ಕೈ-ಕಮಲ ಪೈಪೋಟಿ, ಜೆಡಿಎಸ್​ಗೆ ಭೀತಿ: ರಾಜ್ಯಸಭೆ ಚುನಾವಣೆ ಅಖಾಡದಲ್ಲಿ ಮತ ಲೆಕ್ಕಾಚಾರ..

Vidhana Soudha
Published on

ಬೆಂಗಳೂರು: ಕಾಂಗ್ರೆಸ್​ನಲ್ಲಿ ಎರಡನೇ ಅಭ್ಯರ್ಥಿ, ಬಿಜೆಪಿಯಲ್ಲಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಜೆಡಿಎಸ್ ಗೊಂದಲಕ್ಕೆ ಒಳಗಾಗಿದೆ. ರಾಜ್ಯಸಭೆ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಕಣಕ್ಕಿಳಿಸಿ ಈಗ ಕೈ ಕೈ ಹಿಸುಕಿಕೊಳ್ಳುತ್ತಿದೆ. ಅಲ್ಲದೆ, ರಾಷ್ಟ್ರೀಯ ಪಕ್ಷಗಳ ನಡುವಿನ ಪೈಪೋಟಿ ಜೆಡಿಎಸ್​ಗೆ ಸೋಲಿನ ಭೀತಿ ಉಂಟು ಮಾಡಿದೆ. ಜೆಡಿಎಸ್​ನ 5-6 ಶಾಸಕರು ಹೈಕಮಾಂಡ್ ಸಂಪರ್ಕ ಕಡಿದುಕೊಂಡಿದ್ದು ಅಡ್ಡ ಮತದಾನದ ಭೀತಿಯೂ ಆವರಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಕೂಡ ಜೆಡಿಎಸ್ ಮತ ಸೆಳೆಯಲು ತಂತ್ರಗಾರಿಕೆ ರೂಪಿಸಿವೆ. ಹಾಗಾಗಿ ದಳಪತಿಗಳಿಗೆ ಒಳಗೊಳಗೆ ನಡುಕ ಶುರುವಾಗಿದೆ.

2016ರ ರಾಜ್ಯಸಭೆ ಚುನಾವಣೆಯಲ್ಲಿ ಜಮೀರ್ ಅಹಮ್ಮದ್ ಖಾನ್ ಸೇರಿ 8 ಜೆಡಿಎಸ್ ಶಾಸಕರು ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ್ದರು. ತರುವಾಯ ಜೆಡಿಎಸ್​ನಿಂದ ಅನರ್ಹಗೊಂಡು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಜೆಡಿಎಸ್ ರಾಜಕೀಯ ಲೆಕ್ಕಾಚಾರಗಳು ತಲೆಕೆಗಳಾಗುವ ಸಾಧ್ಯತೆಗಳಿವೆ.

ಕುಟುಂಬದಲ್ಲೇ ಭಿನ್ನಾಭಿಪ್ರಾಯ: ಕುಪೇಂದ್ರ ರೆಡ್ಡಿ ಕಣಕ್ಕಿಳಿಸಿರುವ ವಿಚಾರದಲ್ಲಿ ದೇವೇಗೌಡರ ಕುಟುಂಬದಲ್ಲೇ ಭಿನ್ನಾಭಿಪ್ರಾಯಗಳು ತಲೆದೋರಿವೆ ಎನ್ನಲಾಗಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಚಿತ್ರದುರ್ಗ ವಿಧಾನಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದ ಕೆ.ಸಿ.ವೀರೇಂದ್ರ ಅವರನ್ನು ‘ಕಾಮನ್ ಕ್ಯಾಂಡಿಡೇಟ್’ ಆಗಿ ಕಣಕ್ಕಿಳಿಸಿ, ಕಾಂಗ್ರೆಸ್ ಹೆಚ್ಚುವರಿ ಮತ ಪಡೆಯುವ ತಂತ್ರಗಾರಿಕೆ ರೂಪಿಸಿದ್ದರು. ಇದಕ್ಕೆ ಕಾಂಗ್ರೆಸ್ ರಾಜ್ಯ ನಾಯಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದರು ಎನ್ನಲಾಗಿದೆ.

