

ಎಚ್.ಡಿ.ಕೋಟೆ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 38 ವರ್ಷಗಳ ಕಾಲ ನಡೆಸಿದ ಆಡಳಿತದಲ್ಲಿ ರಾಜ್ಯದ ಸರ್ವೋತೋಮುಖ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಂಜಿಆರ್ ಅರಸು ಹೇಳಿದರು.
ತಾಲೂಕು ಆಡಳಿತ ಸೌಧದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೈಸೂರು, ಮಂಡ್ಯ ಜನರು ಸಮೃದ್ಧಿ ಜೀವನ ನಡೆಸಲು ನಿರ್ಮಿಸಿದ ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ಅಲ್ಲಿನ ಜನರ ಬದುಕು ಬಂಗಾರವಾಯಿತು. ಶಿಕ್ಷಣದ ಮಹತ್ವವನ್ನು ಅರಿತಿದ್ದ ನಾಲ್ವಡಿ ಅವರು ಶೋಷಿತ ಹಾಗೂ ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಅನೇಕ ಶಾಲೆಗಳನ್ನು ಆರಂಭಿಸಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಮಹಿಳೆಯರಿಗೆ ಮತದಾನ ಹಕ್ಕು ಹಾಗೂ ಉಚಿತವಾಗಿ ಶಿಕ್ಷಣ ನೀಡಿದರು. ದೇವದಾಸಿ, ಗೆಜ್ಜೆಪೂಜೆಯಂಥ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಿದ್ದಲ್ಲದೆ, ವೇಶ್ಯಾವೃತ್ತಿಯನ್ನು ತಡೆಗಟ್ಟುವ ಕಾಯ್ದೆಯನ್ನು ಜಾರಿಗೆ ತಂದರು. ನಾಲ್ವಡಿ ಅವರೊಬ್ಬ ದೂರದೃಷ್ಟಿಯ ಚಿಂತಕರಾಗಿದ್ದರು ಎಂದು ಸ್ಮರಿಸಿದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಸಮಗ್ರ ಅಭಿವೃದ್ಧಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಮಾಡಿದ್ದರಿಂದಲೇ ಮೈಸೂರು ಸಂಸ್ಥಾನ ದೇಶದಲ್ಲೇ ಮಾದರಿಯಾಗಿತ್ತು ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ತಿಮ್ಮಯ್ಯ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಮೈಸೂರು ಜನರು ಸದಾ ಸ್ಮರಿಸಬೇಕು. ಜನರ ಆರೋಗ್ಯಕ್ಕಾಗಿ ಕೆ.ಆರ್.ಆಸ್ಪತ್ರೆ, ಕ್ಷಯರೋಗ ಆಸ್ಪತ್ರೆ, ಮಕ್ಕಳ ವಾಣಿ ವಿಲಾಸ ಹಾಗೂ ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಯನ್ನು ಪ್ರಾರಂಭಿಸಿದರು. ಹಾಗಿಯೇ ಕೈಗಾರಿಕೆ ಅಭಿವೃದ್ಧಿಗೂ ಒತ್ತು ನೀಡಿದ್ದ ಅವರು ಭದ್ರಾವತಿ ಉಕ್ಕಿನ ಕಾರ್ಖಾನೆ, ಸಾಬೂನು, ಗಂಧದ ಎಣ್ಣೆ ಮತ್ತು ಮಂಡ್ಯದ ಸಕ್ಕರೆ ಕಾರ್ಖಾನೆಗಳನ್ನು ತೆರೆಯುವ ಮೂಲಕ ಜನರಿಗೆ ಉದ್ಯೋಗ ನೀಡಿದ್ದರು ಎಂದರು.
ತಹಸೀಲ್ದಾರ್ ಶ್ರೀನಿವಾಸ್, ತಾಲೂಕು ಅರಸು ಸಂಘದ ಅಧ್ಯಕ್ಷ ಲಿಂಗರಾಜೇಅರಸ್, ಉಪಾಧ್ಯಕ್ಷ ದೀಪಕ್ ಅರಸ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪ್ರಮೋದ, ಮುಖಂಡರಾದ ಚಾ.ನಂಜುಂಡಮೂರ್ತಿ, ವಕೀಲ ಚೌಡಳ್ಳಿ ಜವರಯ್ಯ, ಪುಟ್ಟಮಾದು, ದೇವರಾಜು, ಸಿಂಧೂ, ಫಣಿಕುಮಾರ್, ಸಂದೀಪ್ ಅರಸ್, ರಾಮು, ಗೋಪಾಲಕೃಷ್ಣ ಅರಸ್, ನಾಗರಾಜು, ಅನುಷಾ, ಶೈಲಾ ಸುಧಾಮಣಿ, ಬೋಮ್ಮನಹಳ್ಳಿ ರಾಮು ಇದ್ದರು.