

ರಾಮನಗರ : ತಮಿಳುನಾಡಿನ ನಿರಂತರ ಕ್ಯಾತೆಯ ಹೊರತಾಗಿಯೂ ಮೇಕೆದಾಟು ವಿಚಾರದಲ್ಲಿ ರಾಜ್ಯದ ಪರವಾದ ತೀರ್ಪುಗಳು ಬರುತ್ತಿದ್ದು, ಇದೀಗ ಹಸಿರು ನ್ಯಾಯಾಧೀಕರಣದ (ಎನ್‌ಜಿಟಿ) ನಿರ್ಧಾರ ಸಂತಸಕ್ಕೆ ಕಾರಣವಾಗಿದೆ.
ಮೇಕೆದಾಟು ಹಲವಾರು ವರ್ಷಗಳಿಂದಲೂ ನನೆಗುದಿಗೆ ಬಿದ್ದಿರುವ ಮಹಾತ್ವಕಾಂಕ್ಷಿ ಯೋಜನೆಯಾಗಿದ್ದು, ಇದನ್ನು ಜಾರಿಗೆ ತರಬೇಕು ಎನ್ನುವುದು ಈ ಭಾಗದ ಜನರ ಬಹು ವರ್ಷಗಳ ಕನಸು ಕೂಡ. ಈ ಕನಸಿಗೆ ಪ್ರತಿ ಬಾರಿ ಬಜೆಟ್‌ನಲ್ಲೂ ರೆಕ್ಕೆ ಕಟ್ಟುವ ಕೆಲಸವನ್ನು ಸರ್ಕಾರಗಳು ಮಾಡುತ್ತಾ ಬಂದಿದ್ದು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಯೋಜನೆ ಕಾರ್ಯಗತ ಗೊಳಿಸುವ ಮಾತುಗಳನ್ನಾಡಿ, 9000 ಕೋಟಿ ರೂ. ಯೋಜನಾ ಮೊತ್ತದ ವರದಿಯನ್ನು ಕೇಂದ್ರ ಜಲ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿ ನೀಡಿದ್ದರು.
ಈ ನಡುವೆ ಪತ್ರಿಕಾ ವರದಿ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡು ವಿಚಾರಣೆ ನಡೆಸಿದ್ದ ಚೆನ್ನೈಯಲ್ಲಿರುವ ಹಸಿರು ನ್ಯಾಯಾಧೀಕರಣದ ದಕ್ಷಿಣ ಪೀಠ ವಾಸ್ತವ ವರದಿ ನೀಡಲು ಜಂಟಿ ಸಮಿತಿ ರಚಿಸಿ ಕೇಂದ್ರ ಹಾಗೂ ಉಭಯ ರಾಜ್ಯಗಳಿಗೆ ನೋಟಿಸ್ ನೀಡಿತ್ತು. ಇದರ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ರಾಜ್ಯ ಮೇಲ್ಮನವಿ ಸಲ್ಲಿಸಿತ್ತು. ರಾಜ್ಯದ ವಾದಕ್ಕೆ ಜಯ ದೊರೆತಿದ್ದು, ಇದೀಗ ಸರ್ಕಾರ ಉಳಿದಿರುವ ಅಡೆತಡೆಗಳನ್ನು ನಿವಾರಿಸಿ ಯೋಜನೆ ಜಾರಿಗೆ ಮುಂದಾಗಬೇಕು ಎನ್ನುವ ಕೂಗು ಕೇಳಿ ಬಂದಿದೆ.
ಯೋಜನೆ ಏನು ಎಲ್ಲಿ?: ಮೇಕೆದಾಟು ಅಣೆಕಟ್ಟು ಯೋಜನೆ ಪ್ರಮುಖವಾಗಿ ನೀರು ಸಂಗ್ರಹ, ವಿದ್ಯುತ್ ಉತ್ಪಾದನೆ ಮತ್ತು ಕುಡಿಯಲು ನೀರು ಬಳಕೆ ಮಾಡುವ ಉದ್ದೇಶದಿಂದಲೇ ರೂಪಿತವಾಗಿದೆ. ಈ ಹಿನ್ನೆಲೆಯಲ್ಲಿ ಸಂಗಮ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಮೂರು ಕಡೆಗಳಲ್ಲಿ ಸಂಬಂಧಪಟ್ಟ ಇಲಾಖೆ ಸ್ಥಳ ಗುರುತಿಸಿ ಹೋಗಿದೆ. ಮೇಕೆದಾಟು, ಒಂಟಿ ಗುಂಡು ಮತ್ತೊಂದು ಬೊಮ್ಮಸಂದ್ರದ ಸಮೀಪದ ಮಹಾಮಡು ಎಂದು ಕರೆಯುವ ಸ್ಥಳವನ್ನು ಯೋಜನೆಗಾಗಿ ಗುರುತಿಸಲಾಗಿದೆ.
ಕೇಂದ್ರದ ನಿಲುವು ಕುತೂಹಲ: ಇದರ ನಡುವೆ ತಮಿಳುನಾಡು ನೂತನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ, ಆಕ್ಷೇಪಣೆ ಸಲ್ಲಿಸಿದ್ದಾರೆ. ತಮಿಳುನಾಡಿಗೆ ಯೋಜನೆಯಿಂದ ಯಾವುದೇ ತೊಂದರೆ ಇಲ್ಲವಾದರೂ ಪದೇಪದೆ ವಿಷಯವನ್ನು ರಾಜಕೀಯಗೊಳಿಸುವ ಮೂಲಕ ತಮಿಳುನಾಡು ತನ್ನ ಬೇಳೆ ಬೇಯಿಸಿಕೊಳ್ಳುತ್ತಿದ್ದು, ಈ ಸಂಬಂಧ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ನಿಲುವು ಏನು ಎನ್ನುವುದು ಕುತೂಹಲ ಮೂಡಿಸಿದೆ.