ಗೌಡರಿಗೆ ದೊಡ್ಡ ಸವಾಲು: ಹೆಚ್ಚುವರಿ ಮತಗಳ ಮೇಲೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳು ಒಂದರ ಮೇಲೊಂದು ಕಣ್ಣಿಟ್ಟಿದ್ದು ಚುನಾವಣಾ ಕಣ ಕುತೂಹಲದ ಘಟ್ಟ ತಲುಪಿದೆ. ಕುಪೇಂದ್ರ ರೆಡ್ಡಿ ಕಣಕ್ಕಿಳಿಸಿರುವ ದೇವೇಗೌಡರ ನಡೆ ರಾಜಕೀಯ ವಲಯದಲ್ಲಿ ಯಕ್ಷಪ್ರಶ್ನೆಯಾಗಿದೆ.

ಜೆಡಿಎಸ್ ಪ್ಲ್ಯಾನ್ ಫ್ಲಾಪ್?: 2023ರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟು ವೀರೇಂದ್ರ ಅವರನ್ನು ವಿಧಾನಪರಿಷತ್ ಕಣಕ್ಕಿಳಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈ ಕುರ್ಚಿ ಶರವಣ ಕೈಸೇರಿತು. ಹಾಗಾಗಿ ರಾಜ್ಯಸಭೆ ಚುನಾವಣೆಗೆ ಕೆ.ಸಿ.ವೀರೇಂದ್ರರನ್ನು ಕಣಕ್ಕಿಳಿಸಲು ಕುಮಾರಸ್ವಾಮಿ ಒಲವು ತೋರಿದ್ದರು. ಈ ನಡುವೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಕುಪೇಂದ್ರ ರೆಡ್ಡಿ ಅಭ್ಯರ್ಥಿಯನ್ನಾಗಿ ಬಿಂಬಿಸಿ, ದೇವೇಗೌಡರಿಂದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಫೋನ್ ಮೂಲಕ ಸಂರ್ಪಸಿ, ಒಂದು ಹಂತದಲ್ಲಿ ಬೆಂಬಲ ಪಡೆಯುವ ವಿಚಾರದಲ್ಲಿ ಯಶಸ್ವಿ ಕೂಡ ಆಗಿದ್ದರು. ತರುವಾಯ ರಾಜ್ಯ ಕಾಂಗ್ರೆಸ್​ನಲ್ಲಿ ನಡೆದ ಬೆಳವಣಿಗೆಯಲ್ಲಿ ದೇವೇಗೌಡರ ಎಲ್ಲ ಪ್ಲ್ಯಾನ್ ಫ್ಲಾಪ್ ಆಗಿದೆ. ಕುಟುಂಬದಲ್ಲಿನ ಈ ಬೆಳವಣಿಗೆಯಿಂದ ಮುನಿಸಿಕೊಂಡ ಕುಮಾರಸ್ವಾಮಿ, ನಿಯಮಿತ ಆರೋಗ್ಯ ತಪಾಸಣೆ ನೆಪವೊಡ್ಡಿ ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಗುರುವಾರ ತಡ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು, ರಾಜ್ಯಸಭೆ ಚುನಾವಣೆಯಲ್ಲಿ ಯಾವ ರಾಜಕೀಯ ತಂತ್ರಗಾರಿಕೆ ಮಾಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಸಲ್ಲಿಕೆಯಾಗಿದ್ದ ಎಲ್ಲ ನಾಮಪತ್ರಗಳು ಕ್ರಮಬದ್ಧ

