

--
ದೇಶದ ಸಂಸ್ಕೃತಿಯ ಪ್ರತೀಕವಾದ ಶ್ರೀರಾಮಚಂದ್ರನ ಜನ್ಮಸ್ಥಳದಲ್ಲೆ ಮಂದಿರವಾಗಬೇಕೆಂದು ನಡೆದ ಹೋರಾಟದಲ್ಲಿ ಕರ್ನಾಟಕ ಮುಂಚೂಣಿಯಲ್ಲಿತ್ತು. ರಾಷ್ಟ್ರೀಯ ಚಿಂತನೆಯ ಅಲೆ ಅದಾಗಲೇ ದಶಕಗಳಿಂದ ಬೇರೂರಿದ್ದ ಕರುನಾಡಿನಿಂದ ಎರಡೂ ಕರಸೇವೆಗೆ ಸಾವಿರಾರು ರಾಮಭಕ್ತರು ಹೋಗಿದ್ದರ ಜತೆಗೆ ಕರ್ನಾಟಕದಲ್ಲಿದ್ದುಕೊಂಡೇ ಭೂಗತವಾಗಿ ಬೆಂಬಲಕ್ಕೆ ನಿಂತವರ ಸಂಖ್ಯೆ ಸಹಸ್ರಾರು.
ನೂರಾರು ವರ್ಷದಿಂದ ನಡೆದುಕೊಂಡು ಬಂದಿದ್ದ ಅಯೋಧ್ಯೆ ಹೋರಾಟ ನಿರ್ಣಾಯಕ ಘಟ್ಟಕ್ಕೆ ಮುಟ್ಟಲಾರಂಭಿಸಿದ್ದು 1988-89ರ ಸಂದರ್ಭದಲ್ಲಿ ದೇಶಾದ್ಯಂತ ನಡೆದ ರಾಮಶಿಲಾಪೂಜೆಯ ಮೂಲಕ. ಕರ್ನಾಟಕದಲ್ಲಿ 10,500 ಗ್ರಾಮಗಳಲ್ಲಿ ರಾಮಮಂದಿರಕ್ಕಾಗಿ ಇಟ್ಟಿಗೆಗಳನ್ನು ಪೂಜೆ ಮಾಡಲಾಯಿತು. ಅವನ್ನು 8 ರಥಗಳಲ್ಲಿ ಇರಿಸಿಕೊಂಡು ಕರ್ನಾಟಕದ ಅಷ್ಟದಿಕ್ಕುಗಳಲ್ಲೂ ಹಳ್ಳಿಹಳ್ಳಿಗೆ ತೆರಳಿ ಜನರಿಂದ ಪೂಜೆಗೊಳಪಟ್ಟಿತು. ಬೇಲಿಮಠ, ಪೇಜಾವರ ಮಠ ಸೇರಿ ಕರ್ನಾಟಕದ ನೂರಾರು ಮಠ ಮಾನ್ಯಗಳು ಮುನ್ನೆಲೆಯಲ್ಲಿ ನಿಂತು ರಥಯಾತ್ರೆಗಳನ್ನು ಸಫಲಗೊಳಿಸಿದವು. 1989ರಲ್ಲಿ ಎಲ್ಲ ಎಂಟು ರಥಗಳೂ ಒಂದಾಗಿದ್ದು ರಾಜ್ಯದ ಭೂಪಟದ ಕಿರೀಟಪ್ರಾಯವಾಗಿರುವ ಬೀದರ್ನಲ್ಲಿ. ವಿಶ್ವ ಹಿಂದು ಪರಿಷತ್ ನಾಯಕರಾದ ಅಶೋಕ್ ಸಿಂಘಾಲ್ ಉಪಸ್ಥಿತಿಯಲ್ಲಿ ಬೃಹತ್ ರ್ಯಾಲಿಯೊಂದು ಆಯೋಜನೆಯಾಯಿತು. ವಿಹಿಂಪದ ಅಖಿಲ ಭಾರತ ಸಹ ಪ್ರಧಾನ ಕಾರ್ಯದರ್ಶಿಯಾಗಿದ್ದ ಸದಾನಂದ ಕಾಕಡೆ, ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಾಬೂರಾವ್ ದೇಸಾಯಿ, ಕರ್ನಾಟಕದ ಪ್ರಮುಖರಾಗಿದ್ದ ಏರ್ಯ ಲಕ್ಷೀನಾರಾಯಣ ಆಳ್ವರ ಸಂಘಟನಾ ಕೌಶಲಗಳು ಈ ಸಮಯದಲ್ಲಿ ವ್ಯಕ್ತವಾದವು. ಅಯೋಧ್ಯೆಯೆಡೆಗೆ ತೆರಳಿದ ರಥಗಳನ್ನು ಬೀದರ್ನಲ್ಲಿ ಬೀಳ್ಕೊಡಲಾಯಿತು.
ಕರ್ನಾಟಕದ ಕೊಡುಗೆ * 1960ರಿಂದಲೂ ರಾಜ್ಯದಲ್ಲಿ ಹೋರಾಟ * ಪೇಜಾವರ ಶ್ರೀಗಳು, ವೀರೇಂದ್ರ ಹೆಗ್ಗಡೆ, ಶ್ರೀಶ್ರೀ ರವಿಶಂಕರ್ ಗುರೂಜಿ ಸೇರಿ ಅನೇಕ ಸಂತರ ಕೊಡುಗೆ * ಕಾರ್ಯಕರ್ತರ ಪಡೆ ಕಟ್ಟಿದ್ದು ಜಯನಗರದ ವೈ.ಕೆ.ರಾಘವೇಂದ್ರರಾವ್ * ಏರ್ಯ ಲಕ್ಷ್ಮೀನಾರಾಯಣ ಆಳ್ವ, ಕಲ್ಲಡ್ಕ ಪ್ರಭಾಕರ ಭಟ್, ವಿ.ನಾಗರಾಜ್ ಇತರರ ಕೊಡುಗೆಯೂ ಅಪಾರ * 1990ರಲ್ಲಿ ಅಯೋಧ್ಯೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಯಡಿಯೂರಪ್ಪ * ರಾಜ್ಯದಲ್ಲಿ ಸಂಗ್ರಹವಾಗಿದ್ದು 51 ಲಕ್ಷ ರೂ., 8 ಲೋಡ್ ಶಿಲೆಗಳು * ಬೀದರ್ ಜಿಲ್ಲೆಯ ಹುಮ್ನಾಬಾದ್ಗೆ ಬಂದಿತ್ತು ಅಡ್ವಾಣಿ ರಥಯಾತ್ರೆ
1990ರ ಅ.30ರಂದು ನಡೆದ ಮೊದಲ ಕರಸೇವೆಗೆ ಕರ್ನಾಟಕದಿಂದ 3 ಸಾವಿರ ಜನರು ತಂಡಗಳಲ್ಲಿ ಹೊರಟರು. ಕಲ್ಲಡ್ಕ ಪ್ರಭಾಕರ ಭಟ್, ಬಿ.ಎನ್. ಮೂರ್ತಿ, ಅಯೋಧ್ಯಾ ಸೂರಿ, ಬಿ.ಎಸ್. ಯಡಿಯೂರಪ್ಪ ಸೇರಿ ಅನೇಕರ ನೇತೃತ್ವದಲ್ಲಿ ತಂಡಗಳು ಹೊರಟವು. ಆದರೆ ಬಹುತೇಕರ ತಂಡಗಳನ್ನು ಉತ್ತರ ಪ್ರದೇಶ ಗಡಿಯಲ್ಲಿ, ಚಿತ್ರಕೂಟದಲ್ಲಿ ಮತ್ತಿತರ ಕಡೆ ಬಂಧಿಸಿ ಕೆಲಕಾಲ ಜೈಲಿನಲ್ಲಿರಿಸಿ ಬಿಡುಗಡೆ ಮಾಡಲಾಯಿತು. ಬಿ.ಎನ್. ಮೂರ್ತಿಯವರ ತಂಡ ಕರಸೇವೆ ಸ್ಥಳದವರೆಗೆ ತಲುಪುವಲ್ಲಿ ಸಫಲವಾಯಿತು. ಮಡಿಕೇರಿಯ ಸೋಮೇಶ್ ಸ್ಥಳದಲ್ಲೇ, ಅಶೋಕ್ ಸಿಂಘಾಲ್ ಅವರಿಗೆ ಕಲ್ಲೇಟು ಬಿದ್ದಾಗ ಅವರ ಪಕ್ಕದಲ್ಲೆ ಇದ್ದರು. ಪೊಲೀಸರ ಗುಂಡೇಟಿಗೆ ಕೊಠಾರಿ ಬಂಧುಗಳು ಹುತಾತ್ಮರಾದರು.
ಜನಜಾಗೃತಿಯ ಪರ್ವ: 1991ರಲ್ಲಿ ರಾಜ್ಯದಲ್ಲಿ ಸಂಪೂರ್ಣ ಜನಜಾಗೃತಿ ಕಾರ್ಯಕ್ರಮಗಳು ನಡೆದವು. 1992ರಲ್ಲಿ ಎರಡನೇ ಬಾರಿಗೆ ಕರಸೇವೆಗೆ ಕರೆ ನೀಡುವ ವೇಳೆಗೆ ಉತ್ತರ ಪ್ರದೇಶದಲ್ಲಿ ಸರ್ಕಾರ ಬದಲಾಗಿತ್ತು. ರಾಮಭಕ್ತರ ಮೇಲೆ ಗುಂಡು ಹಾರಿಸುವುದಿಲ್ಲ ಎಂದು ಕಲ್ಯಾಣ ಸಿಂಗ್ ಸರ್ಕಾರ ಘೋಷಿಸಿದ್ದರಿಂದ ಯಾವುದೇ ಅಡೆತಡೆ ಇಲ್ಲದಂತೆ ಕರ್ನಾಟಕದಿಂದ 5 ಸಾವಿರ ಜನರು ಕರಸೇವೆಯಲ್ಲಿ ಭಾಗವಹಿಸಿದರು. ವಿಹಿಂಪ ನಾಯಕರ ಕರೆಯನ್ನೂ ಲೆಕ್ಕಿಸದೆ ಜನರೇ ಇಡೀ ಕಟ್ಟಡವನ್ನು ಧ್ವಂಸಗೊಳಿಸಿದರು.
ಅನುಭವಗಳು
| ಕೇಶವ ಹೆಗಡೆ, ವಿಹಿಂಪ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ
ಅಯೋಧ್ಯೆ ಮೃತ್ತಿಕೆ ಈಗಲೂ ಇದೆ
‘ಅ.24ಕ್ಕೆ 20 ಜನರ ತಂಡ ಕಾಶಿ ರೈಲ್ವೆ ನಿಲ್ದಾಣದಲ್ಲಿ ಇಳಿದ ಕೂಡಲೇ ಪೊಲೀಸರು ಬಂಧಿಸಿ ಲಾಡ್ಜ್ನಲ್ಲಿಟ್ಟರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಸಮೀಪದ ಶಾಲೆಯೊಂದರಲ್ಲಿ ವಾಸ್ತವ್ಯ ಮಾಡಿದೆವು. ಬೆಂಗಳೂರಿನ ಬಿ.ಎನ್. ಮೂರ್ತಿ, ಆಂಧ್ರದ ಟೈಗರ್ ನರೇಂದ್ರ ಮುಂತಾದವರೆಲ್ಲ ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಅಯೋಧ್ಯೆಯ ಕಡೆಗೆ ಕಾಲ್ನಡಿಗೆಯಲ್ಲಿ ಹೊರಟೆವು. ಅಯೋಧ್ಯೆ ಎಷ್ಟು ದೂರ ಇದೆ ಎಂದು ಅಲ್ಲಿನ ಜನರನ್ನು ಕೇಳಿದರೆ, ತೀನ್ ಕೋಸ್, ಚಾರ್ ಕೋಸ್ ಎನ್ನುತ್ತಿದ್ದರು. ಬಹುಶಃ ಕೆಲವೇ ಕಿಲೋಮೀಟರ್ ಇರಬೇಕು ಎಂದುಕೊಂಡು ನಡೆಯುತ್ತಲೇ ಹೋದೆವು, 4 ಹಗಲು, ಮೂರು ರಾತ್ರಿಯವರೆಗೆ. ಹಳ್ಳಿಹಳ್ಳಿಯಲ್ಲೂ ಜನರು ಆರತಿ ಬೆಳಗಿ, ತಿಲಕ ಇಟ್ಟು ಕಳಿಸಿದರು.
ಹನುಮಾನ್ ಗಡಿಯಲ್ಲಿ ಗಲಾಟೆ ನಡೆದು ಸಿಂಘಾಲ್ ಅವರಿಗೆ ಕಲ್ಲೇಟು ಬಿದ್ದು ರಕ್ತಸ್ರಾವವಾಗುತ್ತಿತ್ತು. ಕೈನಲ್ಲಿದ್ದ ಟವೆಲ್ ತೆಗೆದು ಅವರ ತಲೆಗೆ ಹಿಡಿದು, ಶ್ರೀರಾಮ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಒಂದು ದಿನ ಅಲ್ಲೇ ಇದ್ದು, ಸ್ಥಳೀಯ ಕಾರ್ಯಕರ್ತರ ಮನೆಗೆ ತೆರಳಿದೆವು. ಅಲ್ಲಿಯೇ ಒಂದು ದಿನ ಸಿಂಘಾಲ್ ಅವರಿಗೆ ಸಹಾಯಕನಾಗಿದ್ದೆ. ನ.5ರವೆಗೆ ಅಯೋಧ್ಯೆಯಲ್ಲೇ ಇದ್ದೆವು, ನಂತರ ಶ್ರೀರಾಮನ ದರ್ಶನ ಪಡೆದು ಅಲ್ಲಿನ ಮೃತಿಕೆ(ಮಣ್ಣು) ಕರವಸ್ತ್ರದಲ್ಲಿ ಕಟ್ಟಿಕೊಂಡು ತಂದೆ. ಈಗಲೂ ಹಾಗೆಯೇ ಇದೆ.
ಕನ್ನಡಿಗ ವಕೀಲರ ಕೊಡುಗೆ: ಭಗವಾನ್ ಶ್ರೀರಾಮನಿಗೆ ಸೀತಾನ್ವೇಷಣೆಯಲ್ಲಿ ಸಫಲತೆ ದೊರಕಿದ್ದು ಕರ್ನಾಟಕದಲ್ಲಿ ಹುಟ್ಟಿದ ಹನುಮಂತನ ಭೇಟಿ ನಂತರ. ಹಾಗೇಯೇ ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ಕರ್ನಾಟಕ ಮೂಲದ ಕಾನೂನು ತಜ್ಞರು ಶ್ರೀರಾಮನ ಪರ ಹೋರಾಟಕ್ಕೆ ನಿಂತ ಬಳಿಕ ಕೇಸಿನಲ್ಲಿ ಉಂಟಾಗಿದ್ದ ಗೋಜಲುಗಳಿಂದ ಹೊರಬರಲು ಸಾಧ್ಯವಾಯಿತು. ಇದನ್ನು ಪ್ರಕರಣದಲ್ಲಿ ಶ್ರೀರಾಮನ ಪ್ರತಿನಿಧಿಯಾಗಿದ್ದ ತ್ರಿಲೋಕಿನಾಥ್ ಪಾಂಡೆಯವರೇ ನೆನಪಿಸಿಕೊಂಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್, ನ್ಯಾ. ರಂಗ ವಿಠಲಾಚಾರ್, ಹಿರಿಯ ನ್ಯಾಯವಾದಿಗಳಾದ ಕೆ.ಎನ್.ಭಟ್, ಅಶೋಕ್ ಹಾರನಹಳ್ಳಿ ಅವರ ಕಾನೂನು ಸಲಹೆಗಳು ಇಲ್ಲದಿರುತ್ತಿದ್ದರೆ ನಾವು ಈ ಹಂತಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೋರಾಟದ ಮುಂಚೂಣಿಯಲ್ಲಿದ್ದ ಅನೇಕರು ಒಪ್ಪಿಕೊಳ್ಳುತ್ತಾರೆ. ನ್ಯಾ. ರಾಮಾ ಜೋಯಿಸ್, ಅಶೋಕ್ ಹಾರನಹಳ್ಳಿ ವಿನಂತಿ ಮೇರೆಗೆ ಅಲಹಾಬಾದ್ ಹೈಕೋರ್ಟ್ನಲ್ಲಿ ಶ್ರೀರಾಮನ ಪರ ಕಾನೂನು ಹೋರಾಟ ಮಾಡಲು ಕೆ.ಎನ್. ಭಟ್ ಮುಂದಾದರು. ಈ ಹೋರಾಟದ ಹಿನ್ನೆಲೆಯಲ್ಲಿ ಆಗಾಗ್ಗೆ ಎಲ್.ಕೆ. ಆಡ್ವಾಣಿ ಸೇರಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಮುಖಂಡರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸುತ್ತಿದ್ದರು.
ಉಡುಪಿಯಿಂದ ಹೊರಟ ಕರೆ:
ಸಾಧು-ಸಂತರ ಕೊಡುಗೆ: 1960ರಿಂದಲೂ ಈ ಹೋರಾಟಕ್ಕೆ ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀವಿಶ್ವೇಶ ತೀರ್ಥರು, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಸಲಹೆಗಾರರೇ ಆಗಿದ್ದರು. ಆದಿಚುಂಚನಗಿರಿ, ಸಿದ್ದಗಂಗಾ ಸೇರಿ ರಾಜ್ಯದ ಬಹುತೇಕ ಮಠಾಧೀಶರು ರಾಮಮಂದಿರದ ಪರ ಅಲ್ಲಲ್ಲಿ ದನಿ ಎತ್ತುತ್ತ ಸಂತ ಶಕ್ತಿಯನ್ನು ನೀಡಿದ್ದರು. ಕಾನೂನು ಬಿಗಿಯಾಗುವ ತನಕ ಸ್ವತಃ ಪೇಜಾವರ ಶ್ರೀಗಳೇ ನೇತೃತ್ವ ವಹಿಸಿದ್ದರು. ಬೆಂಗಳೂರಿನ ಶ್ರೀ ಶ್ರೀ ರವಿಶಂಕರ ಗುರೂಜಿ ಶಾಂತಿ ಮಾತುಕತೆಯ ಪ್ರಯತ್ನ ಮಾಡಿದರು.
ರಾಮಮಂದಿರ ಇದು ರಾಷ್ಟ್ರಮಂದಿರ
ರಾಮಭಕ್ತಿ ಎಂದರೆ ಅದು ರಾಷ್ಟ್ರಭಕ್ತಿ. ರಾಮಮಂದಿರ ಎಂದರೆ ಅದು ರಾಷ್ಟ್ರಮಂದಿರ. ವಿಶ್ವ ಭೂಪಟದಲ್ಲಿ ದೃಷ್ಟಿಗೋಚರವಾಗುವಂತೆ ತಲೆ ಎತ್ತಿ ನಿಲ್ಲುವ ಅದ್ಭುತ ನಿರ್ವಣ. 1992 ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಕರಸೇವೆಗಾಗಿ ಪುಟ್ಟ ಭಾರತವೇ ಸೇರಿತ್ತು, ವಿವಾದಿತ ಕಟ್ಟಡ ಧ್ವಂಸವಾಯಿತು. ನಮಗೆ ಅಲ್ಲಿ ದೇವಾಲಯದ ಅನೇಕ ಕುರುಹಗಳು ದೊರೆತಿದ್ದವು. ಈಗಿನ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ನಮ್ಮ ಜತೆಗೆ ಕರಸೇವಕರಾಗಿದ್ದರು. ದಕ್ಷಿಣ ಭಾರತದವರಿಗೆ ಉತ್ತರ ಭಾರತದ ಖಾದ್ಯ ಅಷ್ಟಾಗಿ ಒಗ್ಗುತ್ತಿರಲಿಲ್ಲ. ಹಾಗಾಗಿ ಯಡಿಯೂರಪ್ಪನವರು ಬೆಳ್ತಂಗಡಿಯ ಕಡಿರುದ್ಯಾವರದ ಅನಂತ ನಾಯಕ್ ಮಾಡಿದ ಅಡುಗೆಯ ಊಟಕ್ಕೆ ಸರದಿ ಸಾಲಿನಲ್ಲಿ ನಿಂತು 2 ರೂ. ಪಾವತಿಸಿ ಬಡಿಸಿಕೊಂಡಿದ್ದರು. ವಿವಾದಿತ ಕಟ್ಟಡ ಉರುಳಿದ ಬಳಿಕ ಅಯೋಧ್ಯೆಯಲ್ಲಿ ತಾತ್ಕಾಲಿಕ ಮಂದಿರ ಕಟ್ಟಲಾಗಿತ್ತು. ಅಯೋಧ್ಯೆಯ ಮುಸ್ಲಿಂರು ಕೂಡ ಅಲ್ಲೊಂದು ಮಂದಿರ ಇರಬೇಕೆಂದು ಬಯಸಿದ್ದರು. ಆದರೆ ಬೇರೆ ಬೇರೆ ಕಾರಣಗಳಿಗೆ ಹೊರಗಿನವರಿಗೆ ಅಲ್ಲಿ ಮಂದಿರವಾಗುವುದು ಬೇಕಿರಲಿಲ್ಲ!.
ನನ್ನ ಪ್ರಕಾರ ಸುಪ್ರೀಂ ಕೋರ್ಟ್ ತೀರ್ಪಿನ ಆಶಯ ಅಯೋಧ್ಯೆಯಲ್ಲಿ ಕೇವಲ ರಾಮಮಂದಿರ ಅಲ್ಲ; ದೇಶದ ಜನರ ಭಾವನೆಯ ಪ್ರತೀಕದ ನಿರ್ಮಾಣ ಸಾಕಾರವಾಗಬೇಕು. ನಮ್ಮದು ಅನೇಕತೆಯಲ್ಲಿ ಏಕತೆ ಪ್ರತಿಪಾದಿಸುವ ಸಂಸ್ಕೃತಿ. ಇತರರ ಆರಾಧನಾ ಪದ್ಧತಿಯನ್ನು ಗೌರವಿಸಿಕೊಂಡೇ ಬಂದಿದ್ದೇವೆ. ಆ ಹಿನ್ನೆಲೆಯಲ್ಲಿ ರಾಮಮಂದಿರ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯ.