

ಶಿವಮೊಗ್ಗ: ಸಹೋದರ ಬಾಂಧವ್ಯದ ಸಂದೇಶ ಸಾರುವ ರಕ್ಷಾ ಬಂಧನವನ್ನು ಶನಿವಾರ ಜಿಲ್ಲೆಯ ವಿವಿಧೆಡೆ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ತಮ್ಮ ಸಹಪಾಠಿ ಮಿತ್ರರಿಗೆ ರಾಖಿ ಕಟ್ಟುವ ಮೂಲಕ ಸಹೋದರತ್ವದ ಬೆಸುಗೆಗೆ ನಾಂದಿ ಹಾಡಿದರು. ಮನೆಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.
ನಮ್ಮ ಸಂಸ್ಕೃತಿಯಲ್ಲಿ ರಕ್ಷಾ ಬಂಧನಕ್ಕೆ ವಿಶೇಷ ಸ್ಥಾನಮಾನ ಇರುವುದರಿಂದ ಕೆಲ ಶಾಲಾ ಕಾಲೇಜುಗಳಲ್ಲಿ ಸಾಮೂಹಿಕವಾಗಿ ರಕ್ಷಾ ಬಂಧನ ಕಾರ್ಯಕ್ರಮವನ್ನೇ ಆಯೋಜಿಸಲಾಗಿತ್ತು. ಶನಿವಾರವೂ ಕೆಲ ಅಂಗಡಿಗಳ ಮುಂದೆ ರಾಖಿ ಖರೀದಿಯ ಭರಾಟೆ ಜೋರಾಗಿಯೇ ಇತ್ತು. ಎರಡು ರೂ.ನಿಂದ 60 ರೂ.ವರೆಗಿನ ವಿವಿಧ ಬಗೆಯ ರಾಖಿಗಳನ್ನು ನಗರದಲ್ಲಿ ಮಾರಾಟ ಮಾಡಲಾಯಿತು.
ಬಿಜೆಪಿ ಮಹಿಳಾ ಮೋರ್ಚಾದಿಂದ ಪಕ್ಷದ ಕಚೇರಿಯಲ್ಲಿ ರಕ್ಷಾ ಬಂಧನ ಆಚರಿಸಲಾಯಿತು. ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಕಾರ್ಯಕರ್ತೆಯರು ಪಕ್ಷದ ಮುಖಂಡರಿಗೆ ರಾಖಿ ಕಟ್ಟಿ ಸಂಭ್ರಮಿಸಿದರು. ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಡಿ.ಮೋಹನ್ ರೆಡ್ಡಿ ಮುಂತಾದವು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎನ್.ಚನ್ನಬಸಪ್ಪ, ರಕ್ಷಾಬಂಧನ ಸ್ನೇಹ, ಪ್ರೀತಿ ಭ್ರಾತೃತ್ವದ, ಶಕ್ತಿಯ ಸಂಕೇತವಾಗಿದೆ. ರಕ್ಷಾ ಬಂಧನದಲ್ಲಿ ಸಂಘಟನೆಯ ಶಕ್ತಿಯಿದೆ. ನಮ್ಮ ಸಂಸ್ಕೃತಿ, ಭಾವೈಕ್ಯ ಅಡಗಿದೆ. ಪ್ರಪಂಚವೇ ಒಂದು ಕುಟುಂಬ ಎನ್ನುವ ಸಂಸ್ಕೃತಿಯ ರಾಷ್ಟ್ರೀಯ ಹರಿಕಾರರು ನಾವು. ದೇಶವನ್ನು ಸಂಕ್ಷರಣೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ರಕ್ಷಾಬಂಧನ ಬರೀ ಅಣ್ಣತಂಗಿಯ ಸಂಬಂಧ ಮಾತ್ರವಲ್ಲ, ಅದರಲ್ಲಿ ಉದಾತ್ತ ಧ್ಯೇಯೋದ್ದೇಶಗಳಿವೆ ಎಂದರು.
ಪ್ರತಿ ಮನೆಮನೆಗಳಲ್ಲಿ ರಕ್ಷಾಬಂಧನದ ಕಾರ್ಯಕ್ರಮ ನಡೆಯಬೇಕಿದೆ. ಹಿರಿಯರು ಸುಮ್ಮನೆ ಇದನ್ನು ಆಚರಣೆಗೆ ತಂದಿಲ್ಲ. ಮಾಡಿಲ್ಲ. ಅದರ ಹಿಂದೆ ಒಳ್ಳೆಯ ಉದ್ದೇಶವಿದೆ ಎಂದು ಹೇಳಿದರು.