

Rajinikanth: ತಮಿಳು ಚಿತ್ರರಂಗದ ಸೂಪರ್ಸ್ಟಾರ್, 'ತಲೈವಾ' ಎಂದೇ ಖ್ಯಾತಿ ಪಡೆದಿರುವ ಹಿರಿಯ ನಟ ರಜಿನಿಕಾಂತ್, ಸದ್ಯ ತಮ್ಮ ಮುಂಬರುವ ಬಹುನಿರೀಕ್ಷಿತ 'ಕೂಲಿ' ಚಿತ್ರದಲ್ಲಿ ಸಖತ್ ಬಿಜಿಯಾಗಿದ್ದಾರೆ. ಈಗಾಗಲೇ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆಗಿದ್ದು, ಆ.14ರಂದು ಚಿತ್ರ ತೆರೆಗೆ ಬರಲಿದೆ. ಈ ಮಧ್ಯೆ ಹಳೆಯ ಸುದ್ದಿಯೊಂದು ಮತ್ತೇ ಮುನ್ನೆಲೆಗೆ ಬಂದಿದ್ದು, ಬಾಲಿವುಡ್ನ ದಿವಂಗತ ನಟಿ ಶ್ರೀದೇವಿಯನ್ನು ತಲೈವಾ ಪ್ರೀತಿಸುತ್ತಿದ್ದರು ಎಂಬ ವಿಚಾರ ಸದ್ಯ ಹಲವರ ಹುಬ್ಬೇರಿಸಿದೆ.
ಅಂದಿನ ಕಾಲಘಟ್ಟದಲ್ಲಿ ಶ್ರೀದೇವಿ ಜೊತೆಗೆ ಸುಮಾರು 19ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ರಜಿನಿಕಾಂತ್, ಬಾಲಿವುಡ್ ಸ್ಟಾರ್ ನಟಿಯನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆ ಕಾಲಕ್ಕೆ ಈ ಸುದ್ದಿ ಅಷ್ಟಾಗಿ ಸುದ್ದಿಯಲ್ಲಿರಲಿಲ್ಲ. ಆದರೆ, ಹಳೆಯ ಸಂದರ್ಶನವೊಂದರಲ್ಲಿ ಚಿತ್ರ ನಿರ್ದೇಶಕ ಕೆ. ಬಾಲಚಂದರ್, 'ತಲೈವಾ' ತಮ್ಮ ಮನಸ್ಸಿನಲ್ಲಿದ್ದ ವಿಷಯವನ್ನು ಹೇಳಲು ಏನು ಮಾಡಿದ್ದರು? ಹೇಳದೆ ಏಕೆ ವಾಪಾಸ್ ಆದರು ಎಂಬ ಕುತೂಹಲಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದರು. ಆ ವಿಷಯ ಇದೀಗ ಪುನಃ ಸುದ್ದಿಗೆ ಬಂದಿದೆ.
ಹಳೆಯ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ಕೆ. ಬಾಲಚಂದರ್, "ಅಂದು ಶ್ರೀದೇವಿ ಅವರ ಮನೆ ಗೃಹಪ್ರವೇಶವಿತ್ತು. ಈ ಕಾರ್ಯಕ್ರಮಕ್ಕೆ ರಜಿನಿಕಾಂತ್ ಕೂಡ ಭೇಟಿ ನೀಡಿದ್ದರು. ಶ್ರೀದೇವಿ ಮೇಲಿದ್ದ ಪ್ರೀತಿ ಭಾವನೆಯನ್ನು ವ್ಯಕ್ತಪಡಿಸುವುದರ ಜತೆಗೆ ಮದುವೆ ಪ್ರಸ್ತಾಪವನ್ನು ಸಹ ಮುಂದಿಡಲು ಬಯಸಿದ್ದರು. ಆದರೆ, ಅದೇ ಸಮಯದಲ್ಲಿ ನಟಿಯ ಮನೆಯಲ್ಲಿ ಕರೆಂಟ್ ಹೋಯಿತು. ತಾನು ಮದುವೆ ಪ್ರಸ್ತಾಪ ಮುಂದಿಡುವಾಗಲೇ ಹೀಗಾಯಿತಲ್ಲಾ ಎಂದು ರಜನಿ ತಮ್ಮ ಮನದಾಳದ ಮಾತನ್ನು ಹೃದಯದಲ್ಲೇ ಇರಿಸಿಕೊಂಡರು" ಎಂದಿದ್ದಾರೆ.
"ಇದು ಅಪಶಕುನ ಎಂದು ಭಾವಿಸಿದ ರಜನಿಕಾಂತ್, ಈ ಬಗ್ಗೆ ಮಾತನಾಡದಿರಲು ನಿರ್ಧರಿಸಿದರು. ಶ್ರೀದೇವಿ ಜೊತೆಗಿನ ಮದುವೆ ಪ್ರಸ್ತಾಪವನ್ನು ಮುಂದುವರಿಸದೆ ಮನೆಯಿಂದ ಹೊರಟುಹೋದರು. ಶ್ರೀದೇವಿ ಮೇಲಿದ್ದ ಪ್ರೀತಿ ಭಾವನೆಗಳ ಹೊರತಾಗಿ, ನಟಿಯೊಂದಿಗಿದ್ದ ಒಳ್ಳೆಯ ಸ್ನೇಹ ಬಾಂಧವ್ಯವನ್ನು ಉಳಿಸಿಕೊಳ್ಳಲು ರಜನಿ ಆಯ್ಕೆ ಮಾಡಿಕೊಂಡರು" ಎಂದು ಬಾಲಚಂದರ್ ಹೇಳಿದ್ದರು,(ಏಜೆನ್ಸೀಸ್).