

ಹೈದರಾಬಾದ್: 2018 ಹಾಗೂ 2022ರಲ್ಲಿ ಬಿಡುಗಡೆಯಾಗಿ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸಿದ್ದ ಕೆಜಿಎಫ್ ಭಾಗ 1 ಮತ್ತು 2 ಬಾಲಿವುಡ್ನ ಘಟಾನುಘಟಿ ನಾಯಕರ ಸಿನಿಮಾಗಳನ್ನೇ ಮಕಾಡೆ ಮಲಗಿಸಿತ್ತು ಎಂದರೆ ತಪ್ಪಾಗಲಾರದು. ಚಿತ್ರ ಬಿಡುಗಡೆಯಾದಾಗ ಮಿಶ್ರ ಪ್ರತಿಕ್ರಿಯೆ ಪಡೆಯಿತಾದರು, ಬಾಕ್ಸ್ಆಫೀಸ್ನಲ್ಲಿ ಕಲೆಕ್ಷನ್ನಲ್ಲಿ ಮಾತ್ರ ಹಿಂದೆ ಬೀಳಲಿಲ್ಲ. ಇದೀಗ ಕೆಜಿಎಫ್ ಚಿತ್ರದ ಕುರಿತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ (Ram Gopal Varma), ಕೆಜಿಎಫ್-2 ಬಿಡುಗಡೆಯಾದಾಗ ನಿರ್ದೇಶಕರೊಬ್ಬರು ನನಗೆ ಕರೆ ಮಾಡಿ ಚಿತ್ರವನ್ನು ನೋಡಿದ್ರಾ ಎಂದು ಕೇಳಿದರು. ನಾನು ಇಲ್ಲ ಎಂದು ಹೇಳಿದಾಗ ಅವರು ನೋಡಲು ಹೋಗಬೇಡಿ ಎಂದು ಹೇಳಿದರು. ಯಾಕೆ ಎಂದು ಪ್ರಶ್ನಿಸಿದಾಗ ಆತ, ನನ್ನ ಕೈಯಲ್ಲಿ 15 ನಿಮಿಷ ಸಹ ನೋಡಲು ಆಗಲಿಲ್ಲ. 15 ನಿಮಿಷ ನೋಡಿ ನಾನು ಬ್ರೇಕ್ ತೆಗೆದುಕೊಂಡೆ ಆ ನಂತರ ಹೋಗಿ ಉಸಿರಾಟದ ವ್ಯಾಯಾಮ, ಪ್ರಾಣಾಯಾಮ ಮಾಡಿ ಬಂದು ಮತ್ತೆ ನೋಡಲು ಪ್ರಯತ್ನಿಸಿದೆ ಆಗಲೂ ಸಹ 15 ನಿಮಿಷ ಸಹ ನನ್ನಿಂದ ನೋಡಲು ಆಗಲಿಲ್ಲ.
ಆ ನಂತರ ಮತ್ತೆ ಹೋಗಿ ಸ್ನಾನ ಮಾಡಿ ಬಂದೆ ಬಲವಂತದಿಂದ ನೋಡಿದರೂ ಇಂಟರ್ವೆಲ್ ವರೆಗೂ ಮಾತ್ರವೇ ನೋಡಲು ಸಾಧ್ಯ ಆಗಿದ್ದು. ಆದರೆ ಇಂಥಹಾ ಸಿನಿಮಾ ಅಷ್ಟು ದೊಡ್ಡ ಹಿಟ್ ಹೇಗಾಯ್ತು ಎಂದು ಅವರು ನನ್ನನ್ನು ಪ್ರಶ್ನೆ ಮಾಡಿದರು. ಅದಾದ ಬಳಿಕ ನಾನು ನನ್ನ ತಂಡದವರ ಜೊತೆ ಮಾತನಾಡುವಾಗ ಅವರ ಬಳಿ ಕೆಜಿಎಫ್-2 ಯಶಸ್ಸನ್ನು ಪ್ರಸ್ತಾಪಿಸಿದೆ. ಅಷ್ಟು ಇಲ್ಲಾಜಿಕಲ್ ಆಗಿರುವ ಸಿನಿಮಾ ಇಷ್ಟು ದೊಡ್ಡ ಹಿಟ್ ಆಗಿದ್ದು ಹೇಗೆ ಎಂದು ನಾನು ಪ್ರಶ್ನಿಸಿದೆ. ಆದರೆ ಆ ಇಲ್ಲಾಜಿಕಲ್ ಎನ್ನುವುದೇ ಕೆಜಿಎಫ್ ಪಾಲಿಗೆ ವರವಾಗಿದೆ. ಹಳೇ ಹಾಲಿವುಡ್ ಸಿನಿಮಾಗಳ ಕತೆಯೂ ಇದೆ. ಅವು ಸಹ ಇಲ್ಲಾಜಿಕಲ್ ಆದರೆ ಅವುಗಳ ಯಶಸ್ಸು ನಿಜವೇ ಆಗಿದೆ ಎಂದು ಮಾತನಾಡುವ ಭರದಲ್ಲಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಇದಲ್ಲದೆ ಸಂದರ್ಶನದಲ್ಲಿ ದೃಢನಿಶ್ಚಯವಿಲ್ಲದೆ ಕೆಲಸ ಮಾಡುವುದರಿಂದಾಗುವ ಅಪಾಯಗಳ ಬಗ್ಗೆ ರಾಮ್ ಗೋಪಾಲ್ ವರ್ಮಾ ಮತ್ತಷ್ಟು ಮಾತನಾಡಿದ್ದಾರೆ. ಇದು ಒಂದು ಯೋಜನೆಯನ್ನು ಸ್ಥಗಿತಗೊಳಿಸುವುದಕ್ಕಿಂತ ಕೆಟ್ಟದಾಗಿರಬಹುದು. ಇದನ್ನು ನಾನು ಸ್ವತಃ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ. ಇದಲ್ಲದೆ ನಟ ರಜಿನಿಕಾಂತ್, ಅಮಿತಾಭ್ ಬಚ್ಚನ್ ಅವರುಗಳ ಬಗ್ಗೆ ರಾಮ್ ಗೋಪಾಲ್ ವರ್ಮಾ (Ram Gopal Varma) ಮಾತನಾಡಿದ್ದು, ಸದ್ಯ ಈ ಪೋಸ್ಟ್ ವೈರಲ್ ಆಗಿದೆ.