ಬೆಂಗಳೂರು: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ವಿಶ್ವ ಹಿಂದು ಪರಿಷತ್ ನೇತೃತ್ವದಲ್ಲಿ ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನ ನಡೆಯುತ್ತಿದೆ. ರಾಜ್ಯದಲ್ಲೂ ಪ್ರತಿ ಮನೆಮನೆಗೆ ತೆರಳಿ ಕನಿಷ್ಟ 10 ರೂ.ನಿಂದ ನಿಧಿ ಸಂಗ್ರಹ ಮಾಡಲಾಗುತ್ತಿದೆ. ಈಗಾಗಲೆ ಮಾಜಿ ಸಿಎಂ ಎಸ್.ಎಂ. ಕೃಷ್ಣ, ಸಂಸದೆ ಸುಮಲತಾ ಅಂಬರೀಷ್ ಸೇರಿ ಅನೇಕ ಗಣ್ಯರು ದೇಣಿಗೆ ನೀಡಿದ್ದಾರೆ. ಫೆಬ್ರವರಿ ಏಳನೇ ತಾರೀಖಿನವರೆಗೆ ನಡೆಯುವ ಅಭಿಯಾನದಲ್ಲಿ ಎಲ್ಲರೂ ಕೈಜೋಡಿಸುವಂತೆ ನಾಡಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಅನೇಕ ಗಣ್ಯರು ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿದ್ದಾರೆ.
ವಿವಿಧ ಕ್ಷೇತ್ರಗಳ ಗಣ್ಯರು ಈ ಕುರಿತು ಕರೆ ನೀಡಿರುವ ವಿಡಿಯೋವನ್ನು ಸಂವಾದ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ. "ಭಾರತೀಯ ಸಂಸ್ಕೃತಿಯಲ್ಲಿ ಶ್ರೀರಾಮಚಂದ್ರನನ್ನು ಮರ್ಯಾದಾ ಪುರುಷೋತ್ತಮ ಎಂದು ಬಿಂಬಿಸಲಾಗಿದೆ. ಭಾರತೀಯರ ಬದುಕಿನ ಮೇಲೆ ರಾಮಾಯಣದ ಪ್ರಭಾವ ಅಗಾಧವಾದದ್ದು." ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಕಲಾವಿದ ದಂಪತಿ ನಿರುಪಮಾ ರಾಜೇಂದ್ರ, ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಧಾತು ಸಂಸ್ಥೆಯ ಅನುಮಪಾ ಹೊಸಕೋಟೆ, ಗೃಹಸಚಿವ ಬಸವರಾಜ ಬೊಮ್ಮಾಯಿ, ಪ್ರೊ. ಪಿ.ಆರ್. ಮುಕುಂದ್, ಬಿಜೆಪಿ ನಾಯಕ ಸಿ.ಟಿ. ರವಿ, ವಿವೇಕ್ ರಾಮ್, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ, ಸಚಿವರಾದ ಸಿ.ಸಿ. ಪಾಟೀಲ್, ವಿ. ಸೋಮಣ್ಣ ಮಾತನಾಡಿದ್ದಾರೆ. ಈ ಐತಿಹಾಸಿಕ ಅಭಿಯಾನದಲ್ಲಿ ಭಾಗವಹಿಸಿ ಎಂದು ಎಲ್ಲರೂ ಕರೆ ನೀಡಿದ್ದಾರೆ.