ಕಾವೇರಿ ವನ್ಯಜೀವಿ ಧಾಮ
ಮೇಕೆದಾಟು ಯೋಜನೆ ನಿರ್ಮಾಣವಾಗುವುದು ಕಾವೇರಿ ವನ್ಯಜೀವಿ ಧಾಮದಲ್ಲಿ. ಇಲ್ಲಿಂದ ತಮಿಳುನಾಡಿನ ಗಡಿ ಸುಮಾರು 5-6 ಕಿಮೀ ದೂರದಲ್ಲಿದೆ. ಕಾವೇರಿ ವನ್ಯಜೀವಿ ಧಾಮದ ಒಟ್ಟು ವಿಸ್ತೀರ್ಣ 1,02,753 ಹೆಕ್ಟೇರ್. ರಾಮನಗರ, ಮಂಡ್ಯ ಮತ್ತು ಚಾಮರಾಜನಗರ ವ್ಯಾಪ್ತಿಗೆ ಒಳಪಟ್ಟಿದೆ. ಇದು ಕುರುಚಲು ಕಾಡಾಗಿದ್ದು, ವಿವಿಧ ಜಾತಿಯ ಅಪರೂಪದ ಪ್ರಾಣಿ ಮತ್ತು ಪಕ್ಷಿಗಳ ಸಂಕುಲಕ್ಕೆ ಆಶ್ರಯವಾಗಿದೆ.
ಆನೆ, ಚಿರತೆ, ಜಿಂಕೆ ಮಾತ್ರವಲ್ಲದೆ, ಹನಿ ಬಡ್ಜರ್‌ನಂತಹ ಅಪರೂಪದ ಪ್ರಾಣಿಗಳು ಇಲ್ಲಿವೆ. ಅಳಿವಿನಂಚಿನಲ್ಲಿರುವ ಬೂದು ಬಣ್ಣದ ದೈತ್ಯ ಅಳಿಲುಗಳು, ಜತೆಗೆ 280 ವಿವಿಧ ಪಕ್ಷಿಗಳ ಸಂಕುಲವಿದೆ. ಕಾವೇರಿ ನದಿಯಲ್ಲಿ ಮಾತ್ರ ಕಾಣ ಸಿಗುವ ಮತ್ತು ಅಳಿವಿನಂಚಿನಲ್ಲಿರುವ ಮಷೀರ್ ಜಾತಿಯ ಮೀನುಗಳು, ಮೊಸಳೆಗಳು, ಆಮೆಗಳು, ನೀರು ನಾಯಿಗಳು ಕಾವೇರಿ ನದಿಯಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ. ನೀರು ಸಂಗ್ರಹಣೆಯಿಂದಾಗಿ ಕಾವೇರಿ ವನ್ಯಜೀವಿ ಧಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕಾಡುಪ್ರಾಣಿಗಳ ಸಂಖ್ಯೆ ಮತ್ತಷ್ಟು ಹೆಚ್ಚುತ್ತದೆ ಎನ್ನುವ ಲೆಕ್ಕಾಚಾರವೂ ಇದೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನೀಡಿರುವ ತೀರ್ಪು ಸ್ವಾಗತಾರ್ಹ, ಸರ್ಕಾರ ಕೂಡಲೇ ಬಾಕಿ ಇರುವ ಅಡೆ-ತಡೆ ನಿವಾರಿಸಿ ಯೋಜನೆ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಸರ್ಕಾರ ರಾಕೆಟ್ ವೇಗದಲ್ಲಿ ಕೆಲಸ ಮಾಡಬೇಕು. ಸಂಪತ್ ಕುಮಾರ್ ಮೇಕೆದಾಟು ಹೋರಾಟ ಸಮಿತಿ
ಲಕ್ಷಾಂತರ ರೈತರಿಗೆ ಉಪಯುಕ್ತ ವಾಗಿರುವುದರಿಂದ ಶೀಘ್ರವೇ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಅಲ್ಲಲ್ಲಿ ಮಿನಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ಈ ನೀರನ್ನು ತುಂಬಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ದೇಗುಲಮಠ, ಕನಕಪುರ ಬಹು ಕಾಲದಿಂದ ನನೆಗುದಿಗೆ ಬಿದ್ದು ಯೋಜನೆಗೆ ಜಿಲ್ಲೆಯ ಜನತೆ ಕಾಯುತ್ತಿದ್ದರು. ಈ ತೀರ್ಪು ನಾಡಿನ ಜನತೆಗೆ ಮತ್ತು ರೈತರಿಗೆ ಸಂತಸ ತಂದಿದೆ. ಇದರ ಕುಡಿಯುವ ನೀರಿನ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕೇಂದ್ರ ಹಾಗೂ ರಾಜ್ಯಗಳಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ರೈತರು ಮತ್ತು ಜನಪರವಾಗಿ ಯೋಜನೆ ಅನುಷ್ಠಾನಗೊಳಿಸಲು ನಮ್ಮ ಸರ್ಕಾರ ಹಿಂಜರಿಯುವುದಿಲ್ಲ. ನಂದಿನಿಗೌಡ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