

ರಾಮನಗರ: ಮೈಸೂರು-ಬೆಂಗಳೂರು ನಡುವಿನ ದಶಪಥ ಹೆದ್ದಾರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಟಿಟಿ ವಾಹನ ಕ್ಯಾಂಟರ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, ಅನೇಕ ಮಂದಿಗೆ ಗಂಭೀರ ಗಾಯಗಳಾಗಿವೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ಬಳಿಯ ದಶಪಥ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದ ಕೃಷ್ಷ ಮತ್ತು ಮಹೇಶ್ ಎಂದು ಗುರುತಿಸಲಾಗಿದೆ. ಟಿಟಿಯಲ್ಲಿದ್ದ ಪ್ರಯಾಣಿಕರೆಲ್ಲರೂ ಚಿಕ್ಕಾಡೆ ಗ್ರಾಮದವರು ಎಂದು ತಿಳಿದುಬಂದಿದೆ.
ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ಹಿಂದಿರುಗುವಾಗ ಚನ್ನಪಟ್ಟಣದ ಮುದಗೆರೆ ಬಳಿ ಟಿಟಿ ವಾಹನ ಕ್ಯಾಂಟರ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಟಿಟಿ ವಾಹನದ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಮೃತದೇಹಗಳು ಹಾಗೂ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)