ದೇಶಾದ್ಯಂತ ಎಲ್ಲೆಲ್ಲೂ ರಾಮಜಪ

Ayodhya
Published on

ಕೊಟ್ಟಾಯಂ/ರಾಂಚಿ: ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿನ ಶ್ರೀಬಾಲರಾಮ ಪ್ರಾಣಪ್ರತಿಷ್ಠಾಪನೆಯ ಸಂಭ್ರಮ ದೇಶಾದ್ಯಂತ ಮನೆಮಾಡಿತ್ತು. ದೇಶದ ಹಳ್ಳಿಹಳ್ಳಿಗಳಲ್ಲೂ ರಾಮನಸ್ಮರಣೆ, ರಾಮಜಪ, ಜೈಶ್ರೀರಾಮ್ ಉದ್ಘೋಷಗಳು ಅನುರಣಿಸಿವೆ. ಬೆಳಗ್ಗೆಯಿಂದಲೇ ಸಾವಿರಾರು ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರಗಳು ನಡೆದಿವೆ. ಸಂಜೆ ಬಳಿಕ ಹಣತೆಗಳು ಬೆಳಕು ಚೆಲ್ಲಿದ್ದು, ದೀಪಾವಳಿಯಂಥ ವಾತಾವರಣ ಗೋಚರಿಸಿತು. ವಜುತಕಾಡ್ ರಮಾದೇವಿ ದೇವಸ್ಥಾನದಲ್ಲಿ ಕೇರಳ ರಾಜ್ಯಪಾಲ ಅರಿಫ್ ಮೊಹಮ್ಮದ್ ಖಾನ್ ಪ್ರಾರ್ಥನೆ ಸಲ್ಲಿಸಿದರು. ದಶರಥನ ನಾಲ್ಕು ಪುತ್ರರು ದೇವರಾಗಿರುವ ಕೊಟ್ಟಾಯಂ ರಾಮಪುರಂ ಶ್ರೀರಾಮಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ದೇಶದ ರಾಮನ ದೇವಸ್ಥಾನಗಳಲ್ಲಿ ಮಾತ್ರವಲ್ಲದೆ, ಹನುಮನ ದೇವಸ್ಥಾನಗಳಲ್ಲೂ ವಿಶೇಷ ಆಚರಣೆಗಳು ನಡೆದವು.

ಬೃಹತ್ ರಂಗೋಲಿ: ಜಾರ್ಖಂಡ್​ನಲ್ಲಿ ರಾಜ್ಯಾ ದ್ಯಂತದ 51 ಸಾವಿರಕ್ಕೂ ಅಧಿಕ ದೇವಸ್ಥಾನಗಳಲ್ಲಿ ರಾಮನ ಸಲುವಾಗಿ ಪೂಜೆ- ಪುರಸ್ಕಾರಗಳು ನಡೆದವು. ಜಮಷೆಡ್​ಪುರದ ಕೇಬಲ್ ಟೌನ್​ನ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನ ಆವರಣದಲ್ಲಿ 18,500 ಅಡಿ ಗಾತ್ರದ ಶ್ರೀರಾಮನ ರಂಗೋಲಿ ಹಾಕಲಾಗಿತ್ತು. ಅರುಣಾಚಲ ಪ್ರದೇಶದ ಇಟಾನಗರದಲ್ಲಿ ಮಾರುಕಟ್ಟೆಗಳು ಸ್ವಯಂಪ್ರೇರಿತವಾಗಿ ಮುಚ್ಚಿದ್ದು, ಖಾಸಗಿ ಶಾಲೆಗಳಿಗೂ ರಜೆ ನೀಡಲಾಗಿತ್ತು. ಮಧ್ಯಪ್ರದೇಶದ ನಿವಾರಿ ಜಿಲ್ಲೆಯಲ್ಲಿ ಕಿರು ಅಯೋಧ್ಯೆ ಎಂದೇ ಕರೆಯಲಾಗುವ ಒರಿಚ್ಚ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಪ್ರಾರ್ಥನೆ ಸಲ್ಲಿಸಿದರು. ಹಗಲಲ್ಲಿ ಇಲ್ಲಿ ತಂಗುವ ರಾಮ ರಾತ್ರಿಯಲ್ಲಿ ಉತ್ತರಪ್ರದೇಶದ ಅಯೋಧ್ಯೆಗೆ ಹೋಗುತ್ತಾನೆ ಎಂಬ ಪ್ರತೀತಿ ಇದೆ.

ಭಾರತ-ಪಾಕ್ ಗಡಿಯಲ್ಲಿ ರಾಮಾಯಣ ಪಠಣ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 70 ವಿಧಾನಸಭಾ ಕ್ಷೇತ್ರಗಳಲ್ಲಿ ಆಪ್ ಶೋಭಾಯಾತ್ರೆ, ಭಂಡಾರ ಆಯೋಜಿಸಿದ್ದು, ಸುಂದರಕಾಂಡ ಪಠಣ ನಡೆಸಲಾಯಿತು. ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿರುವ ತನೊಟ್ ಮಠ ದೇವಸ್ಥಾನದಲ್ಲಿ ಬಿಎಸ್​ಎಫ್ ಯೋಧರು ರಾಮಾಯಣ ಪಠಿಸಿದರು. ಶಿಮ್ಲಾದ ರಾಮ ದೇವಸ್ಥಾನದಲ್ಲಿ ಅಖಂಡ ರಾಮಾಯಣ ಪಠಣ ನಡೆಯಿತು. ಹರಿಯಾಣ, ಪಂಜಾಬ್​ನಲ್ಲೂ ಸಾಕಷ್ಟು ಸಂಭ್ರಮ ಕಂಡುಬಂತು.

ಜಮ್ಮು-ಕಾಶ್ಮೀರದಲ್ಲಿ ಪೂಜೆ: ಶ್ರೀನಗರದ ಶಂಕರಾಚಾರ್ಯ ದೇವಸ್ಥಾನ, ಅಮಿರಕಡಲ್ ಪ್ರದೇಶದ ಝೇಲಂ ನದಿ ತೀರದ ಹನುಮಾನ್ ದೇವಾಲಯ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಹಲವೆಡೆಯೂ ರಾಮಸಂಭ್ರಮ ಕಂಡುಬಂತು. ಅನಂತನಾಗ್ ಜಿಲ್ಲೆಯ ಮತ್ತನ್​ನಲ್ಲಿನ ಸೂರ್ಯ ದೇವಸ್ಥಾನದಲ್ಲಿ ಹವನ ಆಯೋಜಿಸಲಾಗಿತ್ತು. ಅಲ್ಲದೆ ಕಾಶ್ಮೀರದಲ್ಲಿ ಸಹಜ ಸ್ಥಿತಿ ಸಂಪೂರ್ಣ ಮರುಕಳಿಸಲಿ ಎಂದು ಭಕ್ತರು ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net