

ಅಯೋಧ್ಯೆ: ಅಯೋಧ್ಯೆಯ ರಾಮಮಂದಿರದ ಮೊದಲ ಮಹಡಿಯಲ್ಲಿ ನಿರ್ವಣವಾಗಿರುವ ರಾಮ ದರ್ಬಾರ್ ಶನಿವಾರದಿಂದ ಭಕ್ತರ ದರ್ಶನಕ್ಕೆ ತೆರೆದಿದೆ.
ರಾಮ ದರ್ಬಾರಿನಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮ ಮತ್ತು ಇತರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಜೂನ್ 5ರಂದು ನಡೆದಿತ್ತು. ಶುಕ್ರವಾರ ರಾತ್ರಿ ರಾಮ ದರ್ಬಾರ್ ಗೆ ಭಕ್ತರಿಗೆ ಪ್ರವೇಶ ಕಲ್ಪಿಸುವ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಶನಿವಾರ ಕೆಲವೇ ಭಕ್ತರಿಗೆ ಮಾತ್ರ ಪಾಸ್ ಒದಗಿಸಲಾಗಿದೆ. ಭಾನುವಾರದಿಂದ ರಾಮ ದರ್ಬಾರ್ಗೆ ಭೇಟಿ ನೀಡಲು ಭಕ್ತಾದಿಗಳಿಗೆ ಬೆಳಗ್ಗೆ 7-9, 9ರಿಂದ 11, ಮಧ್ಯಾಹ್ನ 1 ರಿಂದ 3, 3 ರಿಂದ 5 ಗಂಟೆ, ಸಂಜೆ 5 ರಿಂದ 7 ಮತ್ತು ರಾತ್ರಿ 7 ರಿಂದ 9 ಗಂಟೆಯ ಸ್ಲಾಟ್ಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಸ್ಲಾಟ್ಗೆ 300 ಪಾಸ್ಗಳನ್ನು ಮಾತ್ರ ವಿತರಿಸಲಾಗುತ್ತದೆ. ಜಿಲ್ಲಾಡಳಿತ ಮತ್ತು ದೇವಾಲಯ ಟ್ರಸ್ಟ್ ತಲಾ 150 ಪಾಸ್ಗಳನ್ನು ವಿತರಿಸಲಿವೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಸದಸ್ಯ ಅನಿಲ್ ಮಿಶ್ರಾ ತಿಳಿಸಿದ್ದಾರೆ.
ಶಾಂತಿ ಉಲ್ಲಂಘನೆ ಮತ್ತು ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅಯೋಧ್ಯೆಯ ಖಾನ್ಪುರ ಮಸೋದಾ ಪ್ರದೇಶದ ದಾದಾ ಮಿಯಾ ಮಜಾರ್ನಲ್ಲಿ ನಡೆಯುತ್ತಿದ್ದ ದಾದಾ ಮಿಯಾ ಉರುಸ್ನ ಅನುಮತಿಯನ್ನು ಅಯೋಧ್ಯೆ ಸ್ಥಳೀಯಾಡಳಿತ ರದ್ದುಗೊಳಿಸಿದೆ. ಜೂನ್ 14 ಮತ್ತು 15ರಂದು ಉರುಸ್ ನಡೆಯಬೇಕಿತ್ತು. ಆದರೆ ಈ ಕುರಿತು ವಿಶ್ವ ಹಿಂದು ಪರಿಷತ್ ನೀಡಿದ್ದ ದೂರನ್ನು ಪರಿಶೀಲಿಸಿದ ಬಳಿಕ, ಉರುಸ್ಗೆ ಕೊಟ್ಟಿದ್ದ ಅನುಮತಿ ಹಿಂಪಡೆಯಲಾಗಿದೆ.
ಅಯೋಧ್ಯೆ ಹಾಗೂ ಫೈಜಾಬಾದ್ನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಒಟ್ಟು 56 ಕೋಟಿ ರೂ. ವೆಚ್ಚದಲ್ಲಿ ಸುಮಾರು ಒಂದು ಸಾವಿರ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು ಎಂದು ಅಯೋಧ್ಯೆ ಮುನಿಸಿಪಲ್ ಕಾರ್ಪೆರೇಷನ್ ತಿಳಿಸಿದೆ. ಈ ಪ್ರಸ್ತಾವನೆಗೆ ಉತ್ತರಪ್ರದೇಶದ ಯೋಜನಾ ಇಲಾಖೆ ಅನುಮತಿ ನೀಡಿದ್ದು, ಅನುಷ್ಠಾನ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಸೂಕ್ಷ್ಮ ಹಾಗೂ ಹೆಚ್ಚು ಜನರ ಓಡಾಟ ಇರುವ ಸ್ಥಳಗಳಲ್ಲಿ ಈ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಅಲ್ಲದೆ, ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮುನಿಸಿಪಲ್ ಕಾರ್ಪೆರೇಷನ್ನ ಜಂಟಿ ಕಚೇರಿಯಲ್ಲಿ ಸುಸಜ್ಜಿತ ಇಂಟೆಗ್ರೇಟೆಡ್ ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ (ಐಸಿಸಿಸಿ) ಕೂಡ ಸ್ಥಾಪಿಸಲಾಗುವುದು ಎಂದು ಅದು ತಿಳಿಸಿದೆ.