

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೊಣೆಗಾರಿಕೆ ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಯಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಅದರ ವಿಶ್ವಸ್ಥರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಟ್ರಸ್ಟ್ನ ಮೊದಲ ಸಭೆ ಬುಧವಾರ ನಡೆದಿತ್ತು. ಮಹಾಂತ ನೃತ್ಯ ಗೋಪಾಲದಾಸ್ ಟ್ರಸ್ಟ್ನ ಅಧ್ಯಕ್ಷರಾಗಿದ್ದು, ಜನರಲ್ ಸೆಕ್ರೆಟರಿಯಾಗಿ ವಿಶ್ವಹಿಂದು ಪರಿಷದ್ನ ಚಂಪತ್ ರಾಯ್, ಖಜಾಂಚಿಯಾಗಿ ಸ್ವಾಮಿ ಗೋವಿಂದ್ ದೇವ್ ಗಿರಿ ಆಯ್ಕೆಯಾಗಿದ್ದಾರೆ.ಟ್ರಸ್ಟ್ನ ಮೊದಲ ಸಭೆಯ ನಂತರ ಎಲ್ಲ ವಿಶ್ವಸ್ಥರೂ ಪ್ರಧಾನಿಯವರನ್ನು ಅವರ ದೆಹಲಿ ನಿವಾಸದಲ್ಲೇ ಭೇಟಿಯಾಗಿದ್ದಾರೆ.ನಂತರ ಸುದ್ದಿಗಾರರ ಜತೆ ಮಾತನಾಡಿದ ಗೋಪಾಲ ದಾಸ್, ಪ್ರಧಾನಿಯವರನ್ನು ಅಯೋಧ್ಯೆಗೆ ಭೇಟಿ ನೀಡುವಂತೆ ಆಹ್ವಾನಿಸದ್ದೇವೆ ಎಂದು ತಿಳಿಸಿದ್ದಾರೆ.
ರಾಮಜನ್ಮಭೂಮಿ ಸಂಬಂಧಿಸಿ ಸುಪ್ರೀಂ ಕೋರ್ಟ್ ನವೆಂಬರ್ 9ರಂದು ನೀಡಿದ ಐತಿಹಾಸಿಕ ತೀರ್ಪಿನ ನಂತರದಲ್ಲಿ ನರೇಂದ್ರ ಮೋದಿ ಸರ್ಕಾರ 15 ವಿಶ್ವಸ್ಥರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚಿಸಿದೆ. ಈ ಟ್ರಸ್ಟ್ ರಚನೆ ವಿಚಾರವನ್ನು ಪ್ರಧಾನಿಯವರು ಲೋಕಸಭೆಯಲ್ಲಿ ಘೋಷಿಸಿದ್ದರು. (ಏಜೆನ್ಸೀಸ್)