ಮಧ್ಯಂತರ ಪರಿಹಾರ ಬಿಡುಗಡೆಗೆ ಆಗ್ರಹಿಸಿ ರೈತ ಸಂಘ ಸತ್ಯಾಗ್ರಹ

raita sanga protest infront off dc office
ಶಿವಮೊಗ್ಗ ಡಿಸಿ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಎಸ್.ಶಿವಮೂರ್ತಿ, ಪಿ.ಡಿ.ಮಂಜಪ್ಪ, ಕೆ.ರಾಘವೇಂದ್ರ, ಕಸಟ್ಟಿ ರುದ್ರೇಶ್, ಸಿ.ಚಂದ್ರಪ್ಪ, ಹನುಮಂತಪ್ಪ, ಜ್ಞಾನೇಶ್, ಸುಗಂಧರಾಜು ಇದ್ದರು.
Published on

ಶಿವಮೊಗ್ಗ: ರಾಜ್ಯವನ್ನು ಸಂಪೂರ್ಣ ಬರಗಾಲವೆಂದು ಘೋಷಣೆ ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಮಾಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ರಾಜ್ಯದಲ್ಲಿ ಈ ವರ್ಷ ಕಂಡು ಕೇಳರಿಯದ ಬರಗಾಲ ಎದುರಾಗಿದೆ. ಕೆಲ ಭಾಗದಲ್ಲಿ ಬೆಳೆ ಒಣಗುತ್ತಿದ್ದರೆ, ಮತ್ತೆ ಕೆಲ ಭಾಗದಲ್ಲಿ ಬಿತ್ತನೆಯೇ ಆಗಿಲ್ಲ. ಮಳೆಗಾಲದ ವರ್ಷಾಂತ್ಯ ತಲುಪಿದ್ದು ಬೆಳೆ ನಿರೀಕ್ಷೆ ಕಳೆದುಕೊಂಡಿರುವ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೃಷಿಕರ ಬದುಕು ಅಲ್ಲೋಲ-ಕಲ್ಲೋಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು, ಕೃಷಿ ಕಾರ್ಮಿಕರ ವರ್ತಮಾನದ ಸಂಕಷ್ಟಗಳನ್ನು ನಿರ್ಲಕ್ಷಿಸಿ ಸರ್ಕಾರ ತನ್ನ ಗ್ಯಾರಂಟಿಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಪ್ರತಿಪಕ್ಷಗಳು ಮುಂದಿನ ಚುನಾವಣೆಯ ಸಿದ್ಧತೆಯಲ್ಲಿ ಮತ್ತು ಅಧಿಕಾರ ಹಿಡಿಯುವ ಹವಣಿಕೆಯಲ್ಲಿ ಮಗ್ನವಾಗಿವೆ. ಇಂತಹ ಸಂಕಷ್ಟದಲ್ಲಿ ನಾವೆಲ್ಲರೂ ದೈನಂದಿನ ಬದುಕಿಗಾಗಿ, ಕೃಷಿ ಕಾಯಕದ ಉಳಿವಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ ಪರಿತಪಿಸುವಂತಾಗಿದೆ. ಈ ನಡುವೆ ಬ್ಯಾಂಕ್ ಮತ್ತು ಫೈನಾನ್ಸ್‌ಗಳು ಸಾಲ ವಸೂಲಾತಿಗಾಗಿ ರೈತರನ್ನು ಮತ್ತಷ್ಟು ಹೈರಾಣಾಗಿಸುತ್ತಿವೆ. ಕೃಷಿ ಪಂಪ್‌ಸೆಟ್‌ಗಳನ್ನು ನಂಬಿದ ರೈತರು ಸಮರ್ಪಕ ವಿದ್ಯುತ್ ಸಿಗದೇ ಪರದಾಡುತ್ತಿದ್ದಾರೆ ಎಂದು ದೂರಿದರು.
ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಬೆಳೆ ವಿಮೆ ಪಡೆದ ಕಂಪನಿಗಳು ತಕ್ಷಣವೇ ರೈತರಿಗೆ ಮಧ್ಯಂತರ ಪರಿಹಾರ ಕೊಡಬೇಕು. ಸೆ.6ರಂದು ಭದ್ರಾ ಕಾಡಾ ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನವನ್ನೇ ಮುಂದುರಿಸಬೇಕು. ಶರಾವತಿ ಮುಳುಗಡೆ ಸಂತ್ರಸ್ತರಿಗೆ 9,129 ಎಕೆರೆ ಜಮೀನು ಡಿನೋಟಿಫೈ ಆಗಿ ಹಕ್ಕುಪತ್ರ ನೀಡಿದ್ದು ಹಕ್ಕುಪತ್ರ ಹೊಂದಿರುವ ರೈತರ ಸ್ವಾಧೀನಾನುಸಾರ ಪೋಡಿ ದುರಸ್ತಿ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಟಿ.ಎಂ.ಚಂದ್ರಪ್ಪ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ಪಿ.ಡಿ.ಮಂಜಪ್ಪ, ಕೆ.ರಾಘವೇಂದ್ರ, ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ರುದ್ರೇಶ್, ಶಿವಮೊಗ್ಗ ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ, ಹನುಮಂತಪ್ಪ, ಜ್ಞಾನೇಶ್, ಸುಗಂಧರಾಜು ಮತ್ತಿತರರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net