ರಮಾಬಾಯಿ ತ್ಯಾಗ ಎಲ್ಲರಿಗೂ ಮಾದರಿ

ramabaayi
ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಡಿಎಸ್‌ಎಸ್ ಕಾರ್ಯಕರ್ತರು ಕೇಕ್ ಕತ್ತರಿಸುವ ಮೂಲಕ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನವನ್ನು ಆಚರಿಸಿದರು. ಕೆ.ಟಿ.ರಾಧಾಕೃಷ್ಣ, ಎಚ್.ಪಿ.ಮಂಜೇಗೌಡ, ಮೋಹನ್‌ಕುಮಾರ್ ಇತರರಿದ್ದರು.
Published on

ಚಿಕ್ಕಮಗಳೂರು: ರಮಾಬಾಯಿ ಅವರ ತ್ಯಾಗದಿಂದಲೇ ಪ್ರಬುದ್ಧ ಭಾರತಕ್ಕೆ ಅಂಬೇಡ್ಕರ್ ಸಿಕ್ಕಿದ್ದು. ರಮಾಬಾಯಿಯ ತ್ಯಾಗವೇ ಅಂಬೇಡ್ಕರ್ ಅವರ ಶಕ್ತಿ. ಅವರ ತ್ಯಾಗ ಎಲ್ಲರ ನೆನಪಿನಲ್ಲಿ ಉಳಿಸಿಕೊಳ್ಳಬೇಕಿದೆ ಎಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅಭಿಪ್ರಾಯಪಟ್ಟರು.

ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಡಿಎಸ್‌ಎಸ್‌ನಿಂದ ಬುಧವಾರ ಆಯೋಜಿಸಿದ್ದ ರಮಾಬಾಯಿ ಅಂಬೇಡ್ಕರ್ ಅವರ 126ನೇ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಪುರುಷನ ಯಶಸ್ಸಿನಲ್ಲಿ ಒಬ್ಬ ಮಹಿಳೆಯ ಪಾತ್ರ ಇದ್ದೇ ಇರುತ್ತದೆ. ಅಂಬೇಡ್ಕರ್ ಅವರ ಸಾಧನೆಯ ಹಿಂದೆ ರಮಾಬಾಯಿ ಅವರ ತ್ಯಾಗ ಹಾಗೂ ಶ್ರಮವಿದೆ ಎಂದರು.
ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಕಬ್ಬಿಗೆರೆ ಮೋಹನ್‌ಕುಮಾರ್ ಮಾತನಾಡಿ, ಅಂಬೇಡ್ಕರ್ ಶಿಕ್ಷಣ ಪಡೆಯುವ ದಿನಗಳಲ್ಲಿ ಸುಖ, ಸಂತೋಷ, ನೆಮ್ಮದಿ ಯಾವುದರ ಬಗ್ಗೆಯೂ ರಮಾಬಾಯಿ ತಲೆಕೆಡಿಸಿಕೊಳ್ಳಲಿಲ್ಲ. ಸಂಸಾರದ ನೋವು ಅಂಬೇಡ್ಕರ್ ಅವರಿಗೆ ಸ್ವಲ್ಪವೂ ತಿಳಿಯದಂತೆ ನೋಡಿಕೊಂಡಿದ್ದು ರಮಾಬಾಯಿ ಅವರು ಎಂದು ಸ್ಮರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ ಮಾತನಾಡಿ, ಜಗತ್ತಿನ ಯಾವ ನಾಯಕರಿಗೂ ಸಿಗದಂತಹ ತ್ಯಾಗಮಯಿ ಸತಿ ಅಂಬೇಡ್ಕರ್ ಅವರಿಗೆ ಸಿಕ್ಕಿದ್ದರು. ರಮಾಬಾಯಿ ಅವರು ಸಂಗಾತಿಯಾಗಿ ಅಂಬೇಡ್ಕರ್ ಅವರಿಗೆ ಸಿಕ್ಕಿದ್ದರಿಂದಲೇ ಅವರು ಸಂವಿಧಾನ ರಚನೆ ಮಾಡಲು ಸಾಧ್ಯವಾಯಿತು ಎಂದರೆ ಅತಿಶಯೋಕ್ತಿ ಆಗಲಾರದು ಎಂದು ಹೇಳಿದರು.
ದಲಿತ ಮುಖಂಡರಾದ ಗಂಗಾಧರ್, ಸುಧಾ, ಮಂಜುಳಾ, ಹರೀಶ್, ಗಂಗಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net