ಕರ್ನಾಟಕದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಸ್ವೀಕೃತವಾಗಿರುವ ಎಲ್ಲ ನಾಮಪತ್ರಗಳೂ ಕ್ರಮಬದ್ಧವಾಗಿವೆ. ಭಾರತೀಯ ಜನತಾ ಪಕ್ಷದ ಮೂವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನ ಇಬ್ಬರು ಹಾಗೂ ಜಾತ್ಯತೀತ ಜನತಾದಳದ ಓರ್ವ ಅಭ್ಯರ್ಥಿ ನಾಮಪತ್ರಗಳೂ ಒಳಗೊಂಡಂತೆ ಎಲ್ಲ ಆರು ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧ ಹಾಗೂ ಅಂಗೀಕೃತವಾಗಿವೆ ಎಂದು ಚುನಾವಣಾಧಿಕಾರಿಗಳೂ ಆದ ವಿಧಾನಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ತಿಳಿಸಿದ್ದಾರೆ. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್ ಸಿಂಗ್ ಸಿರೋಯಾ, ಕಾಂಗ್ರೆಸ್​ನಿಂದ ಜೈರಾಮ್ ರಮೇಶ್, ಮನ್ಸೂರ್ ಆಲಿ ಖಾನ್ ಹಾಗೂ ಜೆಡಿಎಸ್​ನಿಂದ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದರು. ವಿಧಾನಸಭೆಯಲ್ಲಿ ಆಯಾ ಪಕ್ಷಗಳ ಸಂಖ್ಯಾಬಲದ ಮೇಲೆ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಜಗ್ಗೇಶ್ ಹಾಗೂ ಕಾಂಗ್ರೆಸ್​ನ ಜೈರಾಮ್ ರಮೇಶ್ ಗೆಲುವು ನಿಶ್ಚಿತವಾಗಿದೆ. ಇನ್ನೊಂದು ಸ್ಥಾನಕ್ಕೆ ಲೆಹರ್ ಸಿಂಗ್, ಮನ್ಸೂರ್ ಆಲಿ ಖಾನ್ ಹಾಗೂ ಕುಪೇಂದ್ರ ರೆಡ್ಡಿ ನಡುವೆ ಪೈಪೋಟಿ ಇದ್ದು, ಚುನಾವಣಾ ಕಣ ಕುತೂಹಲ ಕೆರಳಿಸಿದೆ.

ಸಿದ್ದರಾಮಯ್ಯಗೆ ದಳಪತಿಗಳ ದುಂಬಾಲು

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಎರಡನೇ ಅಭ್ಯರ್ಥಿಯ ನಾಮಪತ್ರ ಹಿಂಪಡೆಯುವಂತೆ ಮಾಡಿ ಎಂದು ಜೆಡಿಎಸ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ದಂಬಾಲು ಬಿದ್ದಿದೆ. ಬುಧವಾರ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಹಾಗೂ ಬಿ.ಎಂ.ಫಾರೂಕ್ ಅವರು ಸಿದ್ದರಾಮಯ್ಯ ಮನೆಗೆ ಭೇಟಿ ನೀಡಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ನೀಡಿದ ಸಂದೇಶವನ್ನು ಮುಟ್ಟಿಸಿದರು. ಕೋಮುವಾದಿ ಪಕ್ಷ ಸೋಲಿಸಲು ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟ ನಾವುಗಳು ಒಟ್ಟಾಗಿ ಚುನಾವಣೆ ಎದುರಿಸಬೇಕು. ಹೀಗಾಗಿ ನಿಮ್ಮ ಅಭ್ಯರ್ಥಿಯನ್ನು ಹಿಂದೆ ಸರಿಸಿ ಎಂದು ಜೆಡಿಎಸ್ ನಿಯೋಗ ಸಿದ್ದರಾಮಯ್ಯರನ್ನು ಒತ್ತಾಯಿಸಿದೆ.

ಬೆಂಗಳೂರಿನಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಅಭಿನಂದಿಸಿದ ಜೆಡಿಎಸ್​ನ ಶರವಣ, ಫಾರೂಕ್.

‘ಬಿಜೆಪಿ ಬಾಲಂಗೋಚಿ, ಬಿಜೆಪಿ ಬಿ ಟೀಮ್ ಕ್ಯಾಪ್ಟನ್, ಆಪರೇಷನ್ ಕಮಲಯ್ಯ, ಎಷ್ಟಾದರೂ ನೀವು ಆಪರೇಷನ್ ಕಮಲದ ಆಸಾಮಿ ಅಲ್ಲವೇ?’ ಎಂದು ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯರನ್ನು ಕುಟುಕಿದ 24 ತಾಸಿನಲ್ಲೇ ಜೆಡಿಎಸ್ ನಿಯೋಗ ಅವರ ಮನೆ ಬಾಗಿಲು ತಟ್ಟಿದೆ. ಈ ಮೂಲಕ ಜೆಡಿಎಸ್​ನಲ್ಲಿ ಒಮ್ಮತ ಇಲ್ಲ ಎಂಬುದು ಕೂಡ ಬಹಿರಂಗವಾಗಿದೆ. ‘ಸೋಲು ಖಚಿತ ಎಂದು ಗೊತ್ತಿದ್ದರೂ ಮನ್ಸೂರ್ ಖಾನ್ ಅವರನ್ನು ಬಲಿಪೀಠದ ಮುಂದೆ ನಿಲ್ಲಿಸಿದ್ದಿರಿ. ಏನಿದರ ಹಕೀಕತ್ತು? ‘ಮುಸ್ಲಿಂ ಮೂಲೋತ್ಪಾಟನಾ ರಾಜಕೀಯ’ಕ್ಕೆ ರಾಜ್ಯಸಭೆ ಚುನಾವಣೆಯನ್ನೂ ಬಳಸಿಕೊಳ್ಳುತ್ತಿದ್ದೀರಲ್ಲ? ಇದೆಂಥಾ ರಾಜಕೀಯವಯ್ಯಾ?’ ಎಂಬ ಎಚ್​ಡಿಕೆ ಪ್ರಶ್ನೆಯಿಂದ ಸಿದ್ದರಾಮಯ್ಯ ತೀವ್ರ ಅಸಮಾಧಾನಗೊಂಡಿದ್ದು, ನಿಮ್ಮ ನಾಯಕರು ಈ ರೀತಿ ಮಾತನಾಡುವಾಗ ನಾವು ಹೇಗೆ ನಿಮಗೆ ಸಹಕಾರ ಕೊಡಬೇಕೆಂದು ಪ್ರಶ್ನಿಸಿದ್ದಾರೆಂದೂ ಗೊತ್ತಾಗಿದೆ.

ನಾಮಪತ್ರ ಹಿಂಪಡೆಯಲು ಶುಕ್ರವಾರ ಮಧ್ಯಾಹ್ನದವರೆಗೆ ಅವಕಾಶವಿದೆ. ಅಷ್ಟರೊಳಗೆ ನಿರ್ಧಾರ ಮಾಡಿ ಎಂದು ಜೆಡಿಎಸ್ ನಿಯೋಗ ಒತ್ತಾಯಿಸಿದೆ. ಆದರೆ ಸಿದ್ದರಾಮಯ್ಯ ಪೂರ್ಣ ಪ್ರಮಾಣದಲ್ಲಿ ಸಹಮತ ನೀಡಿಲ್ಲ. ನಾವು ನಿಮ್ಮ ಅಭಿಪ್ರಾಯವನ್ನು ನಮ್ಮ ನಾಯಕರಿಗೆ ತಿಳಿಸುತ್ತೇವೆ ಎಂದಷ್ಟೇ ಹೇಳಿಕಳಿಸಿದ್ದಾರೆ. ‘ಇಕ್ಬಾಲ್ ಅಹಮದ್ ಸರಡಗಿ ಆಯಿತು. ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಆಯಿತು. ರೋಷನ್ ಬೇಗ್ ಕಥೆಯನ್ನು ಮುಗಿಸಿದಿರಿ. ತನ್ವೀರ್ ಸೇಠ್ ನಿಮ್ಮ ಹಿಟ್ ಲಿಸ್ಟಿನಲ್ಲಿದ್ದಾರೆ. ಸತ್ಯ ಹೇಳಿದ ಸಲೀಂರನ್ನು ಸಲೀಸಾಗಿ ಸೈಡಿಗಟ್ಟಿದಿರಿ. ಒಂದೇ ಕಲ್ಲಿನಲ್ಲಿ ಅನೇಕ ಹಕ್ಕಿಗಳನ್ನು ಹೊಡೆಯೋದು ಅಂದರೆ ಇದೇನಾ?’ ಎಂಬ ಎಚ್.ಡಿ.ಕುಮಾರಸ್ವಾಮಿ ಟೀಕೆ ಕೂಡ ಸಿದ್ದರಾಮಯ್ಯರನ್ನು ಸಾಕಷ್ಟು ಕೆರಳಿಸಿದೆ.

ಮೂರೂ ಅಭ್ಯರ್ಥಿಗಳ ಗೆಲುವು

ರಾಜ್ಯಸಭೆ ಚುನಾವಣೆಯಲ್ಲಿ ಯಾರ ಸಹಾಯವೂ ಇಲ್ಲದೆ 3 ಸ್ಥಾನಗಳನ್ನು ಗೆಲ್ಲುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುದ್ದಿ ಗಾರರೊಂದಿಗೆ ಮಾತನಾಡಿ, ನಮ್ಮ ಬಳಿ 122 ಮತಗಳಿರುವ ಕಾರಣ, ಗೆಲ್ಲುವುದಕ್ಕೆ ಯಾವುದೇ ಅನುಮಾನ ಬೇಡ ಎಂದರು. ಪಕ್ಷದ ಮೂವರು ಅಭ್ಯರ್ಥಿಗಳು ರಾಜ್ಯಸಭೆಗೆ ಹೋಗುವುದು ನಿಶ್ಚಿತ. ಈ ನಿಟ್ಟಿನಲ್ಲಿ ಪಕ್ಷದ ಮತಗಳು ಗೆಲುವಿಗೆ ಸಹಕಾರಿಯಾಗಲಿವೆ ಎಂದು ಹೇಳಿದರು.

ಪಠ್ಯಪುಸ್ತಕ ವಿವಾದ: ಶಾಲಾ ಪಠ್ಯಪುಸ್ತಕ ವಿವಾದ ವಿಚಾರದಲ್ಲಿ ಈಗಾಗಲೆ ಸಾಕಷ್ಟು ಚರ್ಚೆಯಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಪರಿಶೀಲನೆ ಮಾಡಿ ವರದಿ ಪಡೆಯುವುದಾಗಿ ತಿಳಿಸಿದ್ದಾರೆ. ಅವರು ಪ್ರವಾಸ ಮುಗಿಸಿ ಬಂದ ಬಳಿಕ ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.

ಬಿಜೆಪಿಯಿಂದ ವೀಕ್ಷಕರ ನೇಮಕ

ನವದೆಹಲಿ: ರಾಜ್ಯಸಭಾ ಚುನಾವಣೆಗೆ ಪಕ್ಷದ ವೀಕ್ಷಕರನ್ನು ಬಿಜೆಪಿ ನೇಮಕ ಮಾಡಿದ್ದು, ಕರ್ನಾಟಕಕ್ಕೆ ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿಯನ್ನು ನಿಯೋಜಿಸಲಾಗಿದೆ. ಕೇಂದ್ರ ಮಂತ್ರಿ ಗಳಾದ ನರೇಂದ್ರ ಸಿಂಗ್ ತೋಮರ್ ಹಾಗೂ ಗಜೇಂದ್ರ ಸಿಂಗ್ ಶೆಖಾವತ್​ರನ್ನು ರಾಜಸ್ಥಾನ ಮತ್ತು ಹರಿಯಾಣಗೆ, ಮಹಾರಾಷ್ಟ್ರಕ್ಕೆ ಅಶ್ವಿನಿ ವೈಶ್ಣವ್​ರನ್ನು ನೇಮಕ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net