ಅಶ್ಲೀಲ ಸಿನಿಮಾ ತಯಾರಿಕೆ-ವಿತರಣೆ ಹಗರಣದ ಕಳಂಕದಲ್ಲಿ ರಾಜ್​ ಕುಂದ್ರಾ

Kundra
Published on

ಅಶ್ಲೀಲ ಸಿನಿಮಾ ತಯಾರಿಕೆ ಮತ್ತು ವಿತರಣೆ ಹಗರಣದಲ್ಲಿ ಜುಲೈ 19ರಂದು ಬಂಧಿತರಾದ ರಾಜ್ ಕುಂದ್ರಾ (46) ಸಂಕಷ್ಟಗಳು ಹೆಚ್ಚುತ್ತಿವೆ. ಅವರ ಕಂಪನಿಯ ಸಹೋದ್ಯೋಗಿಗಳೇ ಕುಂದ್ರಾ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ನೀಡುತ್ತಿದ್ದು, ಈ ಮೂಲಕ ರಾಜ್ ಅವ್ಯವಹಾರಗಳು ಬಯಲಾಗತೊಡಗಿವೆ. ಶಿಲ್ಪಾ ಶೆಟ್ಟಿ ಕೂಡ ಈ ಬೆಳವಣಿಗೆಗಳಿಂದ ಅನುಮಾನದ ಕಟಕಟೆಯಲ್ಲಿ ನಿಂತಿದ್ದಾರೆ.

ಹಿನ್ನೆಲೆ: ರಾಜ್ ಕುಂದ್ರಾ ಭಾರತೀಯರಾದರೂ ಹುಟ್ಟಿದ್ದು ಮತ್ತು ಬೆಳೆದಿದ್ದು ಲಂಡನ್​ನಲ್ಲಿ. ಅವರ ತಂದೆ ಬಾಲಕೃಷ್ಣ ಕುಂದ್ರಾ ಪಂಜಾಬ್​ನ ಭಟಿಂಡಾ ಮೂಲದವರು. ಲಂಡನ್​ಗೆ ವಲಸೆ ಹೋಗಿ ಅಲ್ಲಿನ ಹತ್ತಿ ಗಿರಣಿಯಲ್ಲಿ ಉದ್ಯೋಗಿ ಮತ್ತು ಬಸ್ ಕಂಡಕ್ಟರ್ ಆಗಿದ್ದವರು. ನಂತರ ದಿನಸಿ ಅಂಗಡಿ ಇಟ್ಟಿದ್ದ ಮಧ್ಯಮ ವರ್ಗದವರು. ತಂದೆ ನೀಡಿದ 2 ಸಾವಿರ ಪೌಂಡ್​ನಲ್ಲಿ ಪಾಶ್ಮಿನಾ ಶಾಲ್​ಗಳ ವ್ಯಾಪಾರ ಆರಂಭಿಸಿದ ಕುಂದ್ರಾ ನಂತರ ಕೋಟ್ಯಧಿಪತಿಯಾಗಿದ್ದು ರೋಚಕ ಇತಿಹಾಸ. ಲಂಡನ್​ನಲ್ಲೇ ಉದ್ಯಮ ನಡೆಸಿ ಕೊಂಡಿದ್ದ ಕುಂದ್ರಾ, ಅಲ್ಲಿನ ಉದ್ಯಮಿಯೊಬ್ಬರ ಪುತ್ರಿ ಕವಿತಾರನ್ನು ವಿವಾಹವಾಗಿದ್ದರು. ಇವರಿಗೆ ಓರ್ವ ಪುತ್ರಿ ಇದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಸಂಜಾತೆಯಾದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪ್ರೇಮಪಾಶಕ್ಕೆ ಕುಂದ್ರಾ ಒಳಗಾಗಿದ್ದು ಬ್ರಿಟನ್​ನ ಬಿಗ್ ಬಾಸ್ ರಿಯಾಲಿಟಿ ಷೋನಲ್ಲಿ (2007). ನಂತರ ಶಿಲ್ಪಾ ನಡೆಸುತ್ತಿದ್ದ ಫರ್​ಫ್ಯೂಮ್ ವ್ಯವಹಾರಕ್ಕೆ ಕುಂದ್ರಾ ಸಹಾಯ ಮಾಡತೊಡಗಿದರು. ಇವರಿಬ್ಬರ ಕಂಪನಿಗಳು ವಜ್ರದ ವ್ಯಾಪಾರ, ಆಮದು-ರಫ್ತು ವ್ಯವಹಾರದ ಜತೆಗೆ ಬಾಲಿವುಡ್ ಸಿನಿಮಾ ನಿರ್ಮಾಣ ಮಾಡುತ್ತಿತ್ತು. ಯುರೋಪ್​ನಲ್ಲಿ ಸ್ಟೇಜ್ ಷೋಗಳನ್ನು ಆಯೋಜಿಸಲು ಶಿಲ್ಪಾಗೆ ಕುಂದ್ರಾ ನೆರವಾಗುತ್ತಿದ್ದರು. 2009ರಲ್ಲಿ ಇವರಿಬ್ಬರು ವಿವಾಹವಾದರು. ನಂತರವಷ್ಟೆ ಕುಂದ್ರಾ ಭಾರತಕ್ಕೆ ಮರಳಿದ್ದು.

ಉದ್ಯಮಿಯಾದ ಹಾದಿ: ಕುಂದ್ರಾ-ಶಿಲ್ಪಾ ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್) ಪ್ರಾಂಚೈಸಿ ರಾಜಸ್ಥಾನ ರಾಯಲ್ಸ್ ತಂಡದ ಸಹಮಾಲೀಕರಾದರು. ಈ ಮಧ್ಯೆ, ಕುಂದ್ರಾ ಲೇಖಕರಾಗಿಯೂ ಗುರುತಿಸಿಕೊಂಡರು. ನೈಜ ಕಥೆಗಳನ್ನು ಆಧರಿಸಿದ ‘ಹೌ ನಾಟ್ ಟು ಮೇಕ್ ಮನಿ’ ಎಂಬ ಕಾದಂಬರಿಯನ್ನು ಬರೆದರು (ಈಗ ಆರ್ಥಿಕ ವಿಷಯದಲ್ಲೇ ಇವರು ಅಪಖ್ಯಾತಿ ಅಂಟಿಸಿಕೊಂಡಿದ್ದಾರೆ). ಇದನ್ನು ರ್ಯಾಂಡಮ್ ಹೌಸ್ ಪ್ರಕಟಿಸಿತು. ಅಲ್ಲದೆ, 2012ರಲ್ಲಿ ನಟ ಸಂಜಯ್ ದತ್ ಜತೆಗೂಡಿ ಆರಂಭಿಸಿದ ‘ಸೂಪರ್ ಫೈಟ್ ಲೀಗ್’ ಮಾರ್ಷಲ್ ಆರ್ಟ್ಸ್ ಶೈಲಿಯ ಟೂರ್ನಮೆಂಟ್, ನಟ ಅಕ್ಷಯ್ ಕುಮಾರ್ ಜತೆ ಸೇರಿ 2015ರಲ್ಲಿ ಆರಂಭಿಸಿದ ‘ಬೆಸ್ಟ್ ಡಯಲ್ ಟಿವಿ’ ಶಾಪಿಂಗ್ ಚಾನಲ್, 2017ರಲ್ಲಿ ಶುರು ಮಾಡಿದ ‘ಮ್ಯಾಚ್ ಇಂಡಿಯನ್ ಪೋಕರ್ ಲೀಗ್’ಗಳು ಉದ್ಯಮ ವಲಯದಲ್ಲಿ ಕುಂದ್ರಾಗೆ ಹೆಸರು ತಂದುಕೊಟ್ಟವು.

ಕಾನೂನು ಸಂಘರ್ಷ: ಬಾಲಿವುಡ್ ಬೆಡಗಿ ಶಿಲ್ಪಾ ಜತೆ ವಿವಾಹ, ಪುತ್ರ ವಿಯಾನ್ ತುಂಟಾಟ, ಉದ್ಯಮಗಳ ವಿಸ್ತರಣೆಯಿಂದ ಬೀಗುತ್ತಿದ್ದ ಕುಂದ್ರಾ ಮೊದಲ ಬಾರಿಗೆ ಕಾನೂನು ಸಂಘರ್ಷಕ್ಕೆ ಒಳಗಾಗಿದ್ದು, 2013ರಲ್ಲಿ. ಐಪಿಎಲ್ ಬೆಟ್ಟಿಂಗ್ ಹಗರಣ ಕುಂದ್ರಾ ಕಾಲಿಗೆ ಸುತ್ತಿಕೊಂಡಿತು. ತತ್ಪರಿಣಾಮ ಕುಂದ್ರಾ ಕ್ರಿಕೆಟ್ ಸಂಬಂಧಿಸಿದ ಎಲ್ಲ ಚಟುವಟಿಕೆಯಿಂದ ಆಜೀವ ನಿಷೇಧಕ್ಕೆ ಒಳಗಾಗಬೇಕಾಯಿತು. ಆದರೆ, 2018ರಲ್ಲಿ ಕುಂದ್ರಾಗೆ ದೆಹಲಿ ಪೊಲೀಸರಿಂದ ಕ್ಲೀನ್​ಚಿಟ್ ಸಿಕ್ಕಿತು.ಆದರೆ, 2 ಸಾವಿರ ಕೋಟಿ ರೂ. ಮೊತ್ತದ ಕ್ರಿಪ್ಟೊ ಕರೆನ್ಸಿ ವಿಷಯವಾಗಿ ಕುಂದ್ರಾ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಗುರಿಯಾದರು. 2019ರಲ್ಲಿ ದಾವೂದ್ ಇಬ್ರಾಹಿಂ ಸಹಚರನಾದ ಡ್ರಗ್ಸ್ ದಂಧೆಯ ಮಾಜಿ ಡಾನ್ ಇಕ್ಬಾಲ್ ಮಿರ್ಚಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕುಂದ್ರಾ ವಿಚಾರಣೆ ಎದುರಿಸಬೇಕಾಯಿತು.

ಯಶಸ್ಸಿನಿಂದ ಪಾತಾಳಕ್ಕೆ: ಕಳೆದ ವರ್ಷ ರಾಜ್ ಕುಂದ್ರಾ ದಂಪತಿ ಬಾಡಿಗೆ ತಾಯ್ತನದ ಮೂಲಕ ಸಮಿಶಾ ಎಂಬ ಮಗಳನ್ನು ಪಡೆದರು. ಇನ್​ಸ್ಟಾಗ್ರಾಮ್ಲ್ಲಿ ಕುಂದ್ರಾ ಅನುಯಾಯಿಗಳ ಸಂಖ್ಯೆ ಲಕ್ಷಗಟ್ಟಲೇ ಹೆಚ್ಚಾಯಿತು. ಇದೇ ವೇಳೆಗೆ ಕುಂದ್ರಾಗೆ ಕಾನೂನು ಕುಣಿಕೆಗಳು ಬೇರೆ ಬೇರೆ ರೂಪದಲ್ಲಿ ಎರವಾಗತೊಡಗಿದವು. ಕುಂದ್ರಾ ಈ ಹಿಂದೆ ನಿರ್ದೇಶಕರಾಗಿದ್ದ ಸತ್ಯುಗ್ ಗೋಲ್ಟ್ ಕಂಪನಿ ವಿರುದ್ಧ ವಂಚನೆ ಕೇಸ್ ದಾಖಲಾಯಿತು.‘ಬೆಸ್ಟ್ ಡಯಲ್ ಟಿವಿ’ಯ ಟಿಡಿಎಸ್ ಅನ್ನು ವಿಳಂಬವಾಗಿ ಪಾವತಿಸಿ ಪ್ರಕರಣದಲ್ಲಿ ಕುಂದ್ರಾ ಮತ್ತು ಶಿಲ್ಪಾಗೆ ಕೋರ್ಟ್ ಸಮನ್ಸ್ ಜಾರಿಯಾಯಿತು. ಮುಂಬೈನ ಮಾಧ್ ದ್ವೀಪದ ಬಂಗ್ಲೆಯಲ್ಲಿ ಬ್ಲೂ ಫಿಲಂ ಶೂಟಿಂಗ್ ಮಾಡಿದ ಆರೋಪದ ಮೇಲೆ ಕೆಲ ನಟಿಯರು, ನಿರ್ದೇಶಕರು ಇನ್ನಿತರ ಬಂಧನವಾಯಿತು. ಈ ಪೈಕಿ ಕುಂದ್ರಾ ಆಪ್ತನೊಬ್ಬ ಇದ್ದ. ಆತ ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಕುಂದ್ರಾ ವಿರುದ್ಧ ಫೆಬ್ರವರಿಯಲ್ಲಿ ಪ್ರಕರಣ ದಾಖಲಾಯಿತು. ಅವರ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಅಶ್ಲೀಲ ಸಿನಿಮಾಗೆ ಸಂಬಂಧಿಸಿದ ದಾಖಲೆಗಳು, ಎಲೆಕ್ಟ್ರಾನಿಕ್ ಸಾಕ್ಷ್ಯಗಳು ದೊರಕಿದವು. ಇವುಗಳ ಆಧಾರ ಮೇಲೆ ಕುಂದ್ರಾ ಬಂಧನವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net