31ಕ್ಕೆ ರಾಜಸ್ಥಾನ ವಿಧಾನಸಭೆ ಅಧಿವೇಶನ? ರಾಜ್ಯಪಾಲರಿಗೆ ಸಿಎಂ ಪರಿಷ್ಕೃತ ಪ್ರಸ್ತಾವನೆ

Nation-2
Published on

ಜೈಪುರ: ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ಭದ್ರಪಡಿಸಿಕೊಳ್ಳಲು ಮುಂದಾಗಿರುವ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ವಿಧಾನಸಭೆ ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜುಲೈ 31ರಂದು ಅಧಿವೇಶನ ಕರೆಯಬೇಕು ಎಂದು ಪ್ರಸ್ತಾವನೆಯಲ್ಲಿ ಕೋರಿದ್ದಾರೆ. ಆದರೆ ಇದರಲ್ಲಿ ಬಹುಮತ ಸಾಬೀತುಪಡಿಸುವ ಬಗ್ಗೆ ಯಾವುದೇ ಅಂಶ ಇಲ್ಲ ಎನ್ನಲಾಗಿದೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಕರೊನಾ ಪ್ರಕರಣಗಳ ಬಗ್ಗೆ ರ್ಚಚಿಸಲು ಅಧಿವೇಶನ ಕರೆಯಬೇಕು ಎಂದು ಅವರು ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.

ಈ ಕುರಿತು ಪರಿಶೀಲನೆ ನಡೆಸಿ, ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯಪಾಲರು ಹೇಳಿದ್ದಾರೆ. ಸೋಮವಾರವೇ ಅಧಿವೇಶನ ಕರೆಯಬೇಕು ಎಂದು ಈ ಹಿಂದೆ ಸಿಎಂ ಗೆಹ್ಲೋಟ್ ಮನವಿ ಮಾಡಿದ್ದರು. ಆದರೆ ಇಷ್ಟು ಕಡಿಮೆ ಅವಧಿಯಲ್ಲಿ ಅಧಿವೇಶನ ಕರೆಯುವುದು ಸಾಧ್ಯವಿಲ್ಲಎಂದು ರಾಜ್ಯಪಾಲರು ಪ್ರತಿಕ್ರಿಯೆ ನೀಡಿದ್ದರು. ಈಗ ಜುಲೈ 31ಕ್ಕೆ ಅಧಿವೇಶನ ಕರೆಯುವಂತೆ ಗೆಹ್ಲೋಟ್ ಮನವಿ ಮಾಡಿದ್ದಾರೆ.

ಮತ್ತೊಂದೆಡೆ, ಸಚಿನ್ ಪೈಲಟ್ ಸಹಿತ ಬಂಡಾಯ ನಾಯಕರಿಗೆ ಅನರ್ಹತೆ ನೋಟಿಸ್ ನೀಡಿರುವ ಸ್ಪೀಕರ್ ಸುಪ್ರೀಂಕೋರ್ಟ್​ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಸೋಮವಾರ ನಡೆಯಲಿದೆ. ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಪೂರ್ಣಗೊಳ್ಳುವ ವರೆಗೆ ಬಂಡಾಯ ನಾಯಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ರಾಜಸ್ಥಾನ ಹೈಕೋರ್ಟ್ ಸ್ಪೀಕರ್ ಸಿ.ಪಿ. ಜೋಷಿ ಅವರಿಗೆ ಈಗಾಗಲೇ ಸೂಚನೆ ನೀಡಿದೆ. ಹೀಗಾಗಿ ಸುಪ್ರೀಂಕೋರ್ಟ್ ಸೋಮವಾರ ಕೈಗೊಳ್ಳುವ ನಿರ್ಧಾರದ ಮೇಲೆ ಪೈಲಟ್ ಬಣದ ಭವಿಷ್ಯ ನಿಂತಿದೆ.

ಬಹುಮತ ವಿಶ್ವಾಸದಲ್ಲಿ ಕಾಂಗ್ರೆಸ್: 200 ಸದಸ್ಯರನ್ನು ಹೊಂದಿರುವ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ 101 ಶಾಸಕರ ಬೆಂಬಲ ಅಗತ್ಯ. ಕಾಂಗ್ರೆಸ್, ಪಕ್ಷೇತರರು, ಸಣ್ಣ ಪಕ್ಷಗಳ ಸಹಿತ 100ಕ್ಕೂ ಅಧಿಕ ಶಾಸಕರ ಬೆಂಬಲ ಇದೆ ಎಂದು ಸಿಎಂ ಗೆಹ್ಲೋಟ್ ಹೇಳಿಕೊಂಡಿದ್ದಾರೆ.

ಬಿಜೆಪಿ ವಿರುದ್ಧ ಕೈ ಅಭಿಯಾನ: ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ‘ಸ್ಪೀಕ್ ಅಪ್ ಫಾರ್ ಡೆಮಾಕ್ರಸಿ:’ ಎಂಬ ಅಭಿಯಾನ ಆರಂಭಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಈ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ಪಕ್ಷದ ನಾಯಕ ಅಜಯ್ ಮಾಕನ್ ಜನತೆಯ ಎದುರು 5 ಪ್ರಶ್ನೆಗಳನ್ನು ಇಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net