ರಾಮಮಂದಿರ ಕಟ್ಟಡ ಯೋಜನೆ ಅಂತಿಮಗೊಳಿಸುತ್ತಿದೆ ಯೋಜನಾ ಸಮಿತಿ: ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ

Ram Mandir
Published on

ಲಖನೌ: ಅಯೋಧ್ಯೆಯ ಶ್ರೀರಾಮಮಂದಿರ ನಿರ್ಮಾಣಕ್ಕೆ ಕಟ್ಟಡ ಯೋಜನೆಯನ್ನು ಅಂತಿಮಗೊಳಿಸುವ ಕೆಲಸವನ್ನು ರಾಮಮಂದಿರ ನಿರ್ಮಾಣ ಸಮಿತಿ ಅಂತಿಮಗೊಳಿಸುವಲ್ಲಿ ಕಾರ್ಯನಿರತವಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಸದಸ್ಯ ಅನಿಲ್ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.

ಕಟ್ಟಡ ಯೋಜನೆ ಅಂತಿಮಗೊಳಿಸುವುದಕ್ಕಾಗಿ ನಿರ್ಮಾಣ ಸಮಿತಿ ಎರಡು ದಿನಗಳ ಸಭೆ ನಡೆಸುತ್ತಿದ್ದು, ಮೊದಲ ದಿನದ ಸಭೆಯ ಬಳಿಕ ಮಿಶ್ರಾ ಈ ವಿಷಯ ಬಹಿರಂಗಪಡಿಸಿದ್ದಾರೆ. ಸಾವಿರ ವರ್ಷವಾದರೂ ಕಟ್ಟಡಕ್ಕೆ ಯಾವುದೇ ಕುಂದು ಉಂಟಾಗಬಾರದು. ತಾಜ್​ ಮಹಲ್ ನಿರ್ಮಾಣದ ತಂತ್ರವನ್ನು ಗಮನಿಸಿಕೊಂಡು, ಭೂಕಂಪವಾದರೂ ತಡೆದುಕೊಳ್ಳಬಲ್ಲ ಕಟ್ಟಡ ನಿರ್ಮಿಸುವ ಉದ್ದೇಶವಿದೆ. ಐಐಟಿ ಮದ್ರಾಸ್ ಈಗಾಗಲೇ ಬುನಾದಿ ಹಾಕುವ ಸ್ಥಳದ ಮಣ್ಣನ್ನು ಪರಿಶೀಲನೆಗೊಳಪಡಿಸಿದ್ದು, ಅದು ಕೊಡುವ ವರದಿ ಆಧರಿಸಿ ಮುಂದಿನ ಕ್ರಮವನ್ನು ನಿರ್ಮಾಣ ಸಮಿತಿ ತೆಗೆದುಕೊಳ್ಳಲಿದೆ ಎಂದು ಮಿಶ್ರಾ ತಿಳಿಸಿದ್ದಾರೆ.

ರಾಮ ಮಂದಿರ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಸಭೆಯ ಅಧ್ಯಕ್ಷತೆ ವಹಿಸಿದ್ದು, ಲಾರ್ಸೆನ್​ ಆ್ಯಂಡ್ ಟೂಬ್ರೋ ಕಂಪನಿ ಮತ್ತು ಟಾಟಾ ಕನ್ಸಲ್ಟಿಂಗ್​ ಎಂಜಿನಿಯರ್ಸ್​ನ ಪರಿಣತರ ಜತೆಗೆ ಲೇಔಟ್​ ಯೋಜನೆಯ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಮಂದಿರ ನಿರ್ಮಾಣ ಸ್ಥಳಕ್ಕೆ ಎರಡೂ ಕಂಪನಿಗಳ ಪರಿಣತರ ಜತೆಗೆ ಮಿಶ್ರಾ, ಟ್ರಸ್ಟ್ ಕಾರ್ಯದರ್ಶಿ ಚಂಪತ್ ರಾಯ್​, ಟ್ರಸ್ಟಿಗಳಾದ ದೇವ್ ಗಿರಿ ಮತ್ತು ಅನಿಲ್ ಮಿಶ್ರಾ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈಗಾಗಲೇ ಟ್ರಸ್ಟ್ ಅಯೋಧ್ಯೆಯ ಕರಸೇವಕಪುರಮ್​ನ ಕಾರ್ಯಾಗಾರದಿಂದ ಕೆತ್ತನೆ ಪೂರ್ಣಗೊಳಿಸಿದ ಕಲ್ಲುಗಳನ್ನು ನಿರ್ಮಾಣ ಸ್ಥಳಕ್ಕೆ ಸ್ಥಳಾಂತರಿಸುವ ಕೆಲಸ ಶುರುಮಾಡಿದೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net