ರಾಜ್ಯಕ್ಕೆ ಮತ್ತೊಂದು ವಂದೇ ಮಾತರಂ ರೈಲು ಸೌಲಭ್ಯ: ಸಚಿವ ಸೋಮಣ್ಣ

v-somanna-1678856881
Published on

ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯದಲ್ಲೇ 10 ವಂದೇ ಭಾರತ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಿದ್ದು, ಅದರಲ್ಲಿ ಒಂದು ರೈಲು ಕರ್ನಾಟಕಕ್ಕೂ ಬರಲಿದೆ ಎಂದು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಮಾಹಿತಿ ನೀಡಿದ ಅವರು, ವಿಜಯಪುರ ಜಿಲ್ಲೆಗೆ ವಂದೇ ಭಾರತ ರೈಲು ಬಂದರೂ ಆಶ್ಚರ್ಯ ಇಲ್ಲ ಎಂದಷ್ಟೆ ಮಾಹಿತಿ ನೀಡಿದರು.

ಹೊಸ ಯೋಜನೆಗಳು:
ಬೆಂಗಳೂರು- ಮಂಗಳೂರು ಹಾಗೂ ಹುಬ್ಬಳ್ಳಿ- ಅಂಕೋಲ ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣ; ಚಿತ್ರದುರ್ಗ- ಹೊಸಪೇಟೆ- ಆಲಮಟ್ಟಿ ನಡುವೆ ಹೊಸ ರೈಲು ಮಾರ್ಗ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು ಎನ್ನುವ ಬೇಡಿಕೆಯನ್ನು ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಸಲ್ಲಿಸಿದ್ದಾರೆ.
ಬಂದರು ನಗರವಾದ ಮಂಗಳೂರಿಗೆ ರೈಲ್ವೆ ಸಂಪರ್ಕ ಇದ್ದರೂ ಅದು ಜೋಡಿ ಮಾರ್ಗವಾಗಿ ಇನ್ನೂ ಮಾರ್ಪಾಡಾಗಿಲ್ಲ. ಹೀಗಾಗಿ ಸರಕು ಸಾಗಣೆ ಸೇರಿದಂತೆ ಕೈಗಾರಿಕಾ ಬೆಳವಣಿಗೆಯೂ ಕುಂಠಿತವಾಗಿದೆ. ಇದೇ ರೀತಿ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಯಾದರೂ ಅಲ್ಲಿನ ಬಂದರನ್ನು ಉತ್ತರ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಹೀಗೆ ಮಾಡುವುದರಿಂದ ರಾಜ್ಯದ ಕೈಗಾರಿಕಾಭಿವೃದ್ಧಿಗೆ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ಪಾಟೀಲ ಅವರು ರೈಲ್ವೆ ಸಚಿವರ ಗಮನ ಸೆಳೆದರು.
ಬೆಂಗಳೂರು- ಮಂಗಳೂರು ನಡುವೆ ಜೋಡಿ ರೈಲು ಮಾರ್ಗ ನಿರ್ಮಾಣದ ಜತೆಗೆ ಸಕಲೇಶಪುರ- ಸುಬ್ರಹ್ಮಣ್ಯ ನಡುವೆ ಸುರಂಗ ರೈಲ್ವೆ ಮಾರ್ಗ ನಿರ್ಮಾಣದ ಅಗತ್ಯವನ್ನೂ ಸಚಿವರು ರೈಲ್ವೆ ಸಚಿವರ ಗಮನಕ್ಕೆ ತಂದಿದ್ದಾರೆ. ಇತ್ತೀಚೆಗೆ ಮಳೆ ಕಾರಣಕ್ಕೆ ಭೂಕುಸಿತವಾಗಿ, ಹಲವು ಬಾರಿ ರೈಲ್ವೆ ಸಂಚಾರವನ್ನು ಈ ಮಾರ್ಗದಲ್ಲಿ ರದ್ದು ಮಾಡಲಾಯಿತು. ಹೀಗಾಗಿ ಸುರಂಗ ರೈಲ್ವೆ ಮಾರ್ಗ ನಿರ್ಮಾಣದ ಸಾಧ್ಯತೆ ಕಡೆಗೂ ಹೆಚ್ಚಿನ ಗಮನ ನೀಡಬೇಕು ಎಂದು ಪಾಟೀಲ ಅವರು ಮನವಿ ಮಾಡಿದರು.

ಚಿತ್ರದುರ್ಗ-ಹೊಸಪೇಟೆ
ಚಿತ್ರದುರ್ಗ- ಹೊಸಪೇಟೆ- ಕೊಪ್ಪಳ- ಆಲಮಟ್ಟಿ- ವಿಜಯಪುರ ಮಾರ್ಗದ ಹೊಸ ರೈಲ್ವೆ ಯೋಜನೆಗೆ ಒಪ್ಪಿಗೆ ನೀಡುವಂತೆಯೂ ಸಚಿವರು ಕೋರಿಕೆ ಸಲ್ಲಿಸಿದರು. ಇದರಿಂದ ಬೆಂಗಳೂರು- ವಿಜಯಪುರ ಮತ್ತು ಸೊಲ್ಲಾಪುರ ನಡುವಿನ ಪ್ರಯಾಣ ಅವಧಿ ಕಡಿಮೆ ಆಗಲಿದೆ. ಇದಕ್ಕೆ ತಕ್ಷಣ ಸ್ಪಂದಿಸಿದ ಸಚಿವ ಸೋಮಣ್ಣ ಅವರು ಈ ಮಾರ್ಗದ ಸಮೀಕ್ಷೆ ನಡೆಯುತ್ತಿದ್ದು, ಬಳಿಕ ಯೋಜನೆ ಅನುಷ್ಠಾನ ಕುರಿತು ತೀರ್ಮಾನಿಸಲಾಗುವುದು ಎಂದರು.

ವಿಜಯಪುರಕ್ಕೆ 4 ಗಂಟೆ ಉಳಿತಾಯ:
ಬೆಂಗಳೂರು- ವಿಜಯಪುರ ನಡುವಿನ ರೈಲ್ವೆ ಪ್ರಯಾಣಕ್ಕೆ 14 ಗಂಟೆ ಆಗುತ್ತಿರುವ ಕಾರಣ, ಸ್ವಲ್ಪ ಬದಲಾವಣೆ ಮಾಡಿದರೆ, ಕನಿಷ್ಠ 10 ಗಂಟೆಗೆ ಇಳಿಸಬಹುದು. ಅದಕ್ಕಾಗಿ ಕೆಲವು ಮಾರ್ಗೋಪಾಯಗಳು ಇವೆ. ವಿಜಯಪುರ ಕಡೆಗೆ ಹೋಗುವ ರೈಲುಗಳನ್ನು ಹುಬ್ಬಳ್ಳಿ ಕೇಂದ್ರ ನಿಲ್ದಾಣಕ್ಕೆ ಬರದ ಹಾಗೆ ತಡೆದು, ಹುಬ್ಬಳ್ಳಿ ದಕ್ಷಿಣ ರೈಲ್ವೆ ಸ್ಟೇಷನ್‌ನಿಂದ ನೇರವಾಗಿ ಗದಗ ಕಡೆ ಹೋಗುವ ಹಾಗೆ ಮಾಡಬೇಕು. ಗದಗದಲ್ಲೂ ಬೈಪಾಸ್ ಮೂಲಕ ವಿಜಯಪುರದ ಕಡೆ ಹೋಗುವ ಹಾಗೆ ಮಾಡುವುದರಿಂದ ಸಾಕಷ್ಟು ಸಮಯ ಉಳಿತಾಯ ಮಾಡಬಹುದು ಎಂದರು. ಇದನ್ನು ಪರಿಶೀಲಿಸುವಂತೆ ಸೋಮಣ್ಣ ಸೂಚಿಸಿದರು.

ಭೂಸ್ವಾಧೀನ ಸಮಸ್ಯೆಗೆ ಪರಿಹಾರ
ಧಾರವಾಡ- ಕಿತ್ತೂರು- ಬೆಳಗಾವಿ ನಡುವಿನ ನೇರ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಸಮಸ್ಯೆ ಇದ್ದು ಆದಷ್ಟು ಬೇಗ ಭೂಮಿ ಕೊಡಿಸಲು ಕ್ರಮ ವಹಿಸಲಾಗುವುದು. ಈ ನಿಟ್ಟಿನಲ್ಲಿ ಸದ್ಯದಲ್ಲೇ ಸ್ಥಳೀಯ ಜನಪ್ರತಿನಿಧಿಗಳ ಜತೆ ಸಭೆ ನಡೆಸಲಾಗುವುದು ಎಂದು ಸಚಿವ ಪಾಟೀಲ ಅವರು ತಿಳಿಸಿದರು.

ಹಲವು ಯೋಜನೆ ಪ್ರಸ್ತಾಪ
ತುಮಕೂರು- ದಾವಣಗೆರೆ ಮತ್ತು ತುಮಕೂರು- ರಾಯದುರ್ಗ ಯೋಜನೆಗಳನ್ನು ನಿಗದಿಗಿಂತ ಮೊದಲೇ ಮುಗಿಸಲು ಆದ್ಯತೆ ನೀಡಬೇಕೆಂದೂ ಪಾಟೀಲ್ ಮನವಿ ಮಾಡಿದರು.
ಬಿಡದಿ- ಕನಕಪುರ- ಚಾಮರಾಜನಗರ ರೈಲ್ವೆ ಯೋಜನೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದೆ. ಇದಕ್ಕೆ ಕಾಯಕಲ್ಪ ನೀಡಬೇಕು ಎನ್ನುವ ಮನವಿಗೂ ಸಚಿವ ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಸದ್ಯದಲ್ಲೇ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net