ಆರೋಗ್ಯ ಸಿಬ್ಬಂದಿ ಮೇಲೆ ದಾಳಿ ಮಾಡಿದರೆ ಕಠಿಣ ಶಿಕ್ಷೆ: ಸುಗ್ರೀವಾಜ್ಞೆಗೆ ಬಿತ್ತು ರಾಷ್ಟ್ರಪತಿ ಅಂಕಿತ

halle-sugreevajne
Published on

ನವದೆಹಲಿ: ಕರೋನಾ ಸೋಂಕಿಗೆ ಒಳಗಾಗಿರುವವರ ಪರೀಕ್ಷೆ ಹಾಗೂ ಚಿಕಿತ್ಸೆಗೆ ಹೋದ ಸಂದರ್ಭಗಳಲ್ಲಿ ಆರೋಗ್ಯ ಸಿಬ್ಬಂದಿ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇದನ್ನು ಮಟ್ಟ ಹಾಕಲು ಈಗಾಗಲೇ ಹೊರಡಿಸಲಾದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ಅಂಕಿತ ಹಾಕಿದ್ದಾರೆ.

ಸುಗ್ರೀವಾಜ್ಞೆ ಪ್ರಕಾರ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವುದು ಸಾಬೀತಾದರೆ ಆರೋಪಿಗೆ 6 ತಿಂಗಳಿಂದ 7 ವರ್ಷದವರೆಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ.

ಇದರ ಜತೆಗೆ, ಪ್ರಕರಣದ ತನಿಖೆಯನ್ನು 30 ದಿನಗಳ ಒಳಗೆ ಮುಗಿಸಬೇಕು. ಆರೋಪಿಗೆ 3 ತಿಂಗಳಿಂದ 5 ವರ್ಷದವರೆಗೆ ಶಿಕ್ಷೆ ನೀಡಲಾಗುತ್ತದೆ. ಹಾಗೂ 50 ಸಾವಿರ ರೂಪಾಯಿಂದ 2 ಲಕ್ಷ ರೂ.ವರೆಗೂ ದಂಡ ವಿಧಿಸಲಾಗುವುದು. ಸಿಬ್ಹಂದಿಗೆ ಗಂಭೀರ ಗಾಯಗಳಾಗಿದ್ದರೆ ಆರೋಪಿಗೆ 7 ವರ್ಷದವರೆಗೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಮತ್ತು 1 ಲಕ್ಷ ರೂ.ಯಿಂದ 5 ಲಕ್ಷ ರೂ.ವರೆಗೂ ದಂಡ ವಿಧಿಸಲಾಗುವುದು ಎಂದು ಸುಗ್ರೀವಾಜ್ಞೆಯಲ್ಲಿ ಉಲ್ಲೇಖವಾಗಿದೆ.

ಬೆಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಕರೊನಾ ಸೋಂಕಿನ ವಿರುದ್ಧ ಶ್ರಮಿಸುತ್ತಿರುವ ಆರೋಗ್ಯ ಕಾರ್ಯಕರ್ತರ ಮೇಲೆಯೇ ದಾಳಿ ನಡೆಸುವ ಕುಕೃತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಂಥದ್ದೊಂದು ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. ಅದಕ್ಕೀಗ ರಾಷ್ಟ್ರಪತಿಗಳ ಅಂಕಿತ ಬಿದ್ದಿದೆ.

ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಕೊರೋನಾ ಸಾಂಕ್ರಾಮಿಕ ರೋಗದಿಂದ ದೇಶವನ್ನು ರಕ್ಷಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಮೇಲೆ ಹಲ್ಲೆ ನಡೆಸುವುದು ಮತ್ತು ಕಿರುಕುಳ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಸಂಬಂಧ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿದ್ದು, ಇದರಲ್ಲಿ ಕರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸುವವರಿಗೆ 6 ತಿಂಗಳಿಂದ 7 ವರ್ಷ ಜೈಲು ಶಿಕ್ಷೆ ನೀಡಲು ಅವಕಾಶವಿದೆ ಎಂದು ನಿನ್ನೆ ಸಚಿವ ಸಂಪುಟ ಸಭೆ ಬಳಿಕ ಕೇಂದ್ರ ಸಚಿವ ಪ್ರಕಾಶ್ ಜಾವದೇಕರ್ ಹೇಳಿದ್ದರು. ಸಾಂಕ್ರಾಮಿಕ ರೋಗ ಕಾಯ್ದೆ 1897ಕ್ಕೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಇಂತಹ ಅಪರಾಧಗಳು ಈಗ ಜಾಮೀನು ರಹಿತ ಪ್ರಕರಣಗಳಾಗಿವೆ.

ಈ ಮುಂಚೆ ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದರೆ ಕೇವಲ 6 ತಿಂಗಳು ಜೈಲು ಶಿಕ್ಷೆ ವಿಧಿಸಲು ಅವಕಾಶವಿತ್ತು. ಈಗ ಈ ಶಿಕ್ಷೆಯನ್ನು ಕೇಂದ್ರ ಸರ್ಕಾರ ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣವನ್ನು ಏಳು ವರ್ಷಗಳವರೆಗೆ ವಿಸ್ತರಿಸಿದೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net