ಇಬ್ಬರು ದಲಿತ ಯುವಕರ ಮೇಲೆ ಅಮಾನವೀಯ ಹಲ್ಲೆ; ರಾಜಸ್ಥಾನದಲ್ಲಿ ಮನು ಕುಲವೇ ತಲೆ ತಗ್ಗಿಸುವಂತಹ ಪ್ರಕರಣ

RAJASTHAN
Published on

ನಾಗಪುರ: ಅಲ್ಲೊಬ್ಬ ನೆಲದ ಮೇಲೆ ಮಲಗಿದ್ದಾನೆ. ಭಿಕ್ಷುಕನ ತರಹದ ವೇಷ. ಇನ್ನೊಬ್ಬ ಆತನ ಕೈಯನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುತ್ತಾನೆ. ಇನ್ನೊಬ್ಬ ಆವನ ಮೇಲೆ ತನ್ನ ಕಾಲಿಟ್ಟು ಮೀಸುಕಾಡದಂತೆ ಒತ್ತಿ ಹಿಡಿಯುತ್ತಾನೆ. ನೆಲದ ಮೇಲೆ ಬಿದ್ದವನ ಪ್ಯಾಂಟ್​ ಬಿಚ್ಚಿ ಪೆಟ್ರೋಲ್​ ಅದ್ದಿದ ಸ್ಕ್ರೂಡ್ರೈವರ್​ನ್ನು ಗುದನಾಳಕ್ಕೆ ಸೇರಿಸಲು ಮುಂದಾಗುತ್ತಾನೆ.

ಕ್ರೂರತೆಯಿಂದ ತುಂಬಿದ ಈ ವೀಡಿಯೊ ಮುಗಿಯುತ್ತಿದ್ದಂತೆ ಮನುಷ್ಯನ ಕಿರುಚಾಟ ಕೇಳಿಸುತ್ತದೆ. ಇದು ಯಾವುದೋ ಸಿನಿಮಾದ ದೃಶ್ಯವಲ್ಲ. ಬದಲಿಗೆ, ರಾಜಸ್ಥಾನದ ನಾಗೌರ್ ಎಂಬಲ್ಲಿ ನಡೆದ ಘಟನೆ ಇದು. ಈ ವಿಡಿಯೋ ಹಳೆಯದಾಗಿದ್ದು, ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಳ್ಳತನದ ಆರೋಪದಲ್ಲಿ ರಾಜಸ್ಥಾನದ ನಾಗೌರ್​ನಲ್ಲಿ ಇಬ್ಬರು ಯುವ ದಲಿತ ಯುವಕರನ್ನು ಹೀಗೆ ಕ್ರೂರವಾಗಿ ಹಿಂಸಿಸಲಾಗಿದೆ. ಇದು ಯಾವುದೋ ಗ್ಯಾರೇಜ್​ನಲ್ಲಿ ಮಾಡಿದ್ದು, ಅದನ್ನು ವಿಡಿಯೋ ಮಾಡಲಾಗಿದೆ.

ಈ ಹಿಂಸೆ ನೀಡಿದ್ದು ಫೆಬ್ರವರಿ 16ರಂದು ಎನ್ನಲಾಗಿದೆ. ಆದರೆ ಪೊಲೀಸರು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದಮೇಲೆ ಅಂದರೆ ಫೆ 19ರಂದು ದೂರು ದಾಖಲಿಸಿಕೊಂಡಿದ್ದಾರೆ.

ದಲಿತ ಯುವಕರಿಬ್ಬರು ತಮ್ಮ ವಾಹನ ರಿಪೇರಿಯಾಗಿದೆಯೇ ಎಂದು ಕೇಳಲು ಆ ಗ್ಯಾರೇಜ್​​ಗೆ ಬರುತ್ತಾರೆ. ಅಲ್ಲಿ ಹಣ ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಆಗ ಗುಂಪೊಂದು ಅವರಿಬ್ಬರನ್ನು ಮನಬಂದಂತೆ ಥಳಿಸುತ್ತಾರೆ.

7 ಜನರ ವಿರುದ್ಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ಐವರನ್ನು ಬಂಧಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಅಮಾನವೀಯ ಘಟನೆಗೆ ಕಾರಣವಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಾಗೌರ್ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಪಾಠಕ್ ಹೇಳಿದ್ದಾರೆ.

ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆ ಸ್ಥಳಕ್ಕೆ ಅಧಿಕಾರಿಗಳನ್ನು ಕಳುಹಿಸಲಾಗಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಭನ್ವರ್ ಲಾಲ್ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net