ಬೀದಿಗೆ ಬಂತು ಜನಸಾಮಾನ್ಯರ ಬದುಕು

Published on

ರಾಮನಗರ: ಇಂಧನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಜೆಡಿಎಸ್ ತಾಲೂಕು ಘಟಕದ ವತಿಯಿಂದ ರಸ್ತೆತಡೆ ನಡೆಸಿ ಪ್ರತಿಭಟಿಸಲಾಯಿತು.

ನಗರದ ಐಜೂರು ವೃತ್ತದ ಬಳಿ ಸೋಮವಾರ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಖಾಲಿ ಸಿಲಿಂಡರ್‌ಗಳನ್ನು ಇಟ್ಟು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪಕ್ಷದ ತಾಲೂಕು ಅಧ್ಯಕ್ಷ ರಾಜಶೇಖರ್, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಚ್ಚೇದಿನಗಳನ್ನು ನೀಡುವುದಾಗಿ ಹೇಳಿ ಈಗ ಸಾಮಾನ್ಯ ಜನರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಪ್ರತಿದಿನ ಇಂಧನ ಬೆಲೆ ಏರಿಕೆ ಮಾಡುವ ಮೂಲಕ ಜನರ ಮೇಲೆ ಬರೆ ಎಳೆದಿದೆ. ಪೆಟ್ರೋಲ್, ಡಿಸೇಲ್ ಬೆಲೆ ಲೀಟರ್‌ಗೆ 100 ರೂ. ದಾಟಿದ್ದು, ಇದರಿಂದ ಇತರ ಅಗತ್ಯ ವಸ್ತುಗಳ ಬೆಲೆಯೂ ಏರಿದೆ. ಜತೆಗೆ, ಕರೊನಾದಿಂದಾಗಿ ಆರ್ಥಿಕ ಸಂಕಷ್ಟದಲ್ಲಿದ್ದ ಜನ ಬೆಲೆ ಏರಿಕೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದಾರೆ. ಸಾಮಾನ್ಯ ಜನತೆ ಬದುಕು ಬೇಡ ಎನ್ನುವ ಹಂತಕ್ಕೆ ಬಂದಿದ್ದು, ಇದಕ್ಕೆಲ್ಲಾ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ನೇರ ಹೊಣೆ ಎಂದು ಆರೋಪಿಸಿದರು.

ಮುಖಂಡ ಚಿಕ್ಕವೀರೇಗೌಡ ಮಾತನಾಡಿ, ಜನರ ಬವಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರಣವಾಗಿವೆ. ಕೇಂದ್ರ ತನ್ನ ಬೊಕ್ಕಸ ತುಂಬಿಸಿಕೊಳ್ಳುವ ಸಲುವಾಗಿ ಸಾಮಾನ್ಯ ಜನರಿಗೆ ತೆರಿಗೆ ಬರೆಯನ್ನು ಹಾಕುತ್ತಿದೆ. ಇಂಧನದ ಮೇಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಕಾರಣ ಮುಂದಿಟ್ಟುಕೊಂಡು ನಾಟಕವಾಡುತ್ತಿದೆ. ರಾಜ್ಯ ಸರ್ಕಾರವೂ ಅನಗತ್ಯ ತೆರಿಗೆಗಳನ್ನು ಹಾಕುವ ಮೂಲಕ ಮತ್ತಷ್ಟು ಬೆಲೆ ಏರಲು ಕಾರಣವಾಗಿದೆ.

ರಾಜ್ಯ ಸರ್ಕಾರ ಕೂಡಲೇ ಇಂಧನದ ಮೇಲಿನ ಸೆಸ್‌ಗಳನ್ನು ಕಡಿಮೆ ಮಾಡಬೇಕು. ಹಾಗೂ ವಿದ್ಯುತ್ ಬೆಲೆ ಕಡಿಮೆ ಮಾಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಂತರ ರಾಮನಗರ ತಹಸೀಲ್ದಾರ್ ನರಸಿಂಹಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಮಂಜುನಾಥ್, ಗೂಳಿಗೌಡ, ಜಿ.ಟಿ.ಕೃಷ್ಣ, ಹೋಟೆಲ್ ಉಮೇಶ್, ಮಹದೇವ್, ಮುಕುಂದರಾಜ್, ಜಯಕುಮಾರ್, ಅಜಯ್ ದೇವೇಗೌಡ, ಆಡಿಟರ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net