ರಷ್ಯಾಕ್ಕೆ ಹೊರಟ್ರು ರಕ್ಷಣಾ ಸಚಿವ ರಾಜನಾಥ್ ಸಿಂಗ್

rajanath singh
Published on

ನವದೆಹಲಿ: ಚೀನಾ,ಪಾಕಿಸ್ತಾನದೊಂದಿಗೆ ಗಡಿ ಸಂಘರ್ಷ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಮೂರು ದಿನಗಳ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಅವರು ಶಾಂಘೈ ಕೋಆಪರೇಷನ್​ ಆರ್ಗನೈಸೇಷನ್​ (ಎಸ್​ಸಿಒ)ನ ಮಹತ್ವದ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ, ರಷ್ಯಾದ ರಕ್ಷಣಾ ಸಚಿವ ಸರ್ಜೆ ಶೊಯ್ಗು ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಸಂಬಂಧಿಸಿದ ಮಾತುಕತೆ ನಡೆಸಲಿದ್ದಾರೆ.

ಎಸ್​ಸಿಒ ಸದಸ್ಯರಾಷ್ಟ್ರಗಳಾದ ಎಂಟು ರಾಷ್ಟ್ರಗಳ ರಕ್ಷಣಾ ಸಚಿವರು ಸಭೆಯಲ್ಲಿ ಭಾಗಿಯಾಗಲಿದ್ದು, ಭಯೋತ್ಪಾದನೆ ಮತ್ತು ಇತರೆ ಸವಾಲುಗಳನ್ನು ಎದುರಿಸುವ ವಿಚಾರದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಚೀನಾದ ರಕ್ಷಣಾ ಸಚಿವ ಜನರಲ್​ ವೇಯ್​ ಫೆನ್ಘೆ ಮತ್ತು ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್​ ಖಟ್ಟಕ್​ ಕೂಡ ಭಾಗವಹಿಸುವ ನಿರೀಕ್ಷೆ ಇದೆ.

ಚೀನಾ ರಕ್ಷಣಾ ಸಚಿವರೊಂದಿಗೆ ಈ ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆ ನಿಗದಿಯಾಗಿಲ್ಲ ಎಂದು ಅಧಿಕೃತ ಮೂಲಗಳು ಸ್ಪಷ್ಟಪಡಿಸಿವೆ. ಈ ನಡುವೆ, ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿದ್ದು, ಎಸ್​​ಸಿಒ ಸಭೆಗೆ ತೆರಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net