿಮೆ ಬಗ್ಗೆ ಮಾಹಿತಿಯೇ ಇಲ್ಲ. ಜಿಲ್ಲೆಯಲ್ಲಿ ಈವರೆಗೂ ಕೇವಲ 6 ಮಂದಿ ರೈತರು ಮಾತ್ರ ವಿಮೆ ಮಾಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ 2022ರ ಡಿಸೆಂಬರ್ನಲ್ಲಿ ಜಾರಿಗೆ ಬಂದಿರುವ ಕೇರಾ ಸುರಕ್ಷಾ ವಿಮಾ ಯೋಜನೆಯನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ, ಎಫ್ಪಿಒಗಳು ಗಂಭೀರವಾಗಿ ಕ್ರಮವಹಿಸಬೇಕಿದೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ 5-10 ಮಂದಿ ತೆಂಗು ಕೊಯ್ಲು ಮಾಡುವ ಕಾರ್ಮಿಕರಿದ್ದು, ಇವರಿಗೆ ಇದರಿಂದ ಅನುಕೂಲವಾಗಲಿದೆ.
ತೆಂಗಿನಕಾಯಿ ಕೊಯ್ಲು ಮಾಡುವುದು ತುಂಬಾ ಅಪಾಯಕಾರಿ ಕೆಲಸ. ಯಾವಾಗಲೂ ತಮ್ಮ ಜೀವವನ್ನು ಪಣಕ್ಕಿಟ್ಟೇ ಮರಕ್ಕೆ ಹತ್ತುವುದರಿಂದ ಇಂತವರಿಗೆ ಅನುಕೂಲವಾಗಲೆಂದು, ಕೇರಾ ಸುರಕ್ಷಾ ವಿಮಾ ಯೋಜನೆ ಇದೆ. ಅರ್ಹರು ಇದರ ಲಾಭವನ್ನು ಪಡೆದುಕೊಳ್ಳಬೇಕು. ತಮ್ಮ ಹತ್ತಿರದ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕ ಮಾಡಿ, ವಿಮೆ ಮಾಡಿಸಿಕೊಳ್ಳಬೇಕು.
ಮುನೇಗೌಡ, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ ರಾಮನಗರ
ಕಷ್ಟದಲ್ಲಿಯೇ ತೆಂಗು ಕೊಯ್ಲು ಮಾಡುವವರು ಹಾಗೂ ಸುಲಿಯುವವರು ತೊಂದರೆಯಲ್ಲಿ ಇದ್ದಾರೆ. ಅವರ ನೆರವಿಗೆ ಸಂಘಟನೆಯನ್ನು ಕಟ್ಟಲಾಗುತ್ತಿದೆ. ಪ್ರತಿಯೊಬ್ಬರಿಗೂ ವಿಮೆ ಮಾಡಿಸುವ ಮೂಲಕ ಸಂಕಷ್ಟದಲ್ಲಿ ಇರುವವರ ನೆರವಿಗೆ ಧಾವಿಸಲಾಗುತ್ತಿದೆ.
ವಿಶ್ವನಾಥ್, ರೈತ ಸಂದ ಚನ್ನಪಟ್ಟಣ ತಾಲೂಕು ಅಧ್ಯಕ್ಷ