

ರಾಣೆಬೆನ್ನೂರ: ಬೆಳಗ್ಗೆ ದೇವಸ್ಥಾನಗಳಲ್ಲಿ ಶ್ರೀ ರಾಮಜಪ, ಮಧ್ಯಾಹ್ನ ಗಲ್ಲಿ ಗಲ್ಲಿಯಲ್ಲಿ ಅನ್ನಸಂತರ್ಪಣೆ, ಉಪಹಾರ ಹಾಗೂ ತಂಪುಪಾನೀಯ ವಿತರಣೆ ಮತ್ತು ಸಂಜೆ ಪ್ರತಿ ಮನೆ, ಓಣಿ, ಕೇರಿಗಳಲ್ಲಿ ರಾಮಜ್ಯೋತಿ ಬೆಳಗಿಸುವ ಮೂಲಕ ಅಯೋಧ್ಯೆ ಶ್ರೀ ರಾಮ ಮಂದಿರದ ಶ್ರೀ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ಜನತೆ ಭಕ್ತಭಾವದಿಂದ ನಮಿಸಿದರು.
ನಗರ ಸೇರಿ ತಾಲೂಕಿನಾದ್ಯಂತ ಶ್ರೀ ರಾಮ ಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ದೀಪಾವಳಿಯಂತೆ ಸಂಭ್ರಮ ಸಡಗರ ಮನೆ ಮಾಡಿತ್ತು. ನಗರದ ಕೋಟೆ ಓಣಿ ಹಾಗೂ ಸಂಗಮ್ ವೃತ್ತದ ಬಳಿಯಿರುವ ಶ್ರೀ ರಾಮನ ಮಂದಿರ ಸೇರಿ ಇತರ ಮಂದಿರಗಳಲ್ಲಿ ಬೆಳಗ್ಗೆಯಿಂದಲೇ ರಾಮ ತಾರಕ ಹೋಮ, ಅಭಿಷೇಕ, ಹೋಮ-ಹವನ ಸೇರಿ ವಿವಿಧ ಧಾರ್ಮಿಕ ಪೂಜೆ ನೆರವೇರಿಸಲಾಯಿತು.
ಬೆಳಗ್ಗೆ ಎಲ್ಲರೂ ತಮಗೆ ಸಮೀಪವಿರುವ ಶ್ರೀ ರಾಮ ಮಂದಿರಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಶ್ರೀ ರಾಮನ ಕೃಪೆಗೆ ಪಾತ್ರರಾದರು. ದೇವಸ್ಥಾನಗಳಲ್ಲಿ ಶ್ರೀ ರಾಮಜಪ, ಹನುಮಾನ ಚಾಲಿಸ್ ಪಠಣ, ಶ್ಲೋಕ್ ಪಠಣ ಹಾಗೂ ರಾಮಸ್ಮರಣೆಯಲ್ಲಿ ಭಕ್ತರು ಮಗ್ನರಾಗಿದ್ದರು. ಕೋಟೆಯ ಮೈಲಾರ ಲಿಂಗೇಶ್ವರ ದೇವಸ್ಥಾನ ಸೇರಿ ಇತರೆಡೆ ಅಯೋಧ್ಯೆ ಶ್ರೀ ರಾಮ ಮಂದಿರ ಉದ್ಘಾಟನೆಯ ನೇರ ಪ್ರಸಾರವನ್ನು ಜನತೆ ವೀಕ್ಷಿಸಿದರು.
ಸಂಭ್ರಮದಿಂದ ದಾಸೋಹ…
ಶ್ರೀ ರಾಮ ಮಂದಿರ ಉದ್ಘಾಟನೆ ನಿಮಿತ್ತ ನಗರದ ಹಳೆ ಪಿ.ಬಿ. ರಸ್ತೆಯುದ್ದಕ್ಕೂ, ಬಸ್ ನಿಲ್ದಾಣದ ಎದುರು, ಕೆಎಲ್‌ಇ ಕಾಂಪ್ಲೇಸ್, ಅಶೋಕ ನಗರ, ಹಲಗೇರಿ ವೃತ್ತ, ಸಂಚಾರ ಪೊಲೀಸ್ ಠಾಣೆ ವೃತ್ತ, ಮಾರುತಿ ನಗರ ಸೇರಿ ಪ್ರಮುಖ ವೃತ್ತಗಳಲ್ಲಿ ಕೆಲವರು ಬೆಳಗ್ಗೆ ಸೀರಾ, ಉಪ್ಪಿಟ್ಟು ಉಪಹಾರ ನೀಡಿದರೆ, ಇನ್ನೂ ಕೆಲವರು ಮಧ್ಯಾಹ್ನ ಗೋಧಿ ಹುಗ್ಗಿ, ಅನ್ನ-ಸಾಂಬರ ಉಣಬಡಿಸಿದರು.
ಅಲ್ಲಲ್ಲಿ ಶರಬತ್, ಪಾನಕ ಸೇರಿ ಇತರ ತಂಪು ಪಾನೀಯ ವಿತರಿಸುವ ಮೂಲಕ ಶ್ರೀ ರಾಮನ ಕೃಪೆಗೆ ಪಾತ್ರರಾದರು. ಗ್ರಾಮೀಣ ಭಾಗದಲ್ಲಿ ಕೆಲವೆಡೆ ಅನ್ನಸಂತರ್ಪಣೆ ನೆರವೇರಿಸಿದರೆ ಇನ್ನೂ ಕೆಲವೆಡೆ ಕ್ವಿಂಟಾಲ್‌ಗಟ್ಟಲೇ ಲಡ್ಡು ಸಿದ್ಧಪಡಿಸಿ ಇಡೀ ಗ್ರಾಮಗಳಿಗೆ ಹಂಚುತ್ತಿರುವ ದೃಶ್ಯ ಕಂಡು ಬಂದಿತು.