ಏನಾಗಿತ್ತು ಕೇಂದ್ರ ಸಚಿವ ರಾಮ್ ವಿಲಾಸ್​ ಪಾಸ್ವಾನ್​ಗೆ? ಕೇಂದ್ರಕ್ಕಿದು ಎರಡನೇ ಆಘಾತ

Ram Vilas Paswan 1
Published on

ನವದೆಹಲಿ: ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್​ ಅವರು ಇಂದು ಮೃತಪಟ್ಟಿದ್ದಾರೆ.

ಎನ್​ಡಿಎ ಮಿತ್ರಪಕ್ಷ ಎಲ್​ಜೆಪಿ ಸಂಸ್ಥಾಪಕರಾಗಿದ್ದ ರಾಮ್​ ವಿಲಾಸ್ ಪಾಸ್ವಾನ್​ ಪ್ರಸಕ್ತ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದರು. ಬಿಹಾರದ ಹಿರಿಯ ದಲಿತ ನಾಯಕರಾಗಿದ್ದ ಪಾಸ್ವಾನ್​ ಅವರಿಗೆ ಕಳೆದ ಕೆಲವು ವಾರಗಳಿಂದಲೂ ಅನಾರೋಗ್ಯ ಕಾಡುತ್ತಿತ್ತು. ಹೃದಯ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿಂದಿನಿಂದಲೂ ಹೃದಯ ಕಾಯಿಲೆ ಹೊಂದಿದ್ದ ಪಾಸ್ವಾನ್ ಆರೋಗ್ಯ ಇತ್ತೀಚಿನ ದಿನಗಳಲ್ಲಿ ಹದಗೆಟ್ಟಿತ್ತು. ಅಕ್ಟೋಬರ್​ 3ರ ಮಧ್ಯರಾತ್ರಿ ತುರ್ತಾಗಿ ಒಂದು ಶಸ್ತ್ರ ಚಿಕಿತ್ಸೆಯನ್ನೂ ಮಾಡಲಾಗಿತ್ತು. ಅಗತ್ಯ ಬಿದ್ದರೆ ಇನ್ನೊಂದು ಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ಪುತ್ರ ಚಿರಾಗ್​ ತಿಳಿಸಿದ್ದರು.

ಪಾಸ್ವಾನ್ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಷಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇರಿ ಹಲವು ಗಣ್ಯರು ಚಿರಾಗ್ ಪಾಸ್ವಾನ್​ ಅವರಿಗೆ ಕರೆ ಮಾಡಿ ವಿಚಾರಿಸಿದ್ದರು. ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು. ಅಷ್ಟೇ ಅಲ್ಲ, ಚಿರಾಗ್ ತನ್ನ ತಂದೆಯನ್ನು ಕಾಳಜಿ ಮಾಡುವ ರೀತಿಯನ್ನೂ ಮೆಚ್ಚಿಕೊಂಡಿದ್ದರು.

ಇತ್ತೀಚೆಗಷ್ಟೇ ಕೇಂದ್ರ ಸಚಿವ ಸುರೇಶ್​ ಅಂಗಡಿಯವರು ಕರೊನಾದಿಂದ ಮೃತಪಟ್ಟಿದ್ದಾರೆ. ಅದರ ಬೆನ್ನಲ್ಲೇ ಇನ್ನೋರ್ವ ಸಚಿವರನ್ನು ಕಳೆದುಕೊಂಡಿದ್ದು ಕೇಂದ್ರ ಸರ್ಕಾರಕ್ಕೆ ಆಘಾತವೇ ಸರಿ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